ನ್ಯೂಸ್

ಸಂಪಾದಕೀಯ | ಉನ್ನತ ಹುದ್ದೆಗಳಿಗೆ ಖಾಸಗಿ ಕ್ಷೇತ್ರದ ತಜ್ಞರ ನೇಮಕ; ಗಮನಾರ್ಹ ಪ್ರಯೋಗ

ಕೇಂದ್ರ ಸರ್ಕಾರದ ಆರು ಇಲಾಖೆಗಳಲ್ಲಿ 17 ಹಿರಿಯ ಅಧಿಕಾರಿಗಳ ಹುದ್ದೆಗಳಿಗೆ ಖಾಸಗಿ ಕ್ಷೇತ್ರದಿಂದ ಲ್ಯಾಟರಲ್ ಎಂಟ್ರಿ ವಿಧಾನದಲ್ಲಿ ನೇಮಕ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿರುವುದು ಜಡ್ಡುಗಟ್ಟಿದ ಅಧಿಕಾರಶಾಹಿ ವ್ಯವಸ್ಥೆಗೆ ಚುರುಕು ಮುಟ್ಟಿಸುವ, ಹೊಸ ಆಲೋಚನೆ ಮತ್ತು ಪರಿಣತಿಯನ್ನು ಆಡಳಿತದಲ್ಲಿ ತರುವ ಸಕಾರಾತ್ಮಕ ಕ್ರಮ ಎಂದೇ ಪರಿಗಣಿಸಬಹುದಾಗಿದೆ.

ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಅಂದಾಜು 1500 ಐಎಎಸ್ ಅಧಿಕಾರಿಗಳ ಕೊರತೆ ಇದ್ದು, ಲ್ಯಾಟರಲ್ ಎಂಟ್ರಿ ನೇಮಕಾತಿಯು ಪರಿಣತರ ಸೇವೆಯನ್ನು ಲಭ್ಯವಾಗಿಸುವುದಲ್ಲದೆ, ಈ ಕೊರತೆಯನ್ನು ಸ್ವಲ್ಪ ಮಟ್ಟಿಗೆ ನಿವಾರಿಸಲು ನೆರವಾಗಬಹುದಾಗಿದೆ. ಸ್ವಜನಪಕ್ಷಪಾತಕ್ಕೆ ಅವಕಾಶ ನೀಡದೆ, ಪರಿಣತಿ ಮತ್ತು ದಕ್ಷತೆಯ ಮಾನದಂಡವನ್ನು ಅನುಸರಿಸುವ ಮೂಲಕ ಪಾರದರ್ಶಕವಾಗಿ ಇಂತಹ ನೇಮಕಾತಿ ನಡೆಸಿದರೆ ಮಾತ್ರ ಉದ್ದೇಶಿತ ಫಲ ದೊರೆಯುತ್ತದೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಇಂತಹ ನೇಮಕಾತಿಗೆ ಮುಂದಾಗಿರುವುದು ಇದೇ ಮೊದಲ ಬಾರಿಯೇನಲ್ಲ. 2018ರಲ್ಲಿ ಮೊದಲಿಗೆ ಇಂತಹ ಕ್ರಮ ಕೈಗೊಂಡಿದ್ದು, ಇದುವರೆಗೆ ಮೂರು ಬಾರಿ ಇಂತಹ ನೇಮಕಾತಿ ಕೈಗೊಳ್ಳಲಾಗಿದೆ. ಹೀಗಾಗಿ, ಈ ರೀತಿಯ ನೇಮಕಾತಿಯು ಉತ್ತಮ ಫಲಿತಾಂಶ ನೀಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಮತ್ತಷ್ಟು ನೇಮಕಾತಿಗೆ ಸರ್ಕಾರ ಮುಂದಾಗಿರಬಹುದಾಗಿದೆ. ವಿವಿಧ ಇಲಾಖೆಗಳಲ್ಲಿ ಗ್ರೂಪ್ ಎ ಅಧಿಕಾರಿಗಳ ಮಟ್ಟದಲ್ಲಿ ಸರ್ಕಾರಕ್ಕೆ ಸೇರಲು ರಾಷ್ಟ್ರ ನಿರ್ವಣಕ್ಕೆ ಕೊಡುಗೆ ನೀಡಲು ಸಿದ್ಧರಿರುವ ಪ್ರತಿಭಾವಂತ ಮತ್ತು ಪ್ರೇರಿತ ಭಾರತೀಯ ಪ್ರಜೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಕ್ಕೆ ತಾಜಾ ಪ್ರತಿಭೆಯನ್ನು ಒದಗಿಸುವುದು ಹಾಗೂ ಉತ್ತಮ ಮಾನವ ಸಂಪನ್ಮೂಲ ಪಡೆದುಕೊಳ್ಳುವುದು ಈ ನೇಮಕಾತಿಯ ಉದ್ದೇಶವಾಗಿದೆ.

ಲ್ಯಾಟರಲ್ ಎಂಟ್ರಿ ಎಂಬುದು ಖಾಸಗಿ ವಲಯದಲ್ಲಿನ ತಜ್ಞರುಗಳನ್ನು ಸರ್ಕಾರಿ ಸಂಸ್ಥೆ, ಇಲಾಖೆ ಮತ್ತು ಸಚಿವಾಲಯಗಳಲ್ಲಿ ನೇಮಕ ಮಾಡಿಕೊಳ್ಳುವುದಾಗಿದೆ. ಆರ್ಥಿಕ ವ್ಯವಹಾರ, ಕೃಷಿ, ಸಹಕಾರ, ರಸ್ತೆ ಸಾರಿಗೆ, ನಾಗರಿಕ ವಿಮಾನಯಾನ, ವಾಣಿಜ್ಯ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವವರನ್ನು ದೇಶದ ಪ್ರಯೋಜನಕ್ಕಾಗಿ ಸೇವೆ ಸಲ್ಲಿಸಲು ಲ್ಯಾಟರಲ್ ಎಂಟ್ರಿ ಮೂಲಕ ನೇಮಕ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಆಡಳಿತದಲ್ಲಿ ದಕ್ಷತೆಯನ್ನು ಸುಧಾರಿಸಲು, ಸ್ಪರ್ಧೆಯನ್ನು ಸೃಷ್ಟಿಸಲು, ವಿಶೇಷ ಪರಿಣತಿ ಬಳಸಿಕೊಳ್ಳಲು ಲ್ಯಾಟರಲ್ ನೇಮಕಾತಿಗಳು ನೆರವಾಗಬಹುದಾದರೂ ಸೂಕ್ತವಾಗಿ ನಿಭಾಯಿಸದಿದ್ದರೆ ಒಂದಿಷ್ಟು ಅನನುಕೂಲಗಳನ್ನು ಸಹ ಸೃಷ್ಟಿಸಬಹುದಾಗಿದೆ.

ಹಾಲಿ ಅಧಿಕಾರಿಗಳಿಗೆ ಹಿಂಬಡ್ತಿ ಭಾವನೆಯನ್ನು ಇದು ಮೂಡಿಸಬಹುದಾಗಿದೆ. ಸರ್ಕಾರಿ ಮತ್ತು ಖಾಸಗಿ ವಲಯದ ಭಿನ್ನ ಸೇವಾ ವಾತಾವರಣ ಕೂಡ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಹುದಾಗಿದೆ. ಹೀಗಾಗಿ, ಲ್ಯಾಟರಲ್ ಎಂಟ್ರಿಯಲ್ಲಿ ಆಯ್ಕೆಯಾಗುವವರು ಸರ್ಕಾರಿ ವ್ಯವಸ್ಥೆಯ ವಿಭಿನ್ನವಾದ ಕಾರ್ಯನಿರ್ವಹಣೆಗೆ ಹೊಂದಿಕೊಳ್ಳುವ ಕೌಶಲ ಉಳ್ಳವರಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾದಂತಹ ಅನೇಕ ಅಭಿವೃದ್ಧಿ ಹೊಂದಿದ ದೇಶಗಳು ಲ್ಯಾಟರಲ್ ಎಂಟ್ರಿಯನ್ನು ಬಳಸುತ್ತವೆ. ಸರ್ಕಾರದ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿರುವ ಭಾರತದ ನಾಗರಿಕ ಸೇವೆಗೆ (ಐಎಎಸ್) ಸುಧಾರಣೆಯ ಅಗತ್ಯವಿದೆ. ಲ್ಯಾಟರಲ್ ನೇಮಕಾತಿಯ ಅಗತ್ಯ ಮತ್ತು ಪ್ರಯೋಜನಗಳ ಕುರಿತು ಸರ್ಕಾರ ಸಾರ್ವಜನಿಕರಿಗೆ ಮನವರಿಕೆ ಮಾಡಿದಲ್ಲಿ ಜನರ ವಿಶ್ವಾಸವೂ ಹೆಚ್ಚಬಹುದಾಗಿದೆ.