ನ್ಯೂಸ್

ಬಡಮಕ್ಕಳ ಶಿಕ್ಷಣಕ್ಕೆ ಓಸ್ಯಾಟ್ ಕೊಡುಗೆ ಅನನ್ಯ

ಹುಣಸೂರು: ಬಡಮಕ್ಕಳ ಶಿಕ್ಷಣಕ್ಕಾಗಿ ಓಸ್ಯಾಟ್ ಸಂಸ್ಥೆಯ ಕೊಡುಗೆ ಅನನ್ಯವಾದುದು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸಂತೋಷ್‌ಕುಮಾರ್ ಶ್ಲಾಘಿಸಿದರು.ತಾಲೂಕಿನ ಹಗರನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಓಸ್ಯಾಟ್ ಸಂಸ್ಥೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ನಗದು ಬಹುಮಾನ ನೀಡುತ್ತಿರುವುದು ಮಕ್ಕಳಲ್ಲಿ ವಿದ್ಯಾಭ್ಯಾಸದ ಆಸಕ್ತಿ ಮತ್ತು ಕಲಿಕೆಗೆ ಪ್ರೇರಣೆ ಉಂಟು ಮಾಡಲು ಸಹಕಾರಿಯಾಗಿದೆ. ತಾಲೂಕಿನಲ್ಲಿ ಈ ಸಂಸ್ಥೆಯು ಶೈಕ್ಷಣಿಕ ಬಲವರ್ಧನೆಗಾಗಿ ಶಾಲೆಗೆ 18 ಕೊಠಡಿಗಳು, ಗ್ರಂಥಾಲಯ, 5 ಶೌಚಗೃಹ, 5 ಕಂಪ್ಯೂಟರ್ ಕೊಠಡಿ ಸೇರಿದಂತೆ ಇತರ ಸೌಲಭ್ಯ ನೀಡಿರುವುದಲ್ಲದೆ, ಮಕ್ಕಳ ತರಗತಿ ಕಲಿಕೆಗೆ ಸಹಕಾರಿಯಾಗಲು ಒಡಿಸಿ ಯೋಜನೆ ಮೂಲಕ ಶೈಕ್ಷಣಿಕ ತಂತ್ರಜ್ಞಾನದ ನೆರವು ನೀಡುತ್ತಿದೆ. ಈ ಯೋಜನೆಗೆ ಒಳಪಟ್ಟಿರುವ 14 ಶಾಲೆಗಳಿಗೂ ಕಂಪ್ಯೂಟರ್ ಶಿಕ್ಷಕರನ್ನು ನಿಯೋಜಿಸಿದೆ. ಇಂತಹ ಮಹತ್ಕಾರ್ಯವನ್ನು ಬಡಮಕ್ಕಳಿಗಾಗಿ ಒಸ್ಯಾಟ್ ಸಂಸ್ಥೆ ಮಾಡುತ್ತಿರುವುದು ಇತರರಿಗೂ ಮಾದರಿ ಎಂದರು.

  • ಓಸ್ಯಾಟ್ ಸಂಸ್ಥೆಯ ಅರುಣ್‌ಕುಮಾರ್ ಮಾತನಾಡಿದರು. ಕಾಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ರತ್ನಪುರಿ ಸರ್ಕಾರಿ ಪ್ರೌಢಶಾಲೆ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ತಲಾ 7 ಸಾವಿರ ರೂ., ಇಬ್ಬರು ವಿದ್ಯಾರ್ಥಿಗಳಿಗೆ ತಲಾ 3 ಸಾವಿರ ರೂ., ಕಡೇಮನುಗನಹಳ್ಳಿ ಪ್ರೌಢಶಾಲೆಯ 2 ವಿದ್ಯಾರ್ಥಿಗಳಿಗೆ ತಲಾ 7 ಸಾವಿರ ರೂ., 4 ವಿದ್ಯಾರ್ಥಿಗಳಿಗೆ ತಲಾ 3 ಸಾವಿರ ರೂ., ಹಗರನಹಳ್ಳಿ ಪ್ರೌಢಶಾಲೆಯ ಒಬ್ಬ ವಿದ್ಯಾರ್ಥಿಗೆ 7 ಸಾವಿರ ರೂ., 4 ವಿದ್ಯಾರ್ಥಿಗಳಿಗೆ ತಲಾ 3 ಸಾವಿರ ರೂ.ಗಳ ಚೆಕ್ ಅನ್ನು ವಿತರಿಸಲಾಯಿತು.