ನ್ಯೂಸ್

ಆ ಕ್ಷಣ ವಿಶೇಷ ಅಂಕಣ; ನಾನು ಅವನಲ್ಲ, ಅವಳು

theerthaswamy
ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ, 22 ವರ್ಷದ ಪದವೀಧರೆ ಸುಷ್ಮಾ ಮದುವೆ ಮಾಡಿಕೊಳ್ಳಲು ವರನನ್ನು ಹುಡುಕುತ್ತಿದ್ದಳು. ಫೇಸ್​ಬುಕ್​ನಲ್ಲಿ ಚುರುಕಾಗಿದ್ದ ಆಕೆಗೆ 26 ವರ್ಷದ ವಿಕ್ರಂ ಎನ್ನುವವನ ಪೊ›ಫೈಲ್ ಕಂಡಿತು. ತಾನು ಮಾತಾಪಿತರ ಒಬ್ಬನೇ ಮಗನಾಗಿದ್ದು ಉದ್ದಿಮೆ ನಡೆಸುತ್ತಿದ್ದೇನೆ ಎಂದು ಬರೆದುಕೊಂಡಿದ್ದ ಅವನಿಂದ ಆಕರ್ಷಿತಳಾದ ಸುಷ್ಮಾ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದಳು. ಕೂಡಲೇ ಅದು ಸ್ವೀಕೃತವೂ ಆಯಿತು.

ಕೆಲ ದಿನಗಳ ನಂತರ ಇಬ್ಬರೂ ರೆಸ್ಟೋರೆಂಟ್ ಒಂದರಲ್ಲಿ ಭೇಟಿಯಾದಳು. ‘ನಾನು ನಿನ್ನನ್ನು ಮೊದಲ ನೋಟದಲ್ಲಿಯೇ ಮೆಚ್ಚಿದ್ದೇನೆ, ನನ್ನನ್ನು ಮದುವೆಯಾಗುವೆಯಾ’ ಎಂದು ವಿಕ್ರಂ ಇದ್ದಕ್ಕಿದ್ದಂತೆ ಕೇಳಿದಾಗ ಸುಷ್ಮಾ ಸ್ತಂಭೀಭೂತಳಾದಳು. ಆತನ ಹಾವಭಾವಗಳು ಮತ್ತು ಧ್ವನಿ ಹೆಣ್ಣಿನ ರೀತಿಯಲ್ಲಿದೆ ಎಂದು ಆಕೆ ಒಂದು ಕ್ಷಣ ಹಿಂದೇಟು ಹಾಕಿದರೂ ಆತ ಶ್ರೀಮಂತನಾಗಿದ್ದ ಕಾರಣ ಲಗ್ನವಾಗಲು ಒಪ್ಪಿದಳು. ‘ಹಿರಿಯರ ಮೂಲಕ ಮದುವೆಯ ಪ್ರಸ್ತಾವನೆ ಕಳಿಸಿ ನಮ್ಮ ಮನೆಗೆ ಬಂದು ಮನೆಯವರನ್ನು ಒಪ್ಪಿಸಿದರೆ ನಮ್ಮ ಮದುವೆ ಸಾಧ್ಯ’ ಎಂದಳು. ಆಗಲಿ ಎಂದ ವಿಕ್ರಂ ಮುಂದಿನ ವಾರವೇ ಮಾತಾಪಿತರನ್ನು ಕರೆದುಕೊಂಡು ಸುಷ್ಮಾಳ ಮನೆಗೆ ಬಂದ. ಹಿರಿಯರು ಪರಸ್ಪರ ಮಾತನಾಡಿಕೊಂಡು ಸಂಬಂಧಕ್ಕೆ ಒಪ್ಪಿದರು. ಐದು ಲಕ್ಷ ರೂ. ವರದಕ್ಷಿಣೆ ಕೊಡಬೇಕು ಎಂದು ವಿಕ್ರಂನ ಮನೆಯವರು ಕೇಳಿದಾಗ, ಸುಷ್ಮಾಳ ತಂದೆ ‘ಒಟ್ಟಿಗೆ ಅಷ್ಟು ಹಣ ಕೊಡಲಾಗುವುದಿಲ್ಲ. ಈಗ ಮದುವೆಗೆ ಬೇಕಾಗುವ ವಾಚ್, ಚೈನು, ಉಂಗುರ, ಬಟ್ಟೆ ಮತ್ತು ಬೈಕ್ ಕೊಡಿಸುತ್ತೇವೆ, ಆನಂತರ ಉಳಿದ ಹಣ ಕೊಡುತ್ತೇವೆ’ಎಂದರು.

ವಿಕ್ರಂನ ತಂದೆ ಇದಕ್ಕೊಪ್ಪದೆ, ‘ನನ್ನ ಮಗ ದೊಡ್ಡ ಉದ್ಯಮಿಯಾಗಿದ್ದು, ಅವನಿಗೆ ಕಾರನ್ನೇ ಕೊಡಿಸಬೇಕು, ಬಾಕಿ ಹಣವನ್ನು ವರ್ಷದೊಳಗೆ ಕೊಡಬೇಕು’ಎಂದು ಷರತ್ತನ್ನು ಹಾಕಿದರು. ಸುಷ್ಮಾಳ ತಂದೆ ಒಪ್ಪಿದರು. ಕೆಲ ತಿಂಗಳ ನಂತರ ಇಬ್ಬರಿಗೂ ಲಗ್ನವಾಯಿತು. ಆದರೆ ಲಗ್ನವಾದ ಮೊದಲ ರಾತ್ರಿ ಇಬ್ಬರ ಮಧ್ಯೆ ಲೈಂಗಿಕ ಕ್ರಿಯೆ ನಡೆಯಲಿಲ್ಲ. ಈ ಬಗ್ಗೆ ಸುಷ್ಮಾ ಪ್ರಶ್ನಿಸಿದಾಗ ತನಗೆ ಜ್ವರ ಬಂದಿರುವುದಾಗಿ ವಿಕ್ರಂ ಹೇಳಿದ. ಕೆಲ ವಾರಗಳ ನಂತರವೂ ಅವರಿಬ್ಬರ ನಡುವೆ ಯಾವುದೇ ದೈಹಿಕ ಸಂಪರ್ಕವಾಗದಾದಾಗ ಸುಷ್ಮಾಳಿಗೆ ಅನುಮಾನ ಬಂದಿತು. ಆಕೆ ಧೈರ್ಯ ಮಾಡಿ ಯಾಕೆ ಆ ರೀತಿ ವರ್ತಿಸುತ್ತಿರುವೆ ಎಂದು ಪ್ರಶ್ನಿಸಿದಳು. ‘ನಿಮ್ಮ ಮನೆಯವರು ಕಾರನ್ನು ಮತ್ತು ವರದಕ್ಷಿಣೆಯ ಪೂರ್ತಿ ಹಣವನ್ನು ಕೊಡುವವರೆಗೆ ನಾನು ನಿನ್ನನ್ನು ಕೂಡಲಾರೆ’ ಎಂದ.

ಗಾಬರಿಗೊಂಡ ಸುಷ್ಮಾ ತಾಯಿಗೆ ವಿಷಯ ತಿಳಿಸಿದಳು. ಅವಳ ಮಾತಾಪಿತರು ಸಾಲ ಮಾಡಿ ಒಂದು ಲಕ್ಷ ರೂಗಳನ್ನು ವಿಕ್ರಂನಿಗೆ ಕೊಟ್ಟರು. ಆತ ಸಿಟ್ಟಿಗೆದ್ದು ‘ನೀವು ಕೊಟ್ಟ ಮಾತಿನಂತೆ ಪೂರ್ತಿ ಹಣ ಮತ್ತು ಕಾರನ್ನು ಕೊಡುವವರೆಗೂ ನಿಮ್ಮ ಮಗಳನ್ನು ಪತ್ನಿಯೆಂದು ಸ್ವೀಕರಿಸಲಾರೆ’ ಎಂದ. ಮಾರನೆಯ ದಿನದಿಂದಲೇ ಮಾತುಮಾತಿಗೆ ಜಗಳ ತೆಗೆಯುತ್ತಾ ಸುಷ್ಮಾಳನ್ನು ಹೊಡೆಯಲೂ ಪ್ರಾರಂಭಿಸಿದ. ಸುಮಾರು ಆರು ತಿಂಗಳ ಕಾಲ ದೌರ್ಜನ್ಯವನ್ನು ಮೌನವಾಗಿಯೇ ಸಹಿಸಿದ ಸುಷ್ಮಾ ಕಡೆಗೊಮ್ಮೆ ಬೇಸತ್ತು ಪೊಲೀಸ್ ಠಾಣೆಗೆ ಹೋಗಿ ಗಂಡನ ವಿರುದ್ಧ ದೂರನ್ನು ನೀಡಿದಳು.

ವಿಕ್ರಂ ಮತ್ತು ಆತನ ಮಾತಾಪಿತರ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ಕಿರುಕುಳದ ದೂರು ದಾಖಲಾಯಿತು. ಈ ವಿಷಯ ತಿಳಿದ ಕೂಡಲೇ ವಿಕ್ರಂ ಆ ಊರಿನಿಂದ ಓಡಿಹೋದ. ಅವನ ಮಾತಾಪಿತರನ್ನು ಬಂಧಿಸಿದ ಪೊಲೀಸರು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರು. ಸುಮಾರು ಮೂರು ನಾಲ್ಕು ವಾರಗಳ ಕಾಲ ವಿಕ್ರಂ ಯಾರ ಕಣ್ಣಿಗೂ ಕಾಣಲಿಲ್ಲ. ಕಡೆಗೆ ಆತನ ಸೆಲ್ ಫೋನ್ ಲೋಕೇಷನ್ ಮೂಲಕ ಅವನು ಪಕ್ಕದ ಜಿಲ್ಲೆಯೊಂದರಲ್ಲಿ ಅಡಗಿದ್ದುದನ್ನು ಪೊಲೀಸರು ಪತ್ತೆ ಮಾಡಿ ಅವನನ್ನು ಬಂಧಿಸಿದರು.

ವಿಕ್ರಂನನ್ನು ವಿಚಾರಣೆ ಮಾಡುವ ವೇಳೆಯಲ್ಲಿ, ಪಕ್ಕದ ನಗರದ ಯುವತಿಯೊಬ್ಬಳು ಠಾಣಾಧಿಕಾರಿಯನ್ನು ಫೋನಿನ ಮೂಲಕ ಸಂರ್ಪಸಿ, ‘ನೀವು ವಿಕ್ರಂ ಎನ್ನುವವನನ್ನು ಬಂಧಿಸಿದ್ದೀರಿ ಎಂದು ವೃತ್ತಪತ್ರಿಕೆಯಲ್ಲಿ ಓದಿದೆ. ಆತ ನನ್ನನ್ನು ಮದುವೆಯಾಗಿ ನನಗೂ ಕಿರುಕುಳ ನೀಡಿದ್ದಾನೆ’ ಎಂದಳು. ಆಕೆಯನ್ನು ಠಾಣೆಗೆ ಕರೆಸಲಾಯಿತು. ಆಕೆ ತನ್ನ ಹೆಸರನ್ನು ಲಕ್ಷ್ಮಿ ಎಂದು ಹೇಳಿ ಠಾಣೆಯಲ್ಲಿದ್ದ ವಿಕ್ರಂನನ್ನು ಗುರುತಿಸಿ ‘ಈತ ಮೂರು ವರ್ಷಗಳ ಹಿಂದೆ ನನ್ನನ್ನು ಮದುವೆಯಾಗಿದ್ದು 3 ಲಕ್ಷರೂ ವರದಕ್ಷಿಣೆಯನ್ನು ಪಡೆದಿದ್ದ. ಇನ್ನಷ್ಟು ಹಣ ಕೊಡಬೇಕೆಂದು ಪೀಡಿಸಿ ಉಳಿದ ಹಣವನ್ನು ಕೊಡುವವರೆಗೂ ಲೈಂಗಿಕ ಕ್ರಿಯೆ ನಡೆಸುವುದಿಲ್ಲ ಎಂದು ಹೇಳಿ ನನ್ನನ್ನು ತೊರೆದ. ಪತಿಯು ತನ್ನ ಕೌಟುಂಬಿಕ ಕರ್ತವ್ಯವನ್ನು ನಿರ್ವಹಿಸದಿರುವ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ. ಲೈಂಗಿಕ ಕ್ರಿಯೆ ನಡೆಸದಿರುವುದೂ ಕೌಟುಂಬಿಕ ದೌರ್ಜನ್ಯವಾಗುತ್ತದೆ ಎಂದು ವಕೀಲರು ಹೇಳಿರುವ ಕಾರಣ ನನ್ನ ದೂರನ್ನೂ ದಾಖಲಿಸಿ’ ಎಂದು ವಿಕ್ರಂನ ವಿರುದ್ಧ ದೂರನ್ನು ಕೊಟ್ಟಳು. ಆ ದೂರನ್ನು ದಾಖಲಿಸಿ ಮುಂದಿನ ತನಿಖೆಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು.

ಸುಷ್ಮಾ ಮತ್ತು ಲಕ್ಷ್ಮಿ ಇಬ್ಬರ ದೂರುಗಳನ್ನೂ ಅಲ್ಲಗಳೆದ ವಿಕ್ರಂ, ಇಬ್ಬರೂ ಸುಳ್ಳು ಹೇಳುತ್ತಿದ್ದಾರೆಂದ. ಏತನ್ಮಧ್ಯೆ ಸ್ಥಳೀಯ ಟಿವಿ ವಾಹಿನಿಗಳು ವಿಕ್ರಂನ ಬಗ್ಗೆ ವರದಿಗಳನ್ನು ಬಿತ್ತರಿಸಿದಾಗ ನಳಿನಿ ಎನ್ನುವಾಕೆ ಪೊಲೀಸ್ ಠಾಣೆಗೆ ಬಂದು ತನ್ನನ್ನೂ ವಿಕ್ರಂ ಶೋಷಿಸಿದ್ದಾನೆ ಎಂಬ ದೂರು ನೀಡಿದಳು. ಮೂರೂ ಜನರ ದೂರುಗಳ ಬಗ್ಗೆ ಪೊಲೀಸರು ವಿಕ್ರಂನನ್ನು ತೀವ್ರ ರೀತಿಯಾಗಿ ವಿಚಾರಣೆಗೆ ಒಳಪಡಿಸಿದಾಗ ಆತ ಇದ್ದಕ್ಕಿದ್ದಂತೆ ಒಂದು ಬಾಂಬ್ ಸಿಡಿಸಿದ. ‘ನಾನು ಪುರುಷನೇ ಅಲ್ಲ, ನಾನೊಬ್ಬ ಸ್ತ್ರೀ, ಬೇಕಾದರೆ ವೈದ್ಯಕೀಯ ತಪಾಸಣೆ ಮಾಡಿಸಿ’ಎಂದ. ತಪಾಸಣೆ ಮಾಡಿದ ವೈದ್ಯರು, ವಿಕ್ರಂನಿಗೆ ಸ್ತ್ರೀಯರ ಜನನೇಂದ್ರಿಯವಿದೆ, ಆಕೆ ಹೆಣ್ಣು, ಆದರೆ ಅವಳಿಗೆ ಪುರುಷ ಸ್ವಭಾವಗಳಿರುವ ಕಾರಣ ಆಕೆ ತೃತೀಯಲಿಂಗಿ ಎಂದರು.

ಮುಂದೇನು ಮಾಡಬೇಕು ಎಂದು ಪೊಲೀಸರಿಗೆ ಗೊತ್ತಾಗಲಿಲ್ಲ. ಅಷ್ಟರಲ್ಲಿ ವಿಕ್ರಂನ ವಿರುದ್ಧ ದೂರು ಕೊಡಲು ಬೇರೆ ಊರಿನಿಂದ ರಮಾ ಎನ್ನುವ ಯುವತಿ ಬಂದಳು. ‘ನಮ್ಮ ಮದುವೆಯಾದ ರಾತ್ರಿಯೇ ನನಗೆ ವಿಕ್ರಂ ಪುರುಷನಲ್ಲ ಎನ್ನುವ ಸಂದೇಹ ಬಂದಿತ್ತು. ಆತ ಸ್ನಾನ ಮಾಡುವ ಸಮಯದಲ್ಲಿ ಅಡಗಿಕೊಂಡು ಗಮನಿಸಿ ಅವನು ಪುರುಷನಲ್ಲ ಎನ್ನುವುದನ್ನು ಅರಿತೆ. ಏಕೆ ನನ್ನನ್ನು ಮದುವೆಯಾದೆ ಎಂದು ಕೇಳಿದಾಗ ಕೇವಲ ಹಣದ ಆಸೆಗಾಗಿ ಲಗ್ನವಾದೆ ಎಂದ. ಆತ ಕೃತಕವಾದ ಪುರುಷ ಜನನಾಂಗವನ್ನು ಧರಿಸಿ ತಾನು ಪುರುಷನೆಂದು ಬಿಂಬಿಸಲು ಹೊರಟಿದ್ದ. ಈ ವಿಷಯವನ್ನು ನನ್ನ ಕುಟುಂಬದವರಿಗೆ ತಿಳಿಸಿದಾಗ ವಿಕ್ರಂ ನಮ್ಮ ಮನೆಯಿಂದ ಪರಾರಿಯಾದ. ಆತ ಎಲ್ಲಿ ಹೋದನೋ ತಿಳಿದಿರಲಿಲ್ಲ. ಆತ ಬೇರೆ ಯುವತಿಯರಿಗೆ ಮೋಸಗೊಳಿಸಿ ಬಂಧನವಾದದ್ದನ್ನು ತಿಳಿದು ದೂರು ಕೊಡಲು ಬಂದೆ’ ಎಂದಳು.

ವಿಕ್ರಂನನ್ನು ವಿಚಾರಣೆ ಮಾಡಿದಾಗ ಆತ ಹೀಗೆಂದ: ‘ನಾನು ಹೆಣ್ಣಾಗಿಯೇ ಜನ್ಮ ತಳೆದೆ. ಆದರೆ ಪ್ರಾಯಕ್ಕೆ ಬರುವಾಗ ನನಗೆ ಗಂಡಿನ ಭಾವನೆಗಳಿವೆ ಎಂದೆನಿಸಿತ್ತು. ಆದರೆ ಯಾರಿಗೂ ತಿಳಿಸಲಿಲ್ಲ. 18 ವರ್ಷ ವಯಸ್ಸಾದಾಗ ಮನೆಬಿಟ್ಟು ಮುಂಬೈಗೆ ಹೋದೆ. ಅಲ್ಲಿನ ಮನೆಯೊಂದರಲ್ಲಿ ಸೇವಕಿಯಾಗಿ ಕೆಲಸ ಮಾಡುತ್ತಿದ್ದಾಗ ಮನೆಯ ಮಾಲೀಕ ನನ್ನನ್ನು ಲೈಂಗಿಕವಾಗಿ ಶೋಷಿಸಿದ. ನಾನು ಅಲ್ಲಿಂದ ಓಡಿಹೋದ ನಂತರ ಸಹಾಯ ಮಾಡುತ್ತೇನೆಂದು ಬಂದ ಅಪರಿಚಿತನೊಬ್ಬ ನನ್ನನ್ನು ವೇಶ್ಯಾಗೃಹಕ್ಕೆ ತಳ್ಳಿದ. ಅಲ್ಲಿಯ ಸಹೋದ್ಯೋಗಿಯೊಬ್ಬಳಿಗೆ ನನ್ನ ಪರಿಸ್ಥಿತಿಯನ್ನು ವಿವರಿಸಿದೆ. ನಾನು ಲಿಂಗ ಪರಿವರ್ತನೆ ಮಾಡಿಸಿಕೊಳ್ಳಬಹುದೆಂದು ಆಕೆ ತಿಳಿಸಿದಾಗ ವೈದ್ಯರೊಬ್ಬರನ್ನು ಸಂರ್ಪಸಿದೆ. ಅವರು ಈ ರೀತಿಯ ಆಪರೇಷನ್​ಗೆ ಸಾವಿರಾರು ರೂಗಳ ವೆಚ್ಚವಾಗುವುದೆಂದು ತಿಳಿಸಿದರು. ಆ ಹಣವನ್ನು ಹೊಂದಿಸಲು ನಾನು ವೇಶ್ಯಾವೃತ್ತಿಯನ್ನು ಮುಂದುವರಿಸಬೇಕಾಯಿತು. ಎಷ್ಟು ದುಡಿದರೂ ಕೈಯಲ್ಲಿ ಹಣ ಉಳಿಯಲಿಲ್ಲ. ಆ ಜೀವನವು ಸಾಕಾಗಿ ಹುಟ್ಟೂರಿಗೆ ಬಂದೆ. ಪುರುಷರಂತೆಯೇ ಬಟ್ಟೆಬರೆಗಳನ್ನು ತೊಡಲಾರಂಭಿಸಿದೆ. ನನ್ನ ಹೆಸರು ವಿಕ್ರಂ ಎಂದು ಹೇಳಿಕೊಂಡೆ. ನನಗಾಗಲೇ ಹಲವಾರು ದುಶ್ಚಟಗಳು ಹತ್ತಿದ್ದವು. ನನ್ನನ್ನು ಪುರುಷನೆಂದು ಬಿಂಬಿಸಿ ಮದುವೆ ಮಾಡಿಕೊಂಡರೆ ವರದಕ್ಷಿಣೆ ಬರುತ್ತದೆಯೆನಿಸಿತು. ರಮಾಳನ್ನು ಲಗ್ನವಾದೆ. ಆದರೆ ಮದುವೆಯಾದ ಕೆಲವೇ ಸಮಯದಲ್ಲಿ ನನ್ನ ಗುಟ್ಟು ರಟ್ಟಾಯಿತು. ಆಗ ಅವಳ ಮನೆಯಲ್ಲಿದ್ದ ಕೆಲವು ವಸ್ತುಗಳನ್ನು ದೋಚಿ ಪರಾರಿಯಾದೆ. ಆ ಹಣ ಖಾಲಿಯಾದ ನಂತರ ಇದೇ ದಂಧೆಯನ್ನು ಮುಂದುವರಿಸಿದೆ, ನನ್ನ ನಿಜ ನಾಮಧೇಯ ಸೌಮ್ಯ’ ಎಂದಳು.

ಸೌಮ್ಯಳ ಮಾತಾಪಿತರ ಮೇಲೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ ಸೌಮ್ಯಳ ವಿರುದ್ಧ ನಂಬಿಕೆದ್ರೋಹ, ಮೋಸ ಮತ್ತು ಕಳವಿನ ಆರೋಪದ ಮೇರೆಗೆ ಪೊಲೀಸರು ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದರು. ನ್ಯಾಯಾಲಯವು ಸೌಮ್ಯಳಿಗೆ ಏಳು ವರ್ಷಗಳ ಕಠಿಣ ಕಾರಾಗೃಹ ವಾಸವನ್ನು ಮತ್ತು ಅವಳ ಮಾತಾಪಿತರಿಗೆ ಎರಡು ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿತು. ‘ಯಾರು ಶೋಷಣೆಗೊಳಗಾಗಿ ಶೋಷಣೆಯ ಬಗ್ಗೆ ಚಕಾರವನ್ನೆತ್ತುವುದಿಲ್ಲವೋ, ಅವರೇ ಬೇರಿತರರನ್ನು ಶೋಷಿಸಲು ಮುಂದಾಗುತ್ತಾರೆ’ ಎನ್ನುತ್ತಾನೆ ದಕ್ಷಿಣ ಆಫ್ರಿಕಾದ ವಾಗ್ಮಿ ಡಿ.ಜೆ.ಕ್ಯೋಸ್. ಒಂದು ವೇಳೆ ಸೌಮ್ಯಳಿಗೆ ಲಿಂಗಪರಿವರ್ತನೆ ಮಾಡಿಸಿದ್ದರೆ ಆಕೆಯ ಜೀವನ ಸುಗಮವಾಗುತ್ತಿತ್ತೇನೋ...

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)