ಸುಮಾರು ಎರಡು ದಶಕಗಳ ಹಿಂದೆ ಭಾರತವೂ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ಚೀನಾ ವಸ್ತುಗಳು ಭಾರಿ ಪ್ರಮಾಣದಲ್ಲಿ ದಾಂಗುಡಿ ಇಟ್ಟಾಗ ಇಡೀ ಜಗತ್ತಿನ ವ್ಯಾಪಾರ ವಲಯ ದಿಗಿಲುಗೊಂಡಿತ್ತು. ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದ್ದ ಈ ‘ಮೇಡ್ ಇನ್ ಚೈನಾ’ ವಸ್ತುಗಳಿಂದ ಗ್ರಾಹಕರಿಗೆ ಲಾಭವಾದರೂ, ಬಹಳಷ್ಟು ದೇಶಗಳ ಉತ್ಪಾದನಾ ವಲಯ ದೊಡ್ಡ ಪೆಟ್ಟು ಅನುಭವಿಸಿತು. ಈಗ ಚೀನಾದಿಂದ ಇತರ ದೇಶಗಳಿಗೆ ಮತ್ತೊಮ್ಮೆ ಅಂತಹುದೇ ಆಘಾತ ಎದುರಾಗುವ ಮುನ್ಸೂಚನೆ ದೊರೆತಿದೆ.
ಚೀನಾದ ಆರ್ಥಿಕತೆ ಇತ್ತೀಚೆಗೆ ದುರ್ಬಲವಾಗುತ್ತಿದೆ. ಅದಕ್ಕೆ ಅಲ್ಲಿನ ರಿಯಲ್ ಎಸ್ಟೇಟ್ ವಲಯದ ಸಮಸ್ಯೆಗಳು ಮತ್ತು ಗ್ರಾಹಕ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಿರುವುದು ಕಾರಣ ಎನ್ನಲಾಗುತ್ತಿದೆ. ತನ್ನ ಆರ್ಥಿಕತೆಯನ್ನು ಮತ್ತೆ ಮೇಲೆತ್ತಲು ಚೀನಾ ಹಿಂದೆಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತನ್ನ ವಸ್ತುಗಳನ್ನು ಇತರ ದೇಶಗಳಿಗೆ ರಫ್ತು ಮಾಡುತ್ತಿದೆ. ಇದರಿಂದ ಆ ರಾಷ್ಟ್ರಗಳಲ್ಲಿರುವ ಕೈಗಾರಿಕೆಗಳ ಮೇಲೆ ದುಷ್ಪರಿಣಾಮವಾಗಲಿದೆ. ಸಾಕಷ್ಟು ಉದ್ಯೋಗನಷ್ಟವೂ ಸಂಭವಿಸ ಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಯಲ್ಲಿರುವ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ತಡೆಯಲು ಆ ರಾಷ್ಟ್ರಗಳು ಚೀನಾ ಉತ್ಪನ್ನಗಳ ಆಮದಿನ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿವೆ. ಇತ್ತೀಚೆಗಷ್ಟೆ ಅಮೆರಿಕ ಕೂಡ ಈ ಕ್ರಮ ಕೈಗೊಂಡಿದೆ. ಚೀನಾದ ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇ. 100ರಷ್ಟು, ಸೋಲಾರ್ ಸೆಲ್ಗಳ ಮೇಲೆ ಶೇ. 50ರಷ್ಟು, ಉಕ್ಕು, ಅಲ್ಯುಮಿನಿಯಂ ಮೇಲೆ ಶೇ. 25ರಷ್ಟು ಕರವನ್ನು ಅಮೆರಿಕ ವಿಧಿಸಿದೆ. ಭಾರತವೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಸ್ಥಳೀಯ ಉದ್ಯಮಗಳ ದೂರು ಆಧರಿಸಿ, ಚೀನಾದ ನಿರ್ದಿಷ್ಟ ಉತ್ಪನ್ನಗಳ ಮೇಲೆ ಆಂಟಿ ಡಂಪಿಂಗ್ ತೆರಿಗೆ ಹಾಕಲು ಆರಂಭಿಸಿದೆ. ಕಳಪೆ ಗುಣಮಟ್ಟದ, ಕಡಿಮೆ ಬೆಲೆಯ ಚೀನಾ ಉತ್ಪನ್ನಗಳ ಮಾರಾಟದ ಕುರಿತು ತನಿಖೆಗೂ ಕೇಂದ್ರ ವಾಣಿಜ್ಯ ಸಚಿವಾಲಯ ಇತ್ತೀಚೆಗೆ ಆದೇಶಿಸಿದೆ. ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಭಾರತಕ್ಕೆ ಚೀನಾ ಉತ್ಪನ್ನಗಳ ಆಮದು ಪ್ರಮಾಣ 2014-15ರಲ್ಲಿ 60 ಶತಕೋಟಿ ಡಾಲರ್ ಇದ್ದದ್ದು 2023-24ರ ವೇಳೆಗೆ 100 ಶತಕೋಟಿ ಡಾಲರ್ಗೆ ಏರಿಕೆಯಾಗಿದೆ. ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣ, ಜವಳಿ ಹೀಗೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಚೀನಾ ವಸ್ತುಗಳ ಆಮದು ಹೆಚ್ಚುತ್ತಲೇ ಇದೆ. ಇದಕ್ಕೆ ಆಂಟಿ ಡಂಪಿಂಗ್ ತೆರಿಗೆ ವಿಧಿಸುವಂತಹ ಕ್ರಮಗಳು ಸಾಲುವುದಿಲ್ಲ.
ಸ್ಥಳೀಯವಾಗಿ ವಸ್ತುಗಳನ್ನು ಉತ್ಪಾದಿಸಲು ಕೇಂದ್ರ ಸರ್ಕಾರ ಉತ್ತೇಜನ ಹೆಚ್ಚಿಸಬೇಕು. ಇನ್ನೂ ಹೆಚ್ಚಿನ ಪ್ರೋತ್ಸಾಹಕ ಕ್ರಮಗಳನ್ನು ಘೊಷಿಸಬೇಕು. ಮೇಕ್ ಇನ್ ಇಂಡಿಯಾ ಘೊಷಣೆಯ ಯಶಸ್ಸಿನ ನಂತರ ಪ್ರಧಾನಿ ಮೋದಿ ಇದೀಗ ಮೇಡ್ ಇನ್ ಇಂಡಿಯಾ ವಸ್ತುಗಳನ್ನು ಖರೀದಿಸುವಂತೆ ಜನರಿಗೆ ಮನವಿ ಮಾಡಿರುವುದು ಒಳ್ಳೆಯ ಉಪಕ್ರಮವಾಗಿದೆ. ಆದರೆ ಇದೆಲ್ಲಕ್ಕಿಂತ ಹೆಚ್ಚಾಗಿ ಗುಣಮಟ್ಟದ ವಸ್ತುಗಳು ಸ್ವದೇಶದಲ್ಲೇ ಕಡಿಮೆ ವೆಚ್ಚದಲ್ಲಿ ತಯಾರಾಗಿ, ಚೀನಾ ವಸ್ತುಗಳಿಗಿಂತ ಕಡಿಮೆ ಬೆಲೆಯಲ್ಲಿ ಜನರಿಗೆ ಲಭ್ಯವಾಗುವಂತಾದರೆ ಮಾತ್ರ ಚೀನಾ ಡಂಪಿಂಗ್ಗೆ ಕೊನೆ ಹಾಡಲು ಸಾಧ್ಯ.