ಶಿಕಾರಿಪುರದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಆಯೋಜಿಸಿದ್ದ ಕುಮದ್ವತಿ ಸಾಂಸ್ಕೃತಿಕ ಉತ್ಸವವನ್ನು ಡಿಡಿಪಿಐ ಎಸ್.ಆರ್.ಮಂಜುನಾಥ್ ಉದ್ಘಾಟಿಸಿದರು. ಎಂ.ಬಿ.ಶಿವಕುಮಾರ್, ಲೋಕೇಶಪ್ಪ, ಬಿ.ಆರ್.ಸುಭಾಷ್, ತೇಜಸ್ವಿನಿ ರಾಘವೇಂದ್ರ, ಡಾ. ಜಿ.ಎಸ್.ಶಿವಕುಮಾರ್ ಇತರರಿದ್ದರು.  
ನ್ಯೂಸ್

ಶಿಕ್ಷಣಕ್ಕೆ ಸಂಸ್ಕಾರದ ಬುನಾದಿ ಅಗತ್ಯ

ಶಿಕಾರಿಪುರ: ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆಗೆ ತಕ್ಕಂತೆ ನಾವು ಸಹ ಬದಲಾಗಬೇಕು. ಇದೊಂದು ಸ್ಪರ್ಧಾ ಜಗತ್ತು. ಆದ್ದರಿಂದ ಸಾಧಕರು ಮತ್ತು ಪರಿಶ್ರಮಿಗಳಿಗೆ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಡಿಡಿಪಿಐ ಎಸ್.ಆರ್.ಮಂಜುನಾಥ್ ಹೇಳಿದರು.

ಪಟ್ಟಣದ ಏಕಲವ್ಯ ಸ್ಟೇಡಿಯಂನಲ್ಲಿ ಶನಿವಾರ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಆಯೋಜಿಸಿದ್ದ ಕುಮದ್ವತಿ ಸಾಂಸ್ಕೃತಿಕ ಉತ್ಸವದಲ್ಲಿ ಮಾತನಾಡಿದ ಅವರು, ಸಂಸ್ಕಾರ ಎಂಬ ಅಡಿಪಾಯದಲ್ಲಿ ಶಿಕ್ಷಣ ಇರಬೇಕು. ಮಾನವೀಯ ಮೌಲ್ಯಗಳ ಜತೆಗಿರಬೇಕು. ಸಾಮಾಜಿಕ ಕಳಕಳಿಯ ರೂಪವಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ಸಹೃದಯತೆ ಶಿಕ್ಷಣದ ಮೊದಲ ಪಾಠ. ನಾವು ಸದಾ ಸ್ನೇಹದ ಬುತ್ತಿ ಹಂಚಬೇಕು. ಪರಸ್ಪರ ವಿಶ್ವಾಸ, ನಂಬಿಕೆಗಳಿಂದ ಕೂಡಿರಬೇಕು. ಕೇವಲ ಪಠ್ಯದಲ್ಲಿರುವುದು ಶಿಕ್ಷಣವಲ್ಲ. ಅದರಾಚೆ ಕ್ರೀಡೆ, ಅಭಿನಯ, ಸಂಗೀತ, ಸಾಹಿತ್ಯ, ನೃತ್ಯ ಮುಂತಾದವುಗಳ ಸಾಂಸ್ಕೃತಿಕ ಲೋಕವೇ ತೆರೆದುಕೊಂಡಿದೆ. ಎಲ್ಲದರಲ್ಲಿ ನಾವು ಇದ್ದಾಗ ನಮ್ಮ ಶಿಕ್ಷಣ ಪರಿಪೂರ್ಣವಾಗುತ್ತದೆ. ಈ ಮಣ್ಣಿನ ಸಂಸ್ಕೃತಿ, ಸಂಸ್ಕಾರ, ಪರಂಪ ರೆಗಳ ಅರಿವು ನಮಗಿರಬೇಕು. ಇಲ್ಲಿನ ಸತ್ವವನ್ನು ಬಳಸಿಕೊಂಡು ನಮ್ಮ ಶಿಕ್ಷಣ ಸಾಗಬೇಕು ಎಂದು ಹೇಳಿದರು.

ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಶ್ರೇಷ್ಠ ಮಟ್ಟದ ಶಿಕ್ಷಣ ಲಭ್ಯವಾಗಬೇಕು. ಈ ದಿಸೆಯಲ್ಲಿ ಆರಂಭವಾದ ಸಂಸ್ಥೆಯಲ್ಲಿ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪೂರೈಸುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದರು.

ಬಿಇಒ ಕೆ.ಬಿ.ಲೋಕೇಶಪ್ಪ ಮಾತನಾಡಿ, ಶಿಕ್ಷಣ ಉತ್ತಮ ಸಮಾಜ ನಿರ್ಮಾಣ ಮಾಡಬಲ್ಲದು. ಅಲ್ಲದೆ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಮಕ್ಕಳಲ್ಲಿ ಹಠ, ಸಿಟ್ಟು, ಮಾನಸಿಕ ಉದ್ವೇಗಗಳು ಹೆಚ್ಚಾಗುತ್ತಿವೆ. ಇನ್ನೊಬ್ಬರ ಮಸ್ಯೆಗಳಿಗೆ ಸ್ಪಂದಿಸುವ ಗುಣಗಳು ಕಡಿಮೆಯಾಗಿ ಕೇವಲ ವೈಯಕ್ತಿಕ ಹಿತಾಸಕ್ತಿ ಕಡೆಗೆ ಗಮನ ಹರಿಸುತ್ತಿದ್ದಾರೆ. ಹಾಗಾಗಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಹುಟ್ಟುಹಾಕುವ ಅಗತ್ಯವಿದೆ ಎಂದು ತಿಳಿಸಿದರು.

ಆನ್‌ಲೈನ್ ಗೇಮ್, ಮೊಬೈಲ್‌ಗಳಿಂದ ಮಕ್ಕಳನ್ನು ದೂರ ಇಡಬೇಕು. ಮನೆಯಲ್ಲಿ ಅಮ್ಮ ಹೇಳಿಕೊಡುವ ವಿದ್ಯೆ ಬಹಳ ಪ್ರಮುಖವಾದುದು. ಓದುವಾಗ ಮಕ್ಕಳಿಗೆ ಟಿವಿ ಗೀಳನ್ನು ಕಡಿಮೆ ಮಾಡಿ ಓದಿನ ಕಡೆ ಹೆಚ್ಚು ಒಲವು ಮೂಡಿಸಬೇಕಾಗಿದೆ. ಪಾಲಕರು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಓದಿನ ಸಂದರ್ಭದಲ್ಲಿ ಕಷ್ಟದ ಅರಿವು ಮೂಡಿಸಬೇಕು. ಶಾಲೆಯಲ್ಲಿ ಮಾತ್ರವಲ್ಲದೆ ಮನೆಯಲ್ಲಿ ಸಾಂಸ್ಕೃತಿಕವಾಗಿ ಬೆಳೆಯುವಂತೆ ಮಾಡುವುದು ಶಿಕ್ಷಕರ ಮತ್ತು ಪಾಲಕರ ಕರ್ತವ್ಯ ಎಂದರು.

ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಬಿ.ಶಿವಕುಮಾರ್ ಬಹುಮಾನ ವಿತರಿಸಿದರು. ಶಾಲೆಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಆರ್.ಸುಭಾಷ್, ಸಂಸ್ಥೆ ಅಧ್ಯಕ್ಷ ಎಂ.ಬಿ.ಶಿವಕುಮಾರ್, ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್, ಎಚ್.ಡಿ.ಪ್ರಶಾಂತ್, ಸಂಸ್ಥೆಯ ಸಮನ್ವಯಾಧಿಕಾರಿ ಕೆ.ಕುಬೇರಪ್ಪ ಇತರರಿದ್ದರು.