ಬೆಂಗಳೂರು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷಕ್ಕೆ (2024-25) 1ರಿಂದ 10ನೇ ತರಗತಿಗೆ ಅವಶ್ಯವಿರುವ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಮತ್ತು ದಿನಚರಿಗಳನ್ನು ಬೇಡಿಕೆಗೆ ಅನುಗುಣವಾಗಿ ಸ್ಯಾಟ್ಸ್ ತಂತ್ರಾಂಶದಲ್ಲಿ ಬೇಡಿಕೆ ಸಲ್ಲಿಸುವಂತೆ ಕರ್ನಾಟಕ ಪಠ್ಯಪುಸ್ತಕ ಸಂಘವು ಎಲ್ಲ ಶಾಲೆಗಳಿಗೆ ತಿಳಿಸಿದೆ
ಮಾನ್ಯತೆ ಪಡೆದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ತಮ್ಮ ಬೇಡಿಕೆಗಳನ್ನು ಡಿ.18ರಿಂದ 2024ರ ಜ.8ರೊಳಗೆ ಸಲ್ಲಿಸಬೇಕು. ಸ್ಯಾಟ್ಸ್‌ನಲ್ಲಿ ಸಲ್ಲಿಸುವ ಬೇಡಿಕೆಗಳನ್ನು ಮಾತ್ರ ಪರಿಗಣಿಸಲಾಗುವುದು. ಭೌತಿಕವಾಗಿ ಸಲ್ಲಿಸುವ ಮನವಿಗಳನ್ನು ಪರಿಗಣಿಸುವುದಿಲ್ಲ. ಖಾಸಗಿ ಶಾಲೆಗಳು ತಮ್ಮ ಬೇಡಿಕೆಗಳನ್ನು ಸಲ್ಲಿಸುವ ವೇಳೆ ಶೇ.10 ಮೊತ್ತವನ್ನು ಪಾವತಿಸಬೇಕು. ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಹಂತದಲ್ಲಿ ಪರಿಶೀಲಿಸಿ ಒಟ್ಟು ಶಾಲೆಗಳ ನಿಖರವಾದ ಮಾಹಿತಿಯನ್ನು ಒಳಗೊಂಡ ಪಟ್ಟಿಯನ್ನು ಸಲ್ಲಿಸುವಂತೆ ಸಂಘದ ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿದ್ದಾರೆ.
ಶಿಕ್ಷಕರ ಮಾಹಿತಿ ಅಪ್‌ಡೇಟ್ ಮಾಡಿ
ರಾಜ್ಯದಲ್ಲಿ ಪ್ರಸ್ತುತ ಖಾಲಿ ಇರುವ ಅವಧಿ ಮುಗಿದು ತೆರವಾಗಿರುವ ಸಿಆರ್‌ಪಿ, ಬಿಆರ್‌ಪಿ ಮತ್ತು ಇಸಿಒಗಳ ನೇಮಕಾತಿಗೆ ಪರೀಕ್ಷೆ ನಡೆಸಲು ಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಇತ್ತೀಚಿನ ಸೇವಾ ವಿವರಗಳನ್ನು ಪರಿಶೀಲಿಸಿ ಇಇಡಿಎಸ್ (ಶಿಕ್ಷಕ ಮಿತ್ರ) ತಂತ್ರಾಂಶದಲ್ಲಿ ಅಪ್‌ಡೇಟ್ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.
ಒಂದು ವೇಳೆ ಶಿಕ್ಷಕರು ಮಾಹಿತಿ ನೀಡದಿದ್ದರೆ ಪರೀಕ್ಷೆಯಿಂದ ವಂಚಿತರಾಗುವ ಸಾಧ್ಯತೆಗಳಿರುತ್ತವೆ. ಈ ಹಿನ್ನೆಲೆಯಲ್ಲಿ ಮಾಹಿತಿ ನೀಡಬೇಕು. ಮಾಹಿತಿಯು ವ್ಯತ್ಯಾಸವಾದಲ್ಲಿ ಸಂಬಂಧಿಸಿದ ಬಟವಾಡೆ ಅಧಿಕಾರಿಗಳನ್ನೇ ಹೊಣೆಕಾರರನ್ನಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.