ಕಳಸ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸೃಜನಾ-2023 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕಲಾಕೃತಿಯನ್ನು ವೀಕ್ಷಿಸುತ್ತಿರುವ ಗಣ್ಯರು. 
ನ್ಯೂಸ್

ವಿದ್ಯಾರ್ಥಿಗಳಿಗೆ ವಿದ್ಯೆಯೇ ಬಂಡವಾಳ

ಜಿ.ಹೆಚ್. ಧನ್ಯಕುಮಾರ್

ಕಳಸ: ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ ವಿದ್ಯೆ ಮಾತ್ರ ಬಂಡವಾಳವಾಗಿದ್ದು, ವಿದ್ಯೆಯನ್ನು ಬಳಸಿಕೊಂಡು ನಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ಪತ್ರಕರ್ತ ರವಿ ಕೆಳಂಗಡಿ ಹೇಳಿದರು.
ಕಳಸ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಸೃಜನಾ 2023 ಮತ್ತು 2022-23ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸರ್ಕಾರಿ ಕಾಲೇಜುಗಳಿಗೆ ಹೆಚ್ಚಾಗಿ ಬಡತನದ ವಿದ್ಯಾರ್ಥಿಗಳು ಮಾತ್ರ ಬರುತ್ತಾರೆ. ಈ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಹಣ ಇರುವುದಿಲ್ಲ . ಅವರಿಗೆ ಶಿಕ್ಷಣವೇ ಬಂಡವಾಳ. ಆದ್ದರಿಂದ ಐದು ವರ್ಷದ ಕಾಲೇಜು ಜೀವನದಲ್ಲಿ ಶ್ರಮಪಟ್ಟು ಕಲಿತರೆ ಮಾತ್ರ ಮುಂದಿನ 50 ವರ್ಷ ನಾವು ಉತ್ತಮ ಜೀವನ ನಡೆಸಲು ಸಾಧ್ಯ ಎಂದರು.
ಕಳಸ ಗ್ರಾಪಂ ಅಧ್ಯಕ್ಷೆ ಉಷಾ ವಿಶ್ವನಾಥ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಅಗತ್ಯವಾಗಿದ್ದು, ಸೃಜನಾದ ಮೂಲಕ ನಾನಾ ರೀತಿಯ ಕಲಾಕೃತಿಗಳನ್ನು ಮಾಡಿ ತಮ್ಮಲ್ಲಿರುವ ಪ್ರತಿಭೆ ಹೊರಹಾಕಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಕೃತಕವಾಗಿ ನಿರ್ಮಿಸಿದ ವಿವಿಧ ರೀತಿಯ ಕಲಾಕೃತಿಗಳು ಗಮನ ಸೆಳೆದವು. ರುಚಿಯಾವ ವಿವಿಧ ರೀತಿಯ ತಿಂಡಿ, ತಿನಿಸುಗಳ ಪ್ರದರ್ಶನ ಮತ್ತು ಸ್ಪರ್ಧೆ ವೀಕ್ಷಿಸಲು ಬಂದ ಸಾರ್ವಜನಿಕರು ಬಾಯಿ ಚಪ್ಪರಿಸಿದರು. ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡಾ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಾಚಾರ್ಯ ವಿನಯ ಕುಮಾರ್ ಶೆಟ್ಟಿ, ಕಳಸ ಠಾಣಾಧಿಕಾರಿ ನಿತ್ಯಾನಂದ ಗೌಡ, ತಾಪಂ ಮಾಜಿ ಅಧ್ಯಕ್ಷ ರಾಜೇಂದ್ರ ಹೆಬ್ಬಾರ್, ಪಾಲಕರ ಸಮಿತಿ ಅಧ್ಯಕ್ಷ ಅಜಿತ್ ಪ್ರಸಾದ್ ಜೈನ್, ಸಂಶುದ್ದೀನ್, ದಿನೇಶ್ ಗೌಡ, ಉಪನ್ಯಾಸಕ ಡಾ.ಅದಿತ್ಯ ಆಡಿಗ, ಸುಧೀರ್ ಜೈನ್, ವಿಶು ಕುಮಾರ್, ನಿವೇದಿತಾ, ಸೋಮಶೇಖರ, ಸಂತೋಷ್ ಇದ್ದರು.