ನ್ಯೂಸ್

ಶಿಕ್ಷಣ, ಆರೋಗ್ಯ ಕ್ಷೇತ್ರ ರಾಷ್ಟ್ರೀಕರಣ ಮಾಡಿ: ಸರ್ಕಾರಕ್ಕೆ ಬಿಪಿಎಸ್ ಮುಖಂಡ ಹರೀಶ್ ಒತ್ತಾಯ

Ramanagara

ರಾಮನಗರ : ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರವನ್ನು ಖಾಸಗಿಯವರು ದಂಧೆ ಮಾಡಿಕೊಂಡಿದ್ದು, ಈ ಎರಡನ್ನೂ ರಾಷ್ಟ್ರೀಕರಣ ಮಾಡಬೇಕು ಎಂದು ಭಾರತೀಯ ಪರಿವರ್ತನ ಸಂಘದ (ಬಿಪಿಎಸ್) ಜಿಲ್ಲಾ ಮುಖಂಡ ಹರೀಶ್ ಸರ್ಕಾರವನ್ನು ಒತ್ತಾಯಿಸಿದರು.

ಈ ಸಂಬಂಧ ಸಂಘಟನೆ ವತಿಯಿಂದ ಆರಂಭಿಸಿರುವ ಆಂದೋಲನದ ಭಾಗವಾಗಿ ಸರ್ಕಾರಕ್ಕೆ ಮಾಡಿರುವ ಮನವಿಯನ್ನು ಸೋಮವಾರ ಜಿಲ್ಲಾಡಳಿತಕ್ಕೆ ಸಲ್ಲಿಸಿ ಮಾತನಾಡಿದರು.

ಕೋವಿಡ್ ಸೋಂಕು ಚಿಕಿತ್ಸೆ ವೇಳೆ ಆರೋಗ್ಯ ವ್ಯವಸ್ಥೆಯ ಪರಿಚಯವಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ವೈದ್ಯಕೀಯ ವ್ಯವಸ್ಥೆ ಇಲ್ಲ. ಔಷಧ, ವೈದ್ಯಕೀಯ ಉಪಕರಣ, ಆಕ್ಸಿಜನ್, ಬೆಡ್ ಹೀಗೆ ಎಲ್ಲವೂ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಸಾಮಾನ್ಯ ಪ್ರಜೆ ಶಿಕ್ಷಣ ಮತ್ತು ಆರೋಗ್ಯಕ್ಕಾಗಿಯೇ ದುಡಿಮೆಯ ಶೇ.60ರಷ್ಟನ್ನು ವೆಚ್ಚ ಮಾಡುತ್ತಿದ್ದಾನೆ ಎಂದರು.

ಆಂದೋಲನಕ್ಕೆ ಬೆಂಬಲ: ಬಿಪಿಎಸ್ ಸಂಘಟನೆ ಆರಂಭಿಸಿರುವ ಆಂದೋಲನಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಜಿಲ್ಲಾ ಜನಜಾಗೃತಿ ಸಮಿತಿ ಅಧ್ಯಕ್ಷ ಕೆ.ಶೇಷಾದ್ರಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಖಾಸಗಿ ಸಂಸ್ಥೆಗಳ ಕೈಗೆ ಸಿಕ್ಕು ವ್ಯಾಪಾರೀಕರಣವಾಗಿವೆ.

ಜನಸಾಮಾನ್ಯರಿಗೆ ಉತ್ತಮ ಶಿಕ್ಷಣ, ಆರೋಗ್ಯ ಸಿಗುತ್ತಿಲ್ಲ. ಎರಡೂ ಕ್ಷೇತ್ರಗಳು ರಾಷ್ಟ್ರೀಕರಣವಾಗುವ ನಿಟ್ಟಿನಲ್ಲಿ ಎಲ್ಲರೂ ಹೋರಾಟ ಮಾಡಬೇಕು ಎಂದರು.ಜಿಲ್ಲಾಡಳಿತದ ಪರವಾಗಿ ಮುಜರಾಯಿ ತಹಸೀಲ್ದಾರ್ ಲಕ್ಷ್ಮೀನಾರಾಯಣ್ ಮನವಿ ಸ್ವೀಕರಿಸಿದರು.

ಜಿಲ್ಲಾ ದಲಿತ ಒಕ್ಕೂಟಗಳ ಅಧ್ಯಕ್ಷ ಶಿವಕುಮಾರಸ್ವಾಮಿ, ಕರ್ನಾಟಕ ಭೀಮ್‌ರಾವ್ ಸೇವಾ ಸಮಿತಿ ಉಪಾಧ್ಯಕ್ಷ ಗುಡ್ಡೆ ವೆಂಕಟೇಶ್, ಕರುನಾಡಸೇನೆ ಉಪಾಧ್ಯಕ್ಷ ಎಂ.ಜಗದೀಶ್, ಸಿಲ್ಕ್ ರೀಲರ್‌ಗಳ ಸಂಘದ ಅಧ್ಯಕ್ಷ ಮುಹೀಬ್ ಪಾಷಾ ಮುಂತಾದವರು ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಏಕರೂಪ ಶಿಕ್ಷಣ, ಆರೋಗ್ಯ ಸೌಲಭ್ಯ : ನಾಗರಿಕರಿಗೆ ತೀರಾ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಸರ್ಕಾರ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕಾಗಿದೆ. ಹೀಗಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ರಾಷ್ಟ್ರೀಕರಣಕ್ಕೆ ಸಂಘಟನೆ ಆಗ್ರಹಿಸುತ್ತಿದೆ. ನಾಗರಿಕರು ಈಗಾಗಲೇ ಹಲವಾರು ರೀತಿಯಲ್ಲಿ ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದಾರೆ. ಶಿಕ್ಷಣ ಮತ್ತು ಅರೋಗ್ಯಕ್ಕಾಗಿ ಇನ್ನು ಒಂದು ತೆರಿಗೆ ವಿಧಿಸಿದರೂ ಪಾವತಿಸಲು ಸಿದ್ಧ. ಆದರೆ, ದೇಶದ ಪ್ರತಿಯೊಬ್ಬರಿಗೂ ಏಕರೂಪ ಶಿಕ್ಷಣ ಮತ್ತು ವೈದ್ಯಕೀಯ ವ್ಯವಸ್ಥೆ ಸಿಗಬೇಕು ಎಂದು ಹರೀಶ್ ಹೇಳಿದರು.