ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ದಾಖಲೆಯ 16ನೇ ಬಜೆಟ್ ಮಂಡಿಸಿದ್ದಾರೆ. ಮೊದಲ ಬಾರಿಗೆ ರಾಜ್ಯ ಬಜೆಟ್ 4 ಲಕ್ಷ ರೂ.ಗಳ ಗಡಿ ದಾಟಿದೆ. 51,034 ಕೋಟಿ ರೂಪಾಯಿ ಅನುದಾನ ಮೀಸಲಿಡುವ ಮೂಲಕ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೇಲೆ ಕವಿದಿದ್ದ ಅನುಮಾನದ ಕಾಮೋಡವನ್ನು ಹೊಗಲಾಡಿಸಿದ್ದಾರೆ. ಗ್ಯಾರಂಟಿಯ ಭರಾಟೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿಲ್ಲ ಎಂಬ ಪ್ರತಿಪಕ್ಷಗಳ ತೀಕ್ಷ ್ಣ ಟೀಕೆಗೆ ಪ್ರತಿಯಾಗಿ 800 ಕೋಟಿ ರೂ. ವೆಚ್ಚದಲ್ಲಿ ‘ಮುಖ್ಯಮಂತ್ರಿ ಮೂಲಸೌಕರ್ಯ ಕಾರ್ಯಕ್ರಮ’ವನ್ನು ಘೋಷಿಸಿರುವುದು ಗಮನಾರ್ಹ.
ರಾಜಧಾನಿ ಬೆಂಗಳೂರಿಗೆ 21 ಯೋಜನೆಗಳಿದ್ದು, ಮೆಟ್ರೋ ಮೂರನೇ ಹಂತದ ಮಾರ್ಗವನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಆದರೆ, ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಬಂಡವಾಳ ಕ್ರೋಢೀಕರಣಕ್ಕೆ ಕಸರತ್ತು ನಡೆಸಲಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. 2025-26ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ನೀಡಲಾಗಿರುವುದು ಇದಕ್ಕೆ ನಿದರ್ಶನ. ಇತರ ಹಲವು ಇಲಾಖೆಗಳಿಗೂ ಗುರಿಯನ್ನು ಹೆಚ್ಚಿಸಲಾಗಿದೆ. ಮತ್ತೊಂದೆಡೆ, ಕಾಮಗಾರಿಗಳ ಗುತ್ತಿಗೆಯಲ್ಲೂ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಈ ಬಗ್ಗೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿದ್ದ ಅನುದಾನವನ್ನು ಗ್ಯಾರಂಟಿಗಾಗಿ ಬಳಸಿರುವುದು ಈಗಾಗಲೇ ವಿವಾದ ಸೃಷ್ಟಿಸಿದೆ.
ರಾಜ್ಯವನ್ನು ಅಧಿಕೃತವಾಗಿ ನಕ್ಸಲ್ವುುಕ್ತ ಎಂದು ಘೋಷಿಸಲಾಗಿರುವುದು ಮಹತ್ವದ ನಡೆ. ಆದ್ದರಿಂದ, ರಾಜ್ಯದಲ್ಲಿ ನಕ್ಸಲ್ ನಿಗ್ರಹ ಪಡೆಯನ್ನು ವಿಸರ್ಜಿಸಲಾಗುವುದು ಹಾಗೂ ನಕ್ಸಲ್ಪೀಡಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 10 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ರೂಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಹಾಗೆಯೇ ತವರು ಜಿಲ್ಲೆ ಮೈಸೂರಿಗೆ ಭರ್ಜರಿ ಕೊಡುಗೆಗಳನ್ನು ನೀಡಿದ್ದಾರೆ.
ಒಟ್ಟಾರೆ ಆಯವ್ಯಯವನ್ನು ಅವಲೋಕಿಸಿದಾಗ ಭರಪೂರ ಘೋಷಣೆಗಳು ಇವೆಯಾದರೂ, ಇವುಗಳ ಅನುಷ್ಠಾನ ಹೇಗೆ ಎಂಬ ಪ್ರಶ್ನೆ ಕಾಡುತ್ತದೆ. ಏಕೆಂದರೆ, ಸರ್ಕಾರ ಭಾರಿ ಪ್ರಮಾಣದಲ್ಲಿ ಅಂದರೆ 1.16 ಲಕ್ಷ ಕೋಟಿ ರೂ. ಸಾಲ ಮಾಡಲು ಹೊರಟಿದೆ. ಹಿಂದೆ ಮಾಡಿದ ಸಾಲದ ಹೊರೆಯೂ ಇದೆ. ‘ರಾಜ್ಯಕ್ಕೆ ಆದಾಯದ ಮೂಲಗಳು ಇರುವುದರಿಂದ ಸಾಲ ಮಾಡುವುದರಲ್ಲಿ ತಪ್ಪೇನಿಲ್ಲ’ ಎಂದು ಸರ್ಕಾರ ಸಮರ್ಥಿಸಿಕೊಂಡಿದ್ದರೂ, ಮುಂದಿನ ದಿನಗಳಲ್ಲಿ ವಿತ್ತೀಯ ಶಿಸ್ತನ್ನು ಕಾಯ್ದುಕೊಳ್ಳುವುದು, ಅಭಿವೃದ್ಧಿ ಯೋಜನೆಗಳಿಗೆ ಹಣ ವಿನಿಯೋಗಿಸುವುದು ಸವಾಲಾಗಿ ಪರಿಣಮಿಸಲಿದೆ ಎಂಬುದರಲ್ಲಿ ಅನುಮಾನ ಇಲ್ಲ. ಹಾಗಾಗಿ, ಬಜೆಟ್ ದೂರದೃಷ್ಟಿಯನ್ನು ಒಳಗೊಳ್ಳದೆ ಸೀಮಿತ ಆಗ್ರಹಗಳಿಗೆ ಮಣಿದಿದೆ.