ಕಳಸ: ಮನೆಯೇ ಮೊದಲ ಪಾಠಶಾಲೆ ಎಂಬಂತೆ ಮಕ್ಕಳಿಗೆ ಬಾಲ್ಯದಲ್ಲಿ ತಾಯಿಯಿಂದ ಸಿಗುವ ಶಿಕ್ಷಣ ಬಹಳ ಪ್ರಭಾವ ಬೀರುತ್ತದೆ ಎಂದು ಕೆಪಿಎಸ್ ಪಿಯು ಕಾಲೇಜು ಪ್ರಾಚಾರ್ಯ ಅನಂತ ಪದ್ಮನಾಭ ಹೇಳಿದರು.
ಪಟ್ಟಣದ ಅನ್ನಪೂರ್ಣೇಶ್ವರೀ ಮಹಿಳಾ ಮಂಡಳಿಯಿಂದ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ಕಲಿಸುವ ಜತೆಗೆ ಆತ್ಮವಿಶ್ವಾಸವನ್ನು ಬೆಳೆಸಿ ಜೀವನದ ಮೌಲ್ಯ ತಿಳಿಸಿಕೊಡಬೇಕು ಎಂದು ಹೇಳಿದರು.
ಮಂಡಳಿ ಅಧ್ಯಕ್ಷೆ ಸುಜಯಾ ಸದಾನಂದ ಮಾತನಾಡಿ, ಬಾಲ್ಯದಲ್ಲಿ ಅಕ್ಷರವನ್ನು ಕಲಿಸಿ ಜೀವನದಲ್ಲಿ ಒಬ್ಬ ಶ್ರೇಷ್ಠ ವ್ಯಕ್ತಿಯಾಗಲು ಕಾರಣಕರ್ತರಾದವರು ಶಿಕ್ಷಕರು. ಹಾಗಾಗಿ ಸಮಾಜದಲ್ಲಿ ಶಿಕ್ಷಕರಿಗೆ ಅತ್ಯುನ್ನತ ಸ್ಥಾನವಿದೆ. ಉತ್ತಮ ಸಮಾಜ ನಿರ್ಮಾಣವಾಗಲು ಒಬ್ಬ ಶಿಕ್ಷಕನಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಮತ್ತು ಹಾಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಿಕ್ಷಕರಿಗೆ ಕೆಲ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡಲಾಯಿತು. ರಕ್ಷಾಬಂಧನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಿವೃತ್ತ ಶಿಕ್ಷಕಿ ಐರಿನ್ ಡಿಸೋಜ, ಪ್ರಬೋಧಿನಿ ಶಾಲೆ ಮಂಡಳಿ ಸದಸ್ಯೆ ವೀಣಾ ರಾಘವೇಂದ್ರ, ಮಹಿಳಾ ಮಂಡಳಿ ಸದಸ್ಯರಾದ ಆಶಾ ರಾಘವೇಂದ್ರ, ಕಲ್ಪನಾ ಅಜಿತ್, ಜಮಿಲಾ ರಫೀಕ್, ಕಿರಣ ಬ್ರಹ್ಮದೇವ ಇದ್ದರು.