ನ್ಯೂಸ್

ಸಂಪಾದಕೀಯ: ಆಘಾತಕಾರಿ, ಅಕ್ಷಮ್ಯ

ನಿರುಪಾದಿ ಬ್ಯಾಡಗಿ

ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೆಲವು ಕೈದಿಗಳಿಗೆ ವಿಶೇಷ ಆತಿಥ್ಯದ ವಿಚಾರ ದೇಶಮಟ್ಟದಲ್ಲಿ ಸುದ್ದಿಯಾಗಿದೆ. ಕಾರಾಗೃಹಗಳಲ್ಲಿ ನಿಯಮ ಮೀರಿ ಕೆಲ ಸವಲತ್ತು ಕಲ್ಪಿಸಲಾಗುತ್ತದೆ ಎಂಬ ಸಂಗತಿ ಹೊಸದಲ್ಲವಾದರೂ, ಈಗ ಬಯಲಾಗಿರುವ ಪ್ರಕರಣ ಭಾರಿ ಗಂಭೀರವಾದುದು. ಏಕೆಂದರೆ, ಭಯೋತ್ಪಾದನಾ ಕೃತ್ಯದ ಆರೋಪದ ಮೇಲೆ ಜೈಲಿನಲ್ಲಿರುವ ಶಂಕಿತ ಉಗ್ರ, ಹಲವು ಮಹಿಳೆಯರ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವವ- ಇಂಥವರಿಗೆಲ್ಲ ವಿಶೇಷ ಸವಲತ್ತು ನೀಡಲಾಗುತ್ತದೆ ಎಂದರೆ ಅದನ್ನು ಜೈಲು ಎನ್ನಲು ಸಾಧ್ಯವೇ? ಐಸಿಸ್ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ, ವಿಕೃತಕಾಮಿ ಉಮೇಶ್ ರೆಡ್ಡಿ ಹಾಗೂ ಚಿನ್ನ ಅಕ್ರಮ ಸಾಗಾಟ ಪ್ರಕರಣದಲ್ಲಿನ ಆರೋಪಿ ಬಳ್ಳಾರಿ ಮೂಲದ ತರುಣ್​ರಾಜ್​ಗೆ ಜೈಲಿನಲ್ಲಿ ವಿಶೇಷ ಸೌಕರ್ಯ ನೀಡಿರುವ ವಿಡಿಯೋಗಳು ಸಾರ್ವಜನಿಕವಾಗಿ ಬಹಿರಂಗವಾಗಿವೆ.

ಮೊಬೈಲ್, ಟಿವಿ ಇತ್ಯಾದಿ ಬಳಸುತ್ತಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ. ‘ಇಂಥ ಘಟನೆಯನ್ನು ಸಹಿಸಲ್ಲ. ಸಮಗ್ರ ತನಿಖೆ ನಡೆಸಿ ಕ್ರಮ ತೆಗೆದು ಕೊಳ್ಳಲಾಗುವುದು’ಎಂದು ಮುಖ್ಯಮಂತ್ರಿ ಮತ್ತು ಗೃಹಮಂತ್ರಿಯಾದಿಯಾಗಿ ಸರ್ಕಾರದ ಪ್ರಮುಖರು ಹೇಳಿದ್ದಾರೆ. ಆದರೆ ಇದು ಸಾಮಾನ್ಯ ಪ್ರಕರಣವಲ್ಲ ಎಂಬುದನ್ನು ಮರೆಯಬಾರದು. ಈ ನಡುವೆಯೇ, ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಗಳು ಮದ್ಯದ ಬಾಟಲ್ ಇಟ್ಟುಕೊಂಡು ಪಾರ್ಟಿ ಮಾಡುತ್ತಿರುವ ಮತ್ತೊಂದು ವಿಡಿಯೋ ಹೊರಬಂದಿದೆ. ಕಾರಾಗೃಹ ಇಲಾಖೆ ಅಧಿಕಾರಿಗಳು ಭಾನುವಾರ ಜೈಲಿನಲ್ಲಿ ತಪಾಸಣೆ ನಡೆಸಿದ್ದಾರೆ.

ಹಲವು ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಪ್ರಕರಣದ ಆರೋಪಿ ಮೊಬೈಲ್ ಫೋನ್ ಬಳಸುತ್ತಾನೆ ಎಂದರೆ ಏನರ್ಥ? ಆತ ಮತ್ತು ಇನ್ನೊಬ್ಬ ಮಾತಾಡಿರುವ ವಿಡಿಯೋ ಕೂಡ ಬಯಲಾಗಿದೆ. ಇಂಥವು ಇನ್ನೆಷ್ಟು ಇವೆ; ಏನೇನು ಸಂಭಾಷಣೆ ಆಗಿದೆ ಎಂಬುದು ಸರಿಯಾದ ತನಿಖೆಯಿಂದ ಮಾತ್ರ ಗೊತ್ತಾಗಬೇಕಷ್ಟೆ. ಪಾತಕ ಕೃತ್ಯಗಳಿಂದಾಗಿ ಕುಖ್ಯಾತಿಯಾದ ಉಮೇಶ್ ರೆಡ್ಡಿ ಕೈಯಲ್ಲಿ ಮೊಬೈಲ್ ಇರುವ ವಿಡಿಯೋ ವೈರಲ್ ಆಗಿದೆ.

ಆತನ ಬ್ಯಾರಕ್​ನ ವಿಶೇಷ ಕೊಠಡಿಯಲ್ಲಿ ಟಿವಿ ವ್ಯವಸ್ಥೆ ಮಾಡಲಾಗಿರುವುದು ಸಹ ಗೋಚರಿಸಿದೆ. ಹಣದ ಆಸೆಗೆ ಜೈಲು ಸಿಬ್ಬಂದಿ-ಅಧಿಕಾರಿಗಳು ನಿಯಮ ಮೀರಿ ಕೈದಿಗಳಿಗೆ ಸೌಕರ್ಯ ನೀಡುವುದು ಪೊಲೀಸರು ದಾಳಿ ಮಾಡಿ ಪರಿಶೀಲಿಸಿದಾಗ ಬಯಲಿಗೆ ಬರುವುದಿದೆ. ದಾಳಿ ಸಮಯದಲ್ಲಿ ತಂಬಾಕು, ಗಾಂಜಾ, ಮೊಬೈಲ್ ಇತ್ಯಾದಿ ದೊರೆತು ಸುದ್ದಿಯಾಗುತ್ತದೆ. ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಈ ಹಿಂದೆ ವಿಶೇಷ ಸವಲತ್ತು ನೀಡಿದ ಸಂಗತಿ ಬಯಲಾಗಿ ಭಾರಿ ವಿವಾದವಾಗಿತ್ತು. ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಿ ಮತ್ತೆ ಬೆಂಗಳೂರಿಗೆ ತರಲಾಗಿತ್ತು. ಈಗ ಬೆಳಕಿಗೆ ಬಂದಿರುವ ಸಂಗತಿ ಕಾರಾಗೃಹಗಳಲ್ಲಿ ಮಾಮೂಲು ನಡೆಯುವಂಥದ್ದು ಎಂದು ನಿರ್ಲಕ್ಷಿಸುವ ಹಾಗಿಲ್ಲ. ಈಗಿನ ಅಕ್ಷಮ್ಯ ಕೃತ್ಯಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಜರುಗಿಸಬೇಕಾದುದು ಆದ್ಯತೆ ಮೇಲೆ ಆಗಬೇಕಾದ ಕೆಲಸ. ಅದರ ಜತೆಗೆ, ನ್ಯೂನತೆ ಗುರುತಿಸಿ ಮುಂದೆ ಇಂಥದ್ದು ಘಟಿಸದ ಹಾಗೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ತುರ್ತು ಎದುರಾಗಿದೆ. ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಇದು ಸವಾಲಿನ ಸನ್ನಿವೇಶ. ಏಕೆಂದರೆ, ವ್ಯವಸ್ಥೆಯೊಂದರ ಮೇಲೆ ಜನರ ವಿಶ್ವಾಸ ತಗ್ಗುವುದು ಅಪೇಕ್ಷಣೀಯವಲ್ಲ.