ನ್ಯೂಸ್

ವಿದೇಶದಲ್ಲಿ ಶಿಕ್ಷಣ, ನೌಕ್ರಿ!; ವಿ.ವಿ.ಗಳ ಜತೆ ಒಪ್ಪಂದ, ಇದೇ ಶೈಕ್ಷಣಿಕ ವರ್ಷದಿಂದ ಜಾರಿ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಉನ್ನತ ವ್ಯಾಸಂಗದಲ್ಲಿ ಸದಾ ಒಂದಿಲ್ಲೊಂದು ಹೊಸ ಹೊಸ ಪ್ರಯೋಗ ಮಾಡುತ್ತಿರುವ ರಾಜ್ಯ ಸರ್ಕಾರ ಡಿಪ್ಲೊಮಾ ಬಳಿಕ ಇದೀಗ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ವಿದೇಶಿ ವಿಶ್ವವಿದ್ಯಾಲಯದ ಪ್ರಮಾಣಪತ್ರ ಸಿಗುವಂತೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಮತ್ತೊಂದು ಪ್ರಯತ್ನಕ್ಕೆ ಸಜ್ಜಾಗುತ್ತಿದೆ. ಬಿಇ, ಬಿಕಾಂ, ಬಿಸಿಎ, ಬಿಬಿಎಂ, ಬಿಎ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ರೀತಿಯಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ಡಿಪ್ಲೊಮಾ ವಿದ್ಯಾರ್ಥಿಗಳಿಗಾಗಿ ಇಂತಹ ಕಾರ್ಯಕ್ರಮ ಜಾರಿಗೆ ತರಲಾಗಿದೆ.

ಅಂತಿಮ ಹಂತದಲ್ಲಿ: ಅವಳಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿದೇಶಿ ವಿಶ್ವವಿದ್ಯಾಲಯಗಳ ಜತೆ ಮಾತುಕತೆ ಬಹುತೇಕ ಅಂತಿಮವಾಗಿದೆ. ಶೀಘ್ರ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ.

ಯಾವಾಗ ಜಾರಿ?: 2022-23ರ ಶೈಕ್ಷಣಿಕ ವರ್ಷದಿಂದಲೇ ಯೋಜನೆ ಜಾರಿಗೆ ತರುವುದು ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ಉದ್ದೇಶವಾಗಿದೆ.

ಎಷ್ಟಾಗಲಿದೆ ವೆಚ್ಚ?: ಅತ್ಯಂತ ಕಡಿಮೆ ಪ್ರಮಾಣದಲ್ಲಿ ಶುಲ್ಕ ವಿಧಿಸುವುದಾಗಿ ವಿದೇಶಿ ವಿವಿಗಳು ಭರವಸೆ ನೀಡಿವೆ. ಒಟ್ಟು ವೆಚ್ಚ ಎಷ್ಟಾಗುತ್ತದೆಯೋ ಅದರ ಶೇ.10ನ್ನು ವಿದ್ಯಾರ್ಥಿಗಳು ಭರಿಸಬೇಕಾಗುತ್ತದೆ.

ಸಂಪಾದನೆ ಸಾಧ್ಯತೆ: ವ್ಯಾಸಂಗದ ಅವಧಿಯಲ್ಲಿ ಹಾಗೂ ಮುಗಿದ ನಂತರ ದುಡಿಮೆ ಮಾಡುವುದರಿಂದ ಕನಿಷ್ಠ -ಠಿ;40 ಲಕ್ಷಗಳಿಂದ 1 ಕೋಟಿ ರೂ. ತನಕ ಗಳಿಸಲು ಅವಕಾಶಗಳಿವೆ ಎಂದು ಮೂಲಗಳು ಹೇಳುತ್ತವೆ.

ಇಲಾಖೆ ನಿರ್ವಹಣೆ: ಡಿಪ್ಲೊಮಾದಲ್ಲಿ ಪೂರ್ಣ ವೆಚ್ಚವನ್ನು ಸರ್ಕಾರವೇ ವೆಚ್ಚ ಭರಿಸುತ್ತಿದೆ. ಆದರೆ ಈ ಕಾರ್ಯಕ್ರಮದಲ್ಲಿ ಸರ್ಕಾರ ಭರಿಸುತ್ತಿಲ್ಲ. ಬದಲಾಗಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಗಳಲ್ಲಿ ಚರ್ಚೆ ಮಾಡಲಾಗುತ್ತಿದೆ. ಅಲ್ಲಿ ಈಗಾಗಲೇ ಪೂರ್ಣ ಪ್ರಮಾಣದಲ್ಲಿ ವಿದೇಶಕ್ಕೆ ವ್ಯಾಸಂಗ ಮಾಡಲು ಹೋಗುವವರಿಗೆ ನೆರವು ನೀಡಲಾಗುತ್ತದೆ. ಅದನ್ನು ಅವಳಿ ಕಾರ್ಯಕ್ರಮಕ್ಕೂ ವಿಸ್ತರಣೆ ಮಾಡುವಂತೆ ಕೋರಲಾಗುತ್ತಿದೆ.

ಬ್ಯಾಂಕ್ ಸಾಲವೂ ಉಂಟು: ಹಿಂದುಳಿದವರು, ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಇನ್ನುಳಿದವರಿಗೆ ಬ್ಯಾಂಕ್​ಗಳ ಮೂಲಕ ಸುಲಭವಾಗಿ ಶೈಕ್ಷಣಿಕ ಸಾಲ ಸಿಗುವಂತೆ ನೋಡಿಕೊಳ್ಳಲಾಗುತ್ತದೆ.

ಪಾರದರ್ಶಕ ಆಯ್ಕೆ: ಎಷ್ಟು ವಿದ್ಯಾರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಬೇಕೆಂಬುದು ಇನ್ನೂ ನಿರ್ಧಾರವಾಗಿಲ್ಲ. ವಿದೇಶಿ ವಿವಿಗಳ ಜತೆ ಒಡಂಬಡಿಕೆಗೆ ಸಹಿ ಹಾಕುವ ವೇಳೆಗೆ ಪ್ರತಿ ಕೋರ್ಸ್​ಗೆ ಎಷ್ಟು ವಿದ್ಯಾರ್ಥಿಗಳಿರಬೇಕೆಂಬುದು ಅಂತಿಮವಾಗಲಿದೆ.

ಸರ್ಕಾರಿ ಕಾಲೇಜು ವಿದ್ಯಾರ್ಥಿಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಜ್ಜುಗೊಳಿಸುವ ಸಲುವಾಗಿ ಅಮೆರಿಕದ ವಿವಿಗಳ ಜತೆ ಒಡಂಬಡಿಕೆ ಮಾಡಿಕೊಂಡು ಟ್ವಿನ್ನಿಂಗ್ ಕಾರ್ಯಕ್ರಮ ಜಾರಿಗೆ ತರುತ್ತಿದ್ದೇವೆ. ಇದೊಂದು ಹೊಸ ಪ್ರಯೋಗವಾಗಿದೆ. ರ್ಚವಿತಚರಣದಂತೆ ಹಳೆಯ ಪದ್ಧತಿಗೆ ಅಂಟಿಕೊಳ್ಳದೆ ಹೊಸ ಸ್ಪರ್ಧೆಗೆ ತೆರೆದುಕೊಳ್ಳಬೇಕು ಅಲ್ಲವೇ? | ಡಾ. ಸಿ.ಎನ್. ಅಶ್ವತ್ಥನಾರಾಯಣ ಉನ್ನತ ಶಿಕ್ಷಣ ಸಚಿವ
ಯಾವ ಯಾವ ವಿವಿಗಳ ಜತೆ ಒಪ್ಪಂದ
  • ಅಥೆನ್ಸ್ ಸ್ಟೇಟ್ ವಿವಿ
  • ಪೆನ್ಸಿಲ್ವೇನಿಯಾದ ಯಾರ್ಕ್ ಕಾಲೇಜು
  • ಹ್ಯಾರೀಸ್​ಬರ್ಗ್ ವಿವಿ
  • ಇಂಡಿಯಾನ ವಿವಿ
  • ಹ್ಯೂಸನ್ ವಿವಿ

ಉಪಯೋಗಗಳೇನು?

  • ಇಲ್ಲಿ ಅಧ್ಯಯನ ಮಾಡುತ್ತಲೇ ವಿದೇಶದಲ್ಲಿಯೂ ವ್ಯಾಸಂಗ
  • ಎರಡು ಕಡೆಯೂ ಪದವಿ ಪ್ರಮಾಣ ಪತ್ರ
  • ವ್ಯಾಸಂಗ ಮಾಡುತ್ತಲೇ ದುಡಿಮೆ
  • ವ್ಯಾಸಂಗದ ನಂತರ ದುಡಿದು ಖರ್ಚಿನ ಸಾಲ ತೀರಿಸುವುದು
  • ನೇರ ವಿದೇಶದಲ್ಲಿ ಓದಲು ಹೋದರೆ ಖರ್ಚು ಹೆಚ್ಚು
  • ಕೆಲಸ ಸಿಗುವಾಗ ಅಲ್ಲಿನ ಪದವಿ ಸಹ ಅನುಕೂಲ
  • ಕೌಶಲ್ಯ ಪಡೆಯಲು ಪ್ರಯೋಜನಕಾರಿ
ಟ್ವಿನ್ನಿಂಗ್ ಕಾರ್ಯಕ್ರಮವನ್ನು 2022-23 ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲಾಗುತ್ತದೆ. ಆರು ತಿಂಗಳಿನಲ್ಲಿ ವಿದ್ಯಾರ್ಥಿಗಳ ಆಯ್ಕೆ, ಅವರಿಗೆ ಹಣಕಾಸಿನ ವ್ಯವಸ್ಥೆ ಮಾಡುವುದನ್ನು ಪೂರ್ಣಗೊಳಿಸಲಿದ್ದೇವೆ. ಎಷ್ಟು ವಿದ್ಯಾರ್ಥಿಗಳು ಎಂಬುದು ಇನ್ನೂ ಅಂತಿಮವಾಗಿಲ್ಲ. | ಪಿ. ಪ್ರದೀಪ್ ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ

ಅವಳಿ ಕಾರ್ಯಕ್ರಮ: ಸದ್ಯ ಪದವಿ ಬಳಿಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ಹೋಗುತ್ತಿದ್ದಾರೆ. ಆದರೆ ಈ ಟ್ವಿನ್ನಿಂಗ್ ಕಾರ್ಯಕ್ರಮದಲ್ಲಿ ಇಲ್ಲಿ ಪದವಿ ಓದುತ್ತಿರುವ ಸಂದರ್ಭದಲ್ಲೇ ವಿದೇಶಿ ವಿವಿಗಳಲ್ಲಿ ಹೆಚ್ಚಿನ ತರಬೇತಿಯನ್ನು ಕೊಡಿಸುವುದು, ದುಡಿಮೆಗೂ ಅವಕಾಶ ಕಲ್ಪಿಸುವುದು ಒಟ್ಟಾರೆ ಉದ್ದೇಶವಾಗಿದೆ.

ಸರ್ಕಾರಿ ಕಾಲೇಜು ಮಕ್ಕಳಿಗೆ ಮಾತ್ರ: ಈ ವ್ಯವಸ್ಥೆ ಕೇವಲ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗಷ್ಟೇ ಜಾರಿಗೆ ತರಲಾಗುತ್ತದೆ. ಸರ್ಕಾರಿ ಕಾಲೇಜುಗಳಿಗೆ ಸೇರುವ ವಿದ್ಯಾರ್ಥಿಗಳು ಬಡಕುಟುಂಬಗಳಿಗೆ ಸೇರಿದವರಾಗಿರುತ್ತಾರೆ. ವಿದೇಶಿ ವ್ಯಾಸಂಗ ಅವರಿಗೆ ಕನಸಿನ ಮಾತಾಗಿರುತ್ತದೆ. ಹೀಗಾಗಿ ವಿದೇಶದಲ್ಲಿ ಶೈಕ್ಷಣಿಕ ತರಬೇತಿ ಕೊಡಿಸುವ ಮೂಲಕ ಅವರನ್ನು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಸಿದ್ಧ ಮಾಡಲಾಗುತ್ತದೆ.