ನ್ಯೂಸ್

ಸಂಪಾದಕೀಯ: ಆಘಾತಕಾರಿ ಕೃತ್ಯ

ನಿರುಪಾದಿ ಬ್ಯಾಡಗಿ

ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ 71 ವರ್ಷದ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿದ ಘಟನೆ ಸೋಮವಾರ ನಡೆದಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇಂಥ ಬೇಜವಾಬ್ದಾರಿ ವರ್ತನೆಗಳಿಗೆ ಸಮಾಜದಲ್ಲಿ ಅವಕಾಶ ಮಾಡಿಕೊಡಬಾರದು. ಸಂವಿಧಾನವನ್ನು ಎತ್ತಿ ಹಿಡಿಯುವ, ಸಂವಿಧಾನ ಮೌಲ್ಯಗಳನ್ನು ರಕ್ಷಿಸುತ್ತಿರುವ ವ್ಯಕ್ತಿಗಳ ಮೇಲೆಯೇ ಇಂಥ ಘಟನೆಗಳು ನಡೆದರೆ ಜನಸಾಮಾನ್ಯರ ಪಾಡೇನು? ಸರ್ಕಾರ ಇಂಥ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ‘ಇಂತಹ ಘಟನೆಗಳಿಂದ ನೀವು ವಿಚಲಿತರಾಗಬೇಡಿ. ನಾನು ವಿಚಲಿತಗೊಳ್ಳುವುದಿಲ್ಲ. ಇದ್ಯಾವುದು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದು ಗವಾಯಿಯವರು ಸ್ಪಷ್ಟಪಡಿಸಿದ್ದರೂ, ಸಂಬಂಧಪಟ್ಟವರು ಎಚ್ಚರಿಕೆ ವಹಿಸಬೇಕಿದೆ.

ವ್ಯವಸ್ಥೆಯ ಬಗೆಗೆ ಆಕ್ರೋಶ ಇರುವುದು, ಭಿನ್ನಾಭಿಪ್ರಾಯಗಳು ಇರುವುದು ಸಹಜ. ಅದನ್ನು ಜನರು ಕಾಲಕಾಲಕ್ಕೆ ವಿಭಿನ್ನ ರೂಪದಲ್ಲಿ ಪ್ರದರ್ಶಿಸುತ್ತಾರೆ. ಪ್ರಜಾತಂತ್ರದಲ್ಲಿ ಅದಕ್ಕೆ ಅವಕಾಶವೂ ಇದೆ. ಆದರೆ, ಯಾವುದೇ ಅಸಮಾಧಾನ ಹತಾಶೆಯಾಗಿ ಪರಿವರ್ತನೆಯಾಗಬಾರದು. ಬೇಜವಾಬ್ದಾರಿ ಕೃತ್ಯಗಳು ಅಪಾಯಕಾರಿ ಮನಸ್ಥಿತಿಯ ದ್ಯೋತಕ. ಇಂಥ ಮನಸ್ಥಿತಿಯನ್ನು, ಅದರ ಅಪಾಯವನ್ನು ಆರಂಭದಲ್ಲೇ ಮನಗಂಡು, ಸೂಕ್ತ ಮದ್ದೆರೆಯದಿದ್ದಲ್ಲಿ ಸಮಸ್ಯೆ ಪೆಡಂಭೂತದಂತೆ ಬೆಳೆದು, ದೊಡ್ಡ ಸವಾಲಾಗಿ ಕಾಡುತ್ತದೆ. ಈ ಹಿಂದಿನ ವರ್ಷಗಳಲ್ಲಿ ಕೇಂದ್ರ ಸಚಿವರ ಮೇಲೆ, ಮುಖ್ಯಮಂತ್ರಿಗಳ ಮೇಲೆ ಶೂ ಎಸೆತಕ್ಕೆ ಯತ್ನಿಸಿದ ಘಟನೆಗಳು ನಡೆದಿದ್ದು, ಈಗ ಇಂಥ ಕೃತ್ಯ ಅತಿರೇಕದ ಮಟ್ಟ ತಲುಪಿರುವುದು ದುರ್ದೈವಕರ.

‘ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿಗಳ ಮಾತುಗಳನ್ನು ತಪು್ಪ ಅರ್ಥ ಬರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತದೆ’ ಎಂದು ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮಂಗಳವಾರ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನ್ಯಾಯಾಂಗದ ಘನತೆ ಮತ್ತು ಸ್ವಾತಂತ್ರ್ಯ ಬಹಳ ಮುಖ್ಯ. ಇಂಥ ವ್ಯವಸ್ಥೆಯ ಮೇಲೆ ಹಲ್ಲೆಗೆ ಯತ್ನಿಸುವುದೆಂದರೆ ಸಂವಿಧಾನಕ್ಕೆ ಅಪಚಾರ ಮಾಡಿದಂತೆಯೇ. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ‘ಇದೊಂದು ಆಘಾತಕಾರಿಯಾದ ಖಂಡಿಸಲೇ ಬೇಕಾದ ಕೃತ್ಯವಾಗಿದೆ. ವಕೀಲರೊಬ್ಬರು ಮಾಡುವಂಥ ಕೆಲಸ ಇದಲ್ಲ. ಪೀಠ ಮತ್ತು ವಕೀಲರ ಮಧ್ಯೆ ಇರುವ ಪರಸ್ಪರ ಗೌರವಪೂರ್ಣ ಸಂಬಂಧದ ಮೂಲಾಧಾರರ ಮೇಲೆಯೇ ಈ ಕೃತ್ಯವು ದಾಳಿ ನಡೆಸಿದೆ’ ಎಂದು ಸುಪ್ರೀಂ ಕೋರ್ಟ್​ನ ವಕೀಲರ ಸಂಘ ಪ್ರತಿಕ್ರಿಯಿಸಿದೆ. ‘ಸಿಜೆಐ ಅವರೊಂದಿಗೆ ಮಾತನಾಡಿದೆ. ಅವರ ಮೇಲಿನ ದಾಳಿಯು ಪ್ರತಿಯೊಬ್ಬ ಭಾರತೀಯನಿಗೂ ಸಿಟ್ಟು ತರಿಸಿದೆ. ಇಂಥ ಬೇಜವಾಬ್ದಾರಿ ಕೃತ್ಯಕ್ಕೆ ಸಮಾಜದಲ್ಲಿ ಅವಕಾಶವಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಂವಿಧಾನವನ್ನು ಎತ್ತಿ ಹಿಡಿಯುವ, ಅದರ ಮೌಲ್ಯಗಳನ್ನು ರಕ್ಷಿಸುವ ಪ್ರಯತ್ನಗಳಿಗೆ ಬೆಂಬಲ ನೀಡಬೇಕಾಗಿದೆ. ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಲ್ಲಿ ಅದರ ಪರಿಣಾಮ ಘೋರ. ಹಾಗಾಗುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಿದೆ. ಭವಿಷ್ಯದಲ್ಲಿ ಇಂಥ ಘಟನೆಗಳು ನಡೆಯದಂತೆ ನಿಗಾ ವಹಿಸಬೇಕಿದೆ. ನ್ಯಾಯಾಂಗ ಸ್ವತಂತ್ರವಾಗಿ ಕೆಲಸ ಮಾಡಲು ಮುಕ್ತ ವಾತಾವರಣ ಕಲ್ಪಿಸಿಕೊಡಬೇಕಿದೆ. ಅದರ ಘನತೆಗೆ ಯಾವುದೇ ಕುಂದು ಬಾರದಂತೆ ನೋಡಿಕೊಳ್ಳಬೇಕಿದೆ. ಭಿನ್ನಾಭಿಪ್ರಾಯ ಎಂಬುದು ಯಾವುದೇ ಕಾರಣಕ್ಕೂ ದ್ವೇಷದ ರೂಪ ತಳೆಯಬಾರದು. ಹಾಗಾದ್ದಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ನಿಜಕ್ಕೂ ಮಾರಕ.