ನ್ಯೂಸ್

ಸಂಪಾದಕೀಯ: ಪ್ರಬಲ ಇಚ್ಛಾಶಕ್ತಿ ಅಗತ್ಯ

Webdesk - Mallikarjun K R

ದೇಶದ ಉಳಿದ ಭಾಗಗಳಿಗೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕರೂ, ನಿಜಾಮ ಆಡಳಿತವಿದ್ದ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಮೋಚನೆ ದೊರೆತಿದ್ದು 1948ರ ಸೆಪ್ಟೆಂಬರ್ 17ರಂದು. ರಾಜ್ಯ ಸರ್ಕಾರ ಇದೇ ಸೆಪ್ಟೆಂಬರ್ 17ರ ಕಲ್ಯಾಣ ಕರ್ನಾಟಕ ವಿಮೋಚನಾ ದಿನದಂದು ಕಲಬುರಗಿಯ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಸಚಿವ ಸಂಪುಟದ ಸಭೆಯನ್ನು ನಡೆಸಲು ನಿರ್ಧರಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ ವಿಷಯಗಳನ್ನು ವಿಶೇಷವಾಗಿ ಪರಿಗಣಿಸಿ ಈ ಸಭೆ ನಡೆಯಲಿರುವುದು ಸ್ವಾಗತಾರ್ಹ. ಆಡಳಿತಯಂತ್ರ ಬರೀ ಬೆಂಗಳೂರಿಗೆ ಸೀಮಿತಗೊಂಡಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಸರ್ಕಾರ ಮಲತಾಯಿ ಧೋರಣೆ ತಳೆಯುತ್ತಿದೆ ಎಂಬ ಆರೋಪ ದಶಕಗಳಿಂದಲೂ ಇದೆ. ಈ ಭಾಗದ ಜನರು ಮೂಲಸೌಕರ್ಯದಿಂದ ಹಿಡಿದು ಯಾವುದೇ ಸವಲತ್ತು ಪಡೆಯಬೇಕಾದರೂ ಅದಕ್ಕೆ ಉಗ್ರ ಹೋರಾಟವನ್ನೇ ಮಾಡಬೇಕು. ಇದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಸಂವಿಧಾನದ 371 (ಜೆ) ಕಲಂ ತಿದ್ದುಪಡಿಗಾಗಿ ಹಲವು ವರ್ಷಗಳ ಕಾಲ ಹೋರಾಟ ಮಾಡಬೇಕಾಯಿತು. ಹೈಕೋರ್ಟ್​ನ ಪೀಠಸ್ಥಾಪನೆಗೂ ಹೋರಾಟದ ಹಾದಿ ಹಿಡಿಯಬೇಕಾಯಿತು. ಹೀಗೆ, ಮುಖ್ಯಮಂತ್ರಿಗಳು, ಮಂತ್ರಿಗಳು ನಮ್ಮ ಸಮಸ್ಯೆಗೆ ಕಿವಿಯಾಗುವುದು ಯಾವಾಗ ಎಂದು ಇಲ್ಲಿನ ಜನರು ಗಟ್ಟಿಯಾಗಿ ಪ್ರಶ್ನಿಸಿದಾಗ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 2009ರಲ್ಲಿ ಸಚಿವ ಸಂಪುಟ ಸಭೆಯನ್ನು ಕಲಬುರಗಿಯಲ್ಲಿ ನಡೆಸಿದ್ದರು. ಬಳಿಕ ಜಗದೀಶ ಶೆಟ್ಟರ್ ಸಿಎಂ ಆಗಿದ್ದಾಗ ಕಲಬುರಗಿಯಲ್ಲಿ ಸಂಪುಟ ಸಭೆ ನಡೆದಿತ್ತು. ಆದರೆ, ಸರ್ಕಾರ ಬದಲಾದ ಬಳಿಕ ವಿಮೋಚನಾ ದಿನದ ಕಾರ್ಯಕ್ರಮಕ್ಕೆ ಮಾತ್ರ ಕಲಬುರಗಿಗೆ ಮುಖ್ಯಮಂತ್ರಿಗಳು ಬರುವಂತಾಯಿತು. ಹಲವು ವರ್ಷಗಳ ಬಳಿಕ ಈಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸುತ್ತಿದೆ.

ಪ್ರಾದೇಶಿಕ ಅಸಮತೋಲನ ನಿವಾರಣೆಯ ಬಗ್ಗೆ ಪ್ರೊ.ನಂಜುಂಡಪ್ಪ ನೇತೃತ್ವದ ಸಮಿತಿ ನೀಡಿರುವ ವರದಿ ಪ್ರಕಾರ ರಾಜ್ಯದಲ್ಲಿ ಅತಿ ಹಿಂದುಳಿದ ತಾಲೂಕುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಕಲ್ಯಾಣ ಕರ್ನಾಟಕ ಭಾಗದಲ್ಲೇ. ‘ಹೈದರಾಬಾದ್-ಕರ್ನಾಟಕ’ವನ್ನು ‘ಕಲ್ಯಾಣ ಕರ್ನಾಟಕ’ ಎಂದು ಮರು ನಾಮಕರಣ ಮಾಡಲಾಗಿದೆ. ಆದರೆ, ಇಲ್ಲಿಯವರ ಬದುಕು ಕಲ್ಯಾಣವಾಗಿಲ್ಲ. ಈ ರೀತಿ ಕೆಲವು ವರ್ಷಗಳಿಗೊಮ್ಮೆ ಇಲ್ಲಿ ಸಂಪುಟ ಸಭೆ ನಡೆಸುವ ಮಾತ್ರದಿಂದಲೇ ಪ್ರಾದೇಶಿಕ ಅಸಮತೋಲನವನ್ನು ಸರಿಪಡಿಸಲಾಗುವುದಿಲ್ಲ ಎಂಬುದನ್ನು ರಾಜ್ಯ ಸರ್ಕಾರ ಅರಿತುಕೊಳ್ಳಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ರಚಿಸಿ, ಸೂಕ್ತ ಅನುದಾನ ನೀಡುತ್ತಿದ್ದರೂ ಮೂಲಸೌಕರ್ಯ ವಿಸ್ತರಣೆ ವಿಷಯದಲ್ಲಿ ಹೆಚ್ಚೇನು ಸುಧಾರಣೆಯಾಗಿಲ್ಲ. ಬಂಡವಾಳ ಹೂಡಿಕೆ, ಕೈಗಾರಿಕೆಗಳ ಸ್ಥಾಪನೆ, ಉದ್ಯೋಗಸೃಷ್ಟಿ ಕಡತಗಳಿಗೆ ಸೀಮಿತಗೊಂಡಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ. ಸರ್ಕಾರಿ ಹುದ್ದೆಗಳು ಭರ್ತಿಯಾಗದೆ ಆಡಳಿತಯಂತ್ರ ಕುಂಟುತ್ತ ಸಾಗಿದೆ. 2013-14ರಿಂದ 2023-24ರವರೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 14,878 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದ್ದು, 10,228 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೂ, ಜ್ವಲಂತ ಸಮಸ್ಯೆಗಳು ಪರಿಹಾರ ಕಾಣುತ್ತಿಲ್ಲ. ಆದ್ದರಿಂದ, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಆಗಬೇಕೆಂದರೆ ಅದಕ್ಕೆ ಪ್ರಬಲ ಇಚ್ಛಾಶಕ್ತಿಯೊಂದಿಗೆ ಸತತ ಪ್ರಯತ್ನಶೀಲತೆ ಅಗತ್ಯ.