ಭಾರತದಲ್ಲಿ ಹೂಡಿಕೆ ಮಾಡಲು ರಷ್ಯಾ ಸಿದ್ಧವಿದೆ ಎಂದು ಹೇಳಿರುವ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಪೂರಕವಾದ ಸ್ಥಿರತೆಯನ್ನು ಸಾಧ್ಯವಾಗಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಶ್ಲಾಘಿಸಿದ್ದಾರೆ. ಬುಧವಾರ ಮಾಸ್ಕೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಪುತಿನ್, ‘ಭಾರತದ ನಾಯಕತ್ವವು, ಭಾರತ ಮೊದಲು ಎನ್ನುವ ನೀತಿಯನ್ನು ಪಾಲಿಸುತ್ತಿದೆ. ಹೀಗಾಗಿ ಭಾರತದ ಪ್ರಧಾನಿ ಮತ್ತು ಭಾರತ ಸರ್ಕಾರದ ಅಧಿಕಾರಿಗಳು ಸ್ಥಿರತೆಯನ್ನು ತರುತ್ತಿದ್ದಾರೆ. ಭಾರತದಲ್ಲಿನ ಹೂಡಿಕೆಗಳು ಲಾಭದಾಯಕ ಎಂಬುದು ನಮ್ಮ ನಂಬಿಕೆ’ ಎಂದು ಹೇಳಿರುವ ಅವರು, ‘ಆಮದಿಗೆ ಪರ್ಯಾಯ ಕಂಡುಕೊಳ್ಳುವ ರಷ್ಯಾದ ಕ್ರಮವು ಭಾರತದ ಮೇಕ್ ಇನ್ ಇಂಡಿಯಾ ಯೋಜನೆಯಂತೆಯೇ ಇದೆ’ ಎಂದಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ರಷ್ಯಾ ನಡುವಿನ ರಾಜತಾಂತ್ರಿಕ ಸಂಬಂಧ ಗಮನಾರ್ಹವಾಗಿ ಸುಧಾರಣೆಯಾಗಿದೆ. ಅಂತಾರಾಷ್ಟ್ರೀಯ ವಲಯದಲ್ಲಿ ಹೆಚ್ಚಿರುವ ಭಾರತದ ಶಕ್ತಿಯನ್ನು ಸರಿಯಾಗಿ ಗ್ರಹಿಸಿರುವ ಪುತಿನ್, ಸ್ನೇಹವನ್ನು ಈಗ ಹೂಡಿಕೆಯ ಹಾದಿಯಲ್ಲೂ ವಿಸ್ತರಿಸುತ್ತಿರುವುದು ಸ್ವಾಗತಾರ್ಹ. ರಷ್ಯಾದ ಅತಿದೊಡ್ಡ ತೈಲ ಕಂಪನಿಯಾಗಿರುವ ರೊಸ್ನೆಫ್ಟ್ ಈಗಾಗಲೇ ಭಾರತದಲ್ಲಿ 20 ಬಿಲಿಯನ್ ಡಾಲರ್ (ಅಂದಾಜು 1.69 ಲಕ್ಷ ಕೋಟಿ ರೂಪಾಯಿ) ಹೂಡಿಕೆ ಮಾಡಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಕಂಪನಿಗಳು ತಯಾರಿಕಾ ಘಟಕಗಳನ್ನು ಸ್ಥಾಪಿಸುವ ಮೂಲಕ ಹೂಡಿಕೆ ಮಾಡಲಿವೆ. ಇದರಿಂದ ಉಭಯ ದೇಶಗಳ ಬಾಂಧವ್ಯದ ಹಾದಿ ಮತ್ತಷ್ಟು ವಿಸ್ತಾರವಾಗಲಿದೆ. ಇದೇ ವರ್ಷದ ಜುಲೈನಲ್ಲಿ ರಷ್ಯಾಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಪುತಿನ್ ಅವರ ಜತೆ ವ್ಯಾಪಾರ, ಇಂಧನ, ಹೂಡಿಕೆ, ಆರ್ಥಿಕತೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದರು. ‘ಜಗತ್ತು ಆಹಾರ, ಇಂಧನ ಮತ್ತು ರಾಸಾಯನಿಕ ಗೊಬ್ಬರದ ಕೊರತೆಯಿಂದ ತತ್ತರಿಸುತ್ತಿದ್ದಾಗ ಈ ಯಾವುದೇ ಸಮಸ್ಯೆ ನಮ್ಮ ರೈತರಿಗೆ ಎದುರಾಗಲು ನಾವು ಬಿಡಲಿಲ್ಲ. ಈ ವಿಷಯದಲ್ಲಿ ರಷ್ಯಾ ಜತೆಗಿನ ನಮ್ಮ ಸ್ನೇಹ ಪ್ರಮುಖ ಪಾತ್ರ ವಹಿಸಿತು’ ಎಂದು ನೆನಪಿಸಿಕೊಂಡಿದ್ದ ಮೋದಿ, ‘ಉಭಯ ದೇಶಗಳ ನಡುವಿನ ಇಂಧನ ಕ್ಷೇೕತ್ರದ ಸಹಕಾರದಿಂದ ಇಡೀ ಜಗತ್ತಿಗೆ ಒಳಿತಾಗಿದೆ’ ಎಂಬುದನ್ನೂ ಹೇಳಲು ಮರೆಯಲಿಲ್ಲ.
ಅಮೆರಿಕ, ರಷ್ಯಾ ಸೇರಿದಂತೆ ಹಲವು ದೇಶಗಳು ಭಾರತದಲ್ಲಿ ಹೂಡಿಕೆಗೆ ಮುಂದಾಗುತ್ತಿರುವ ಈ ಮಹತ್ವದ ಸಂದರ್ಭದಲ್ಲಿ, ಉದ್ಯಮಿಯೊಬ್ಬರ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮುಜುಗರ ಸೃಷ್ಟಿಸಲು ಯತ್ನಿಸುತ್ತಿರುವುದು ಸರಿಯಲ್ಲ. ಲೋಕಸಭೆ ಚುನಾವಣೆಯ ಪ್ರಚಾರದ ಸಮಯದಲ್ಲೂ ಕಾಂಗ್ರೆಸ್, ಸಮಾಜವಾದಿ ಪಕ್ಷಗಳು ಅದಾನಿ ಅಸ್ತ್ರವನ್ನು ಪ್ರಯೋಗಿಸಿದರೂ, ಅದರಿಂದ ಹೆಚ್ಚೇನೂ ಪ್ರಯೋಜನವಾಗಲಿಲ್ಲ ಎಂಬುದು ಗೊತ್ತಿರುವಂಥದ್ದೇ. ರಾಜಕೀಯ ಹಿತಾಸಕ್ತಿಯನ್ನೇ ಸಾಧಿಸುವ ಬದಲು ಭಾರತ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ದೃಢ ಹೆಜ್ಜೆಗಳನ್ನು ಪ್ರಾಮಾಣಿಕ ನೆಲೆಯಲ್ಲಿ ಗಮನಿಸಬೇಕು. ದೇಶದಲ್ಲಿ ಹೂಡಿಕೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿದೆ ಎಂಬುದು ಹಲವು ಆಯಾಮದಿಂದ ಮಹತ್ವದ ಅಂಶ. ಹೂಡಿಕೆ ಹೆಚ್ಚಿದಂತೆ ದೇಶದಲ್ಲಿ ಮೂಲಸೌಕರ್ಯಗಳು ವಿಸ್ತಾರಗೊಂಡು, ಉದ್ಯೋಗಸೃಷ್ಟಿಯಾಗುತ್ತವೆ ಮತ್ತು ಅದರಿಂದ ಆರ್ಥಿಕತೆ ಬಲಗೊಳ್ಳುತ್ತದೆ. ಹೀಗಿರುವಾಗ ಹೂಡಿಕೆ ಸ್ನೇಹಿ ವಾತಾವರಣಕ್ಕೆ ಧಕ್ಕೆ ಒದಗಿಸುವಂಥ ಪ್ರಯತ್ನವನ್ನು ಪ್ರತಿಪಕ್ಷಗಳು ಮಾಡಬಾರದು. ಉದ್ಯಮಿಯ ಯಾವುದೋ ಒಂದು ಪ್ರಕರಣಕ್ಕಾಗಿ ಸಂಸತ್ತಿನ ಕಲಾಪವನ್ನು ನಡೆಯಲು ಬಿಡದಿರುವುದು ಪ್ರಜಾತಂತ್ರ ಮೌಲ್ಯಗಳಿಗೆ ವಿರುದ್ಧವಾದುದು.