ಬೆಂಗಳೂರು: ಇರಾನ್ ವಶದಲ್ಲಿಟ್ಟುಕೊಂಡ ಸರಕು ಸಾಗಣೆ ಹಡಗುನಲ್ಲಿರುವ 17 ಜನ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ಪ್ರಯತ್ನ ನಡೆದಿದೆ. ಈಗಾಗಲೇ ಇರಾನ್ ವಿದೇಶಾಂಗ ಸಚಿವರ ಜತೆಗೆ ಮಾತನಾಡಿರುವೆ. ನಿಮ್ಮ ಭಾವನೆ ಅರ್ಥವಾಗುತ್ತದೆ ಎಂದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ನಿಟ್ಟಿನಲ್ಲಿ ಉಭಯ ದೇಶಗಳ ರಾಯಭಾರಿ ಕಚೇರಿಗಳು ನಿರಂತರ ಸಂಪರ್ಕದಲ್ಲಿವೆ ಎಂದು ಡಾ.ಎಸ್.ಜೈಶಂಕರ್ ಹೇಳಿದರು.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸೋಮವಾರ ಸುದ್ಸಿಗಾರರ ಜತೆಗೆ ಮಾತನಾಡಿದ ಅವರು ಇಸ್ರೇಲ್- ಇರಾನ್ ನಡುವಿನ ಬಿಕ್ಕಟ್ಟು ಮಧ್ಯಪ್ರಾಚ್ಯದಲ್ಲಿ ಸೂಕ್ಷ್ಮ ಪರಿಸ್ಥಿತಿ ಸೃಷ್ಟಿಸಿದೆ. ತ್ವೇಷದ ವಾತಾವರಣ ತಹಬಂದಿಗೆ ತರಲು ಎಲ್ಲ ದೇಶಗಳು ಪ್ರಯತ್ನಿಸುತ್ತಿವೆ. ಇರಾನ್ ಹಾಗೂ ಇಸ್ರೇಲ್ ಜತೆಗೆ ನಿಕಟತೆ ಸಾಧಿಸಿ ತಿಳಿಗೊಳಿಸಲು ಶ್ರಮಿಸುತ್ತಿದ್ದೇವೆ ಎಂದರು.
ಮಧ್ಯಪ್ರಾಚ್ಯದಲ್ಲಿ 90 ಲಕ್ಷ ಭಾರತೀಯರಿದ್ದಾರೆ. ಹಾಗೆಯೇ ಭಾರತದಂತೆ ಬೇರೆ ಅನೇಕ ದೇಶಗಳು ಈ ಪ್ರದೇಶವನ್ನು ಒಂದಿಲ್ಲೊಂದು ಕಾರಣಕ್ಕೆ ಅವಲಂಬಿಸಿವೆ. ಜಾಗತಿಕವಾಗಿ ವ್ಯತಿರಿಕ್ತ ಪರಿಣಾಮಬೀರಲಿದೆ ಎಂದು ಅರಿತು ಬಿಕ್ಕಟ್ಟು ಶಮನ ಮಾಡಲು ಎಲ್ಲ ದೇಶಗಳು ಕೈಜೋಡಿಸಿವೆ ಎಂದುಹೇಳಿದರು.
ಭಾರತದ ಒಳಗೆ- ಹೊರಗೆ ಪ್ರತಿಯೊಬ್ಬ ಭಾರತೀಯನ ರಕ್ಷಣೆ ಮೋದಿ ಗ್ಯಾರಂಟಿಯಾಗಿದೆ. ಯೂಕ್ರೇನ್ ಯುದ್ಧ ನೆಲದಿಂದ ಭಾರತೀಯರನ್ನು ಕರೆ ತಂದ ಆಪರೇಷನ್ ಗಂಗಾ, ಸುಡಾನ್ ಬಿಕ್ಕಟ್ಟಿನಿಂದ ಪಾರು ಮಾಡಿದ ಆಪರೇಷನ್ ಮುಂತಾದವುಗಳನ್ನು ಡಾ.ಎಸ್.ಜೈಶಂಕರ್ ನಿದರ್ಶನಗಳನ್ನು ನೀಡಿ, ಮೋದಿ ಗ್ಯಾರಂಟಿಯೇ ನೈಜ ಹಾಗೂ ಶಾಶ್ವತ ಗ್ಯಾರಂಟಿ ಎಂದು ಸಮರ್ಥಿಸಿಕೊಂಡರು.