ರಾಷ್ಟ್ರದ ರಾಜಧಾನಿ ದೆಹಲಿಯ 45 ಶಾಲೆ ಮತ್ತು 3 ಕಾಲೇಜುಗಳಿಗೆ ಹಾಗೂ ರಾಜ್ಯದ ರಾಜಧಾನಿ ಬೆಂಗಳೂರಿನ 40 ಖಾಸಗಿ ಶಾಲೆಗಳಿಗೆ ಶುಕ್ರವಾರ ಒಂದೇ ದಿನ ಹುಸಿ ಬಾಂಬ್ ಬೆದರಿಕೆಯ ಸಂದೇಶ ಬಂದಿದ್ದರಿಂದ ಸೃಷ್ಟಿಯಾದ ಕೋಲಾಹಲ, ಆತಂಕ ಅಷ್ಟಿಷ್ಟಲ್ಲ. ಮಕ್ಕಳು ಗಡಿಬಿಡಿಯಿಂದ ತರಗತಿಗಳಿಂದ ಹೊರಬಂದರೆ, ಪಾಲಕರು ಕೂಡಲೇ ಶಾಲೆಗೆ ದೌಡಾಯಿಸಿ, ಮಕ್ಕಳನ್ನು ಮನೆಗೆ ಕರೆತಂದರು. 2023ರ ಡಿಸೆಂಬರ್ನಲ್ಲೂ ಇದೇ ಮಾದರಿಯಲ್ಲಿ ಬೆಂಗಳೂರಿನ 15 ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ದುಷ್ಕರ್ವಿುಗಳು ಸಂದೇಶ ಕಳುಹಿಸಿ ಆತಂಕ ಸೃಷ್ಟಿಸಿದ್ದರು. 2024ರಲ್ಲೂ ಹಲವು ಶಾಲೆಗಳಿಗೆ ಬೆದರಿಕೆಯ ಇ-ಮೇಲ್ಗಳು ಬಂದಿದ್ದವು. ಆದರೆ, ಈ ಬಾರಿ ಒಂದೇ ದಿನದಲ್ಲಿ 40 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಒಡ್ಡಲಾಗಿರುವುದು ಆತಂಕಕಾರಿ.
ಪ್ರಾಥಮಿಕ ತನಿಖೆಯಂತೆ ಇ-ಮೇಲ್ ಡೊಮೈನ್ ಬ್ರಿಟಿಷ್ ಇಂಡಿಯನ್ ಓಷನ್ ಟೆರಿಟರಿ ಮೂಲದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರಾದರೂ, ಆರೋಪಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಶುಕ್ರವಾರ ಬಂದಿರುವ ಇ-ಮೇಲ್ನ್ನು ಪರಾಮಶಿಸಿದರೆ ಮೇಲ್ನೋಟಕ್ಕೆ ಅದನ್ನು ಮಾನಸಿಕ ಅಸ್ವಸ್ಥ ಅಥವಾ ತೀವ್ರ ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿ ಕಳಿಸಿದಂತಿದೆ. ಆದರೆ ಎಲ್ಲ ಪ್ರಕರಣಗಳ ಮೂಲ ವಿಭಿನ್ನವಾಗಿದ್ದು, ಈ ನಿಟ್ಟಿನಲ್ಲಿ ಪರಿಣಾಮಕಾರಿ ತನಿಖೆ ಅಗತ್ಯ. ಹುಸಿ ಬಾಂಬ್ ಬೆದರಿಕೆಯ ಪ್ರಕರಣಗಳು ಪದೇಪದೆ ಸಂಭವಿಸುತ್ತಿದ್ದು, ಸಂಬಂಧಪಟ್ಟವರು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ದೂರದ ಯಾವುದೋ ದೇಶದಲ್ಲಿ ಕುಳಿತುಕೊಂಡು ಈ ಬಗೆಯ ಇ-ಮೇಲ್ಗಳನ್ನು ರವಾನಿಸುವ ಕಿಡಿಗೇಡಿಗಳು ಕಾನೂನಿನ ಬಲೆಗೆ ಸಿಗುತ್ತಿಲ್ಲ. ಡಿಜಿಟಲ್ ವಂಚನೆ ಮತ್ತು ಡಿಜಿಟಲ್ ಬಂಧನದ ಪ್ರಕರಣಗಳು ಕೂಡ ಇದೇ ಮಾದರಿಯಲ್ಲಿ ನಡೆಯುತ್ತಿವೆ. ವಿಮಾನ ನಿಲ್ದಾಣಗಳಿಗೂ ಇಂಥ ಬೆದರಿಕೆಗಳು ಆಗಾಗ ಬರುತ್ತಲೇ ಇದ್ದು, ವಿಮಾನಗಳ ಸಂಚಾರಕ್ಕೆ ವ್ಯತ್ಯಯವಾಗುತ್ತಿದೆ. 2024ರಲ್ಲಿ ವಿಮಾನಯಾನ ಸಂಸ್ಥೆಗಳಿಗೆ 994 ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ ಎಂದು ಕೇಂದ್ರ ಸರ್ಕಾರವೇ ಈ ಹಿಂದೆ ರಾಜ್ಯಸಭೆಗೆ ಅಧಿಕೃತ ಮಾಹಿತಿ ನೀಡಿದೆ.
ಇಂಥ ಕೃತ್ಯ ಎಸಗುವವರ ವಿರುದ್ಧ ಯಾವುದೇ ದಾಕ್ಷಿಣ್ಯ ತೋರದೆ ಕಠಿಣ ಕ್ರಮ ಕೈಗೊಳ್ಳಬೇಕು. ಕಿಡಿಗೇಡಿಗಳು ವಿಕೃತ ಸಂತೋಷ ಅನುಭವಿಸಲು ಅಥವಾ ಜನರಲ್ಲಿ ಆತಂಕ ಸೃಷ್ಟಿಸಲೆಂದೇ ಇಂಥ ಕೃತ್ಯಗಳನ್ನು ಎಸಗುವುದಿದೆ. ಈ ಬಗೆಯ ಕಾರ್ಯಕ್ಕೆ ಕೈಹಾಕುವ ವಿಘ್ನಸಂತೋಷಿಗಳ ಹೆಡೆಮುರಿ ಕಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಈ ಸಮಸ್ಯೆಗೆ ಸೂಕ್ತ ಪರಿಹಾರ ಸಿಗಬೇಕಾದರೆ ಬೆದರಿಕೆ ಒಡ್ಡುವವರ ಜಾಲವನ್ನು ಭೇದಿಸಿ, ದಂಡಿಸಬೇಕು. ಈ ಸಂಬಂಧ ಆರಂಭದಲ್ಲಿ ಕೆಲವರಿಗೆ ಶಿಕ್ಷೆ ವಿಧಿಸಿದರೆ, ಉಳಿದ ಕಿಡಿಗೇಡಿಗಳಿಗೆ ಅದು ಪಾಠವಾಗುತ್ತದೆ. ಶೈಕ್ಷಣಿಕ ಸಂಸ್ಥೆಗಳನ್ನು ಮತ್ತು ಪ್ರಯಾಣ ವ್ಯವಸ್ಥೆಯನ್ನು ತೊಂದರೆಗೊಳಪಡಿಸುವ ಇಂಥ ಯಾವುದೇ ಪ್ರಯತ್ನವನ್ನು ಸಹಿಸಬಾರದು. ತಪ್ಪಿತಸ್ಥರು ಹೊರದೇಶದಲ್ಲಿ ಕುಳಿತರೂ, ಆ ರಾಷ್ಟ್ರಗಳ ಸರ್ಕಾರ, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಬಂಧನ, ಗಡೀಪಾರಿಗೆ ಯತ್ನಿಸಬೇಕು.