ಶಿವಮೊಗ್ಗ: ಅಭಿವೃದ್ಧಿ ಹಾಗೂ ತಲಾ ಆದಾಯದಲ್ಲಿ ಶಿವಮೊಗ್ಗ ಜಿಲ್ಲೆ ಸಾಧನೆ ತೃಪ್ತಿಕರವಾಗಿದೆ. ಆದರೆ ಶಿಕ್ಷಣ ಹಾಗೂ ಆರೋಗ್ಯ ವಲಯದಲ್ಲಿ ಇನ್ನಷ್ಟು ಸುಧಾರಣೆ ಆಗಬೇಕಿದೆ ಎಂದು ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ, ಆರ್ಥಿಕ ತಜ್ಞ ಪ್ರೊ. ಎಂ.ಗೋವಿಂದರಾವ್ ತಿಳಿಸಿದರು.
ಬುಧವಾರ ಜಿಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಅಸಮತೋಲನ ಎಂಬುದು ಸ್ವಾಭಾವಿಕ ಪ್ರಕ್ರಿಯೆ. ಆದರೆ ಅದು ತುಂಬ ಏರುಪೇರಾಗಬಾರದು. ಸಾಕ್ಷರತೆ, ಆರೋಗ್ಯ ಹಾಗೂ ಆದಾಯದ ಮಾನದಂಡದಲ್ಲಿ ಅಭಿವೃದ್ಧಿ ಸೂಚ್ಯಂಕ ನಿರ್ಧಾರವಾಗುತ್ತದೆ. ಶಿವಮೊಗ್ಗದಲ್ಲಿ ಆರೋಗ್ಯ, ಸಾಕ್ಷರತೆಗೆ ಹೆಚ್ಚು ಒತ್ತು ನೀಡಬೇಕಿದೆ ಎಂದರು.
ಡಿ.ಎಂ.ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಿತ್ತು. ಈಗ ನಮ್ಮ ಸಮಿತಿ ಪ್ರತಿ ಜಿಲ್ಲೆಗೆ ಭೇಟಿ ನೀಡಿ ಅಲ್ಲಿನ ಅಭಿವೃದ್ಧಿ, ಪ್ರಾದೇಶಿಕ ಅಸಮತೋಲನ, ನಿವಾರಣೆ ಮುಂತಾದ ವಿಚಾರಗಳ ಬಗ್ಗೆ ಸ್ಥಳೀಯ ಸಂಘ ಸಂಸ್ಥೆಗಳೊಂದಿಗೆ ಚರ್ಚಿಸಿ ಅದರ ಆಧಾರದಲ್ಲಿ ಸರ್ಕಾರಕ್ಕೆ ವರದಿ ನೀಡಲಿದೆ ಎಂದರು.
ಎಲ್ಲ ಜಿಲ್ಲೆಗಳಿಗೆ ಸಮನಾದ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಹಾಗೂ ಸಕಾಲಿಕ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ನಮ್ಮ ಆಯೋಗ ಶಿಫಾರಸು ಮಾಡಲಿದೆ. ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಶಿಫಾರಸು ಮಾಡಿದ ಪ್ರಮಾಣದ ಮೊತ್ತ ಸಕಾಲದಲ್ಲಿ ಬಿಡುಗಡೆ ಆಗಲಿಲ್ಲ. ಬಿಡುಗಡೆಯಾದ ಮೊತ್ತದಲ್ಲಿ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿಯಾಗಲಿಲ್ಲ. ಹೀಗಾಗಿ ಅಭಿವೃದ್ಧಿ ಸೂಚ್ಯಂಕದಲ್ಲಿ ಏರಿಕೆ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಆರ್ಥಿಕ ತಜ್ಞರನ್ನು ಒಳಗೊಂಡ ಐದು ಜನರ ಸಮಿತಿಯನ್ನು ಸರ್ಕಾರ ರಚಿಸಿದೆ. ಈ ಸಮಿತಿಯು ಕೃಷಿ, ಕೈಗಾರಿಕೆ, ಆರ್ಥಿಕ, ಮೂಲ ಸೌಲಭ್ಯ, ಸಾಮಾಜಿಕ ಸೌಲಭ್ಯ, ಹಣಕಾಸು ಮತ್ತು ತಾಂತ್ರಿಕ ಲಭ್ಯತೆ ಮುಂತಾದ ವಿಷಯಗಳಲ್ಲಿನ ಪ್ರಗತಿ ಅಥವಾ ಕೊರತೆಯನ್ನು ಗುರುತಿಸಿ, ಸೂಚ್ಯಂಕ ನಿಗದಿಪಡಿಸಲಿದೆ ಎಂದು ಹೇಳಿದರು.
ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯರಾದ ಡಾ. ಎಂ.ಎಚ್.ಸೂರ್ಯನಾರಾಯಣ, ಡಾ. ಎಸ್.ಟಿ.ಬಾಗಲಕೋಟಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್ ಉಪಸ್ಥಿತರಿದ್ದರು. ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.