ಶಿವಮೊಗ್ಗ: ಪ್ರಸ್ತುತ ರಾಜಕೀಯ ಅಧಿಕಾರಕ್ಕಿಂತ ಶಿಕ್ಷಣದ ಅಧಿಕಾರಕ್ಕೆ ಶಕ್ತ್ತಿ ಹೆಚ್ಚು. ಹಾಗಾಗಿ ಅಂತಹ ಅಧಿಕಾರವನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಕಾಗಿನೆಲೆ ಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಕರೆ ನೀಡಿದರು.
ಅಂಬೇಡ್ಕರ್ ಭವನದಲ್ಲಿ ಹಾಲುಮತ ಸಮಾಜದಿಂದ ಭಾನುವಾರ ಹಾಲುಮತ ಜಾಗೃತಿ ಸಭೆ, ಪ್ರತಿಭಾ ಪುರಸ್ಕಾರ ಹಾಗೂ ಹಾಲುಮತಚೇತನ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪ್ರತಿ ಐದು ವರ್ಷಗಳಿಗೊಮ್ಮೆ ರಾಜಕೀಯ ಅಧಿಕಾರ ಬದಲಾಗುತ್ತದೆ. ಅದನ್ನು ಪಡೆದುಕೊಳ್ಳಲು ಅನೇಕ ತಂತ್ರಗಳನ್ನೇ ನಡೆಸಬೇಕಾಗುತ್ತದೆ. ಆದರೆ ಶಿಕ್ಷಣದ ಅಧಿಕಾರ ಜೀವಿತಾವಧಿವರೆಗೂ ಇರುತ್ತದೆ. ಭಾರತದ ಸಂವಿಧಾನವು ಎಲ್ಲ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಿದೆ. ಅದನ್ನು ಪಾಲನೆ ಮಾಡಲು ಸನ್ಮಾರ್ಗದಲ್ಲಿ ನಡೆಯಬೇಕಿದೆ ಎಂದರು.
ಯಾವುದೇ ಕಾರಣಕ್ಕೂ ತಮ್ಮ ಮಕ್ಕಳನ್ನು ಬೇರೆ ಮಕ್ಕಳ ಪಾಲಕರ ಎದುರು ನಿಂದನೆ ಮಾಡಬಾರದು. ಮಕ್ಕಳ ಎದುರು ಋಣಾತ್ಮಕ ಮಾತುಗಳನ್ನಾಡಬಾರದು. ಅವರಲ್ಲಿ ಉತ್ಸಾಹ ಬರುವಂತೆ ಪ್ರೋತ್ಸಾಹ ನೀಡಬೇಕು. ಅಂಕ ಕಡಿಮೆ ಪಡೆದರೂ ಸ್ಪೂರ್ತಿ ಮತ್ತು ಧೈರ್ಯ ತುಂಬಬೇಕು ಎಂದು ಸಲಹೆ ನೀಡಿದರು.
ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಮಾತನಾಡಿದರು. ಶಿಕಾರಿಪುರದ ನಗರದ ಮಹಾದೇವಪ್ಪ ಅವರಿಗೆ ಹಾಲುಮತ ಚೇತನ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮುಖ್ಯಮಂತ್ರಿ ಕಚೇರಿ ವಿಶೇಷಾಧಿಕಾರಿ ಮಲ್ಲೇಶಪ್ಪ, ತಹಸೀಲ್ದಾರ್ ಮಲ್ಲೇಶಪ್ಪ ಪೂಜಾರ್, ಸಮಾಜದ ಹಿರಿಯ ಮುಖಂಡ ಪಿ.ಮೈಲಾರಪ್ಪ, ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಸಮಾಜದ ಮುಖಂಡ ಮೈಲಾರಪ್ಪ, ವಾಣಿ ನಿರಂಜನ್, ಡಾ. ಸೌಮ್ಯಾ ಪ್ರಸನ್ನ, ಶರತ್, ರೂಪಾ ಇಕ್ಕೇರಿ, ಸ್ವಪ್ನ, ದೊಡ್ಡಪ್ಪ, ಜಯಪ್ಪ, ಗಣೇಶ ಬಿಳಗಿ ಉಪಸ್ಥಿತರಿದ್ದರು.