ದೇವಾಲಯಗಳು ಹಾಗೂ ಪವಿತ್ರ ತೀರ್ಥಕ್ಷೇತ್ರಗಳು ಪ್ರತಿಯೊಬ್ಬರಿಗೂ ಮನಸ್ಸಿನ ಶಾಂತಿ, ನೆಮ್ಮದಿ ನೀಡುವ ತಾಣಗಳು. ಲಕ್ಷಾಂತರ ಜನರು ತಮ್ಮ ದೈನಂದಿನ ಜೀವನದ ಜಂಜಾಟಗಳಿಂದ ದೂರವಾಗಿ, ಭಗವಂತನ ದರ್ಶನ ಪಡೆದು ಸಮಾಧಾನ ಕಂಡುಕೊಳ್ಳಲು ಈ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹ ಪವಿತ್ರ ಸ್ಥಳಗಳಲ್ಲಿ ಸಂಭವಿಸುತ್ತಿರುವ ಕಾಲ್ತುಳಿತ, ನೂಕುನುಗ್ಗಲು ಹಾಗೂ ಸಾವು-ನೋವಿನ ಘಟನೆಗಳು ಇಡೀ ಸಮಾಜವನ್ನು ಆತಂಕಕ್ಕೆ ದೂಡುತ್ತಿವೆ.
ಬಿಹಾರದ ಪ್ರಸಿದ್ಧ ಅಶೋಕಧಾಮ ದೇಗುಲದಲ್ಲಿ ಶ್ರಾವಣ ಸೋಮವಾರದಂದು ಸಂಭವಿಸಿದ ಕಾಲ್ತುಳಿತದಲ್ಲಿ 7 ಭಕ್ತರು ಪ್ರಾಣ ಕಳೆದುಕೊಂಡಿರುವುದು ಮತ್ತು ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಲೇಶ್ವರ ದೇವಾಲಯದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಅನೇಕ ಭಕ್ತರು ಗಾಯಗೊಂಡಿರುವುದು ದುರದೃಷ್ಟಕರ. ಹಬ್ಬಗಳು, ಜಾತ್ರೆಗಳು ಹಾಗೂ ವಿಶೇಷ ದಿನಗಳಲ್ಲಿ ದೇವಾಲಯಗಳಿಗೆ ಆಗಮಿಸುವ ಭಕ್ತರ ಸಂಖ್ಯೆಯನ್ನು ಮುಂಚಿತವಾಗಿ ಅಂದಾಜಿಸಿ, ಪೂರ್ಣಪ್ರಮಾಣದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಲ್ಲಿ ಸ್ಥಳೀಯ ಆಡಳಿತ ಮತ್ತು ದೇವಾಲಯ
ಟ್ರಸ್ಟ್ಗಳು ಪದೆಪದೇ ವಿಫಲವಾಗುತ್ತಿರುವುದು ವಿಷಾದನೀಯ.
ದುರಂತ ಸಂಭವಿಸಿದಾಗ ತನಿಖಾ ಸಮಿತಿ ರಚಿಸುವುದು, ಮೃತರ ಕುಟುಂಬಕ್ಕೆ ಪರಿಹಾರ ಘೊಷಿಸುವುದು, ಸಿಬ್ಬಂದಿಯನ್ನು ಅಮಾನತು ಮಾಡುವುದರೊಂದಿಗೆ ಸರ್ಕಾರದ ಹೊಣೆಗಾರಿಕೆ ಮುಗಿಯುವುದಿಲ್ಲ. ಇಂತಹ ಘಟನೆಗಳು ಮತ್ತೆಂದೂ ಮರುಕಳಿಸದಂತೆ ಶಾಶ್ವತ ಹಾಗೂ ವೈಜ್ಞಾನಿಕ ಪರಿಹಾರಗಳನ್ನು ರೂಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ.
ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಜನಸಂದಣಿ ನಿರ್ವಹಣೆ ಮಾಡುವುದು ಕಷ್ಟದ ಕೆಲಸವೇನಲ್ಲ.
ಕೃತಕ ಬುದ್ಧಿಮತ್ತೆ ಆಧಾರಿತ ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾಗಳು, ನಿರ್ದಿಷ್ಟ ಪ್ರದೇಶದಲ್ಲಿನ ಜನಸಾಂದ್ರತೆಯನ್ನು ಕ್ಷಣಕ್ಷಣಕ್ಕೂ ನಿಖರವಾಗಿ ಅಳೆಯುವ ಸೆನ್ಸರ್ಗಳು, ರಿಯಲ್ ಟೈಮ್ ಪ್ರವೇಶ ನಿಯಂತ್ರಣ ವ್ಯವಸ್ಥೆಗಳು ಇಂದು ಲಭ್ಯವಿವೆ. ಇವುಗಳನ್ನು ಬಳಸಿಕೊಂಡು ದರ್ಶನಕ್ಕೆ ಬರುವ ಜನರ ಸಂಖ್ಯೆಯನ್ನು ಕ್ಷಣಮಾತ್ರದಲ್ಲಿ ಅಳೆದು, ಮಿತಿ ಮೀರಿದಾಗ ಸ್ವಯಂಚಾಲಿತವಾಗಿ ಪ್ರವೇಶವನ್ನು ತಡೆಯುವ ಅಥವಾ ಜನರನ್ನು ಬೇರೆ ಮಾರ್ಗಗಳಿಗೆ ತಿರುಗಿಸುವ ಕೆಲಸವನ್ನು ಮಾಡಲು ಸಾಧ್ಯವಿದೆ.
ಆದರೆ, ಹೆಚ್ಚಿನ ದೇವಾಲಯಗಳಲ್ಲಿ ಈ ತಂತ್ರಜ್ಞಾನಗಳ ಅಳವಡಿಕೆಯ ಅಭಾವ ಎದ್ದು ಕಾಣುತ್ತಿದೆ. ಸ್ಪಷ್ಟವಾದ ಕ್ಲೌಡ್ ಮ್ಯಾನೇಜ್ವೆುಂಟ್ ಮಾರ್ಗಸೂಚಿ ಜಾರಿಗೆ ತರುವುದು ತಕ್ಷಣವೇ ಆಗಬೇಕಾದ ಕೆಲಸ. ಪ್ರವೇಶ ಮತ್ತು ನಿರ್ಗಮನಕ್ಕೆ ಒಂದೇ ದಾರಿಯಿರಬಾರದು. ಭಕ್ತರು ಒಂದೇ ದಿಕ್ಕಿನಲ್ಲಿ ಸುಗಮವಾಗಿ ಸಾಗುವಂತ ಏಕಮುಖ ಸಂಚಾರ ವ್ಯವಸ್ಥೆ ರೂಪಿಸಬೇಕು. ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಪ್ರತಿಯೊಬ್ಬ ಭಕ್ತನಿಗೂ ನಿರ್ದಿಷ್ಟ ದರ್ಶನದ ಸಮಯ ನಿಗದಿಪಡಿಸಬೇಕು. ಇದರಿಂದ ಒಂದೇ ಸಮಯದಲ್ಲಿ ಲಕ್ಷಾಂತರ ಜನರು ಬರುವುದು ತಪ್ಪುತ್ತದೆ.
ಕಾಲ್ತುಳಿತದ ಲಕ್ಷಣಗಳು ಕಂಡುಬಂದಾಗ ಜನರು ತಕ್ಷಣ ಹೊರಹೋಗಲು ಅನುಕೂಲವಾಗುವಂತೆ ತುರ್ತು ನಿರ್ಗಮನ ದಾರಿಗಳನ್ನು ಸದಾ ಮುಕ್ತವಾಗಿಡಬೇಕು. ಆಪತ್ಕಾಲದಲ್ಲಿ ಜನರನ್ನು ಶಾಂತಚಿತ್ತದಿಂದ ನಿಯಂತ್ರಿಸುವ ಮತ್ತು ಪ್ರಾಥಮಿಕ ಚಿಕಿತ್ಸೆ ನೀಡುವುದಕ್ಕೆ ಸಿಬ್ಬಂದಿಯನ್ನು ತರಬೇತುಗೊಳಿಸಬೇಕು. ಶ್ರದ್ಧೆ ಮತ್ತು ಭಕ್ತಿ ಎಷ್ಟೇ ಮುಖ್ಯವಾಗಿದ್ದರೂ, ಜನರ ಜೀವ ರಕ್ಷಣೆ ಪ್ರಥಮ ಆದ್ಯತೆಯಾಗಬೇಕು. ತಂತ್ರಜ್ಞಾನದ ಸರಿಯಾದ ಬಳಕೆ, ಕಟ್ಟುನಿಟ್ಟಿನ ನಿಯಮಾವಳಿಗಳು ಹಾಗೂ ಅಧಿಕಾರಿಗಳ ಜವಾಬ್ದಾರಿಯುತ ನಡವಳಿಕೆಯಿಂದ ಮಾತ್ರವೇ ಧಾರ್ವಿುಕ ಕ್ಷೇತ್ರಗಳನ್ನು ಸುರಕ್ಷಿತ ತಾಣಗಳನ್ನಾಗಿ ಕಾಯ್ದುಕೊಳ್ಳಲು ಸಾಧ್ಯ.