ನ್ಯೂಸ್

ಸಂಪಾದಕೀಯ; ಕಠಿಣ ಮಾರ್ಗಸೂಚಿ ಅಗತ್ಯ

ಸುದೀಪ್​ ವಿ.ಎನ್​

ದೇಶದ ವಿವಿಧ ಭಾಗಗಳಲ್ಲಿ ಪದೇಪದೆ ಸಂಭವಿಸುತ್ತಿರುವ ಕಾಲ್ತುಳಿತ ಪ್ರಕರಣಗಳಿಂದ ನಾವು ಪಾಠ ಕಲಿಯುತ್ತಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ತಮಿಳುನಾಡಿನ ಕರೂರ್ ಎಂಬಲ್ಲಿ ಶನಿವಾರ ಚಲನಚಿತ್ರ ನಟ ವಿಜಯ್ ಅವರ ತಮಿಳಗ ವೆಟ್ಟ್ರಿ ಕಳಗಂ (ಟಿವಿಕೆ) ಪಕ್ಷದ ರಾಜಕೀಯ ರ‍್ಯಾಲಿ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಸುಮಾರು 40 ಜನರು ಮೃತಪಟ್ಟಿದ್ದಾರೆ. ಅದರಲ್ಲಿ 10 ಮಕ್ಕಳು, 17 ಮಹಿಳೆಯರೂ ಇದ್ದಾರೆ. 10 ಸಾವಿರ ಜನ ಮಾತ್ರ ಸೇರುವುದಕ್ಕೆ ಅನುಮತಿ ನೀಡಿದ್ದ ಸ್ಥಳದಲ್ಲಿ 30 ಸಾವಿರದಿಂದ 1 ಲಕ್ಷದಷ್ಟು ಜನಸಂದಣಿ ನೆರೆದಿತ್ತು ಎನ್ನಲಾಗಿದೆ. ಸಮಾವೇಶಕ್ಕೆ ನಟ ವಿಜಯ್ ಏಳು ಗಂಟೆ ವಿಳಂಬವಾಗಿ ಬಂದಿದ್ದು, ಬಿಸಿಲಿನ ಶಾಖದಿಂದ ಕೆಲವರು ಮೂರ್ಛೆ ಹೋಗಿದ್ದು, ವಿದ್ಯುತ್ ಪೂರೈಕೆಯಲ್ಲಿನ ವೈಫಲ್ಯ, ಜನಸಂದಣಿಯನ್ನು ನಿರ್ವಹಿಸುವಲ್ಲಿ ಆಯೋಜಕರು ಮತ್ತು ಪೊಲೀಸರು ತೋರಿದ ನಿರ್ಲಕ್ಷ್ಯ ಮುಂತಾದವು ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಮೃತರ ಕುಟುಂಬಗಳಿಗೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ತಲಾ 10 ಲಕ್ಷ ರೂ., ನಟ ವಿಜಯ್ ತಲಾ 20 ಲಕ್ಷ ರೂ. ಮತ್ತು ಅಲ್ಲಿನ ಬಿಜೆಪಿ ಘಟಕ ತಲಾ 1 ಲಕ್ಷ ರೂ. ಪರಿಹಾರ ಘೊಷಿಸಿದ್ದು, ನಿವೃತ್ತ ನ್ಯಾ. ಅರುಣಾ ಜಗದೀಶನ್ ನೇತೃತ್ವದಲ್ಲಿ ತನಿಖಾ ಆಯೋಗವೂ ರಚನೆಯಾಗಿದೆ. ಆದರೆ ಯಾರೋ ಒಂದಿಬ್ಬರನ್ನು ಬಂಧಿಸುವುದು, ಕೆಲ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸುವುದು ಮುಂತಾದ ಕ್ರಮಗಳಿಂದ ಯಾವುದೇ ಪ್ರಯೋಜನವಿಲ್ಲ. ನಿಜವಾದ ಕಾರಣಕರ್ತರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು. ಈ ಘಟನೆಯು ದೇಶದ ಎಲ್ಲ ರಾಜಕೀಯ ಪಕ್ಷಗಳು ಮತ್ತು ಸಮಾವೇಶಗಳ ಆಯೋಜಕರಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ಆರ್​ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿ 11 ಅಮಾಯಕರು ಜೀವ ಕಳೆದುಕೊಂಡ ಘಟನೆ ಇನ್ನೂ ಜನಮಾನಸದಲ್ಲಿ ಹಸಿಯಾಗಿರುವಾಗಲೇ ಅದರ ನಾಲ್ಕು ಪಟ್ಟು ದೊಡ್ಡ ದುರ್ಘಟನೆ ಕರೂರಿನಲ್ಲಿ ನಡೆದಿದೆ. ಇದಕ್ಕೂ ಮುನ್ನ ಹೈದರಾಬಾದ್, ತಿರುಪತಿ, ಹಾಥರಸ್, ಪ್ರಯಾಗರಾಜ್ ಮುಂತಾದೆಡೆಯೂ ಕಾಲ್ತುಳಿತದ ಘಟನೆಗಳು ಸಂಭವಿಸಿದ್ದನ್ನು ಜನ ಮರೆತಿಲ್ಲ. ರಾಜಕೀಯ ರ್ಯಾಲಿಗಳಿಗೆ, ಧಾರ್ವಿುಕ ಸಮಾವೇಶಗಳಿಗೆ ಲಕ್ಷಾಂತರ ಜನರನ್ನು ಸೇರಿಸುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ಒಂದು ಕಠಿಣ ಮಾರ್ಗಸೂಚಿ ರೂಪಿಸಿ ಎಲ್ಲ ರಾಜ್ಯಗಳೂ ಪಾಲಿಸುವಂತೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸುವ ಕಾರ್ಯ ತುರ್ತಾಗಿ ಆಗಬೇಕಿದೆ. ಸಾರ್ವಜನಿಕ ಸಭೆಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡದಿದ್ದರೆ, ಇಂತಹ ದುರಂತಗಳು ಮರುಕಳಿಸುವ ಸಾಧ್ಯತೆಯಿದೆ.

ಜನಸಂದಣಿ ನಿರ್ವಹಣಾ ಕಾರ್ಯತಂತ್ರಗಳನ್ನು ರೂಪಿಸುವುದು, ಪೊಲೀಸರು ಮತ್ತು ಆಯೋಜಕರ ಮಧ್ಯೆ ಸಹಕಾರ, ನಿರ್ದಿಷ್ಟ ವ್ಯಕ್ತಿಗಳಿಗೆ ಜವಾಬ್ದಾರಿಯನ್ನು ನಿಗದಿಪಡಿಸುವುದು ಇಂತಹ ಘಟನೆಗಳನ್ನು ತಡೆಗಟ್ಟಲು ಸಹಾಯಕವಾಗುತ್ತವೆ. ಎಲ್ಲ ಪಕ್ಷಗಳೂ ತಮ್ಮ ರಾಜಕೀಯ ಲಾಭಕ್ಕಿಂತ ಸಾರ್ವಜನಿಕ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಬೇಕು. ಜನರ ಜೀವ ಮತ್ತು ಜೀವನಕ್ಕಿಂತ ದೊಡ್ಡ ಆದ್ಯತೆ ಯಾವುದೂ ಇಲ್ಲ.