ನ್ಯೂಸ್

ಸಂಪಾದಕೀಯ: ಹಿಂದುಗಳನ್ನು ರಕ್ಷಿಸಿ

Webdesk - Mallikarjun K R

ಮೀಸಲಾತಿ ವಿರೋಧಿ ಚಳವಳಿ ದಿಕ್ಕುತಪ್ಪಿ ಬಾಂಗ್ಲಾದೇಶ ಅಯೋಮಯವಾಗಿದೆ. ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶ ತೊರೆದಿದ್ದರೂ ಹಿಂಸಾಚಾರ ನಿಯಂತ್ರಣಕ್ಕೆ ಬಂದಿಲ್ಲ. ವಿದ್ಯಾರ್ಥಿಗಳೆನಿಸಿಕೊಂಡವರು ಸಂಸತ್ ಮತ್ತು ಪ್ರಧಾನಿ ನಿವಾಸಕ್ಕೆ ನುಗ್ಗಿ ನಡೆಸಿದ ವಿಕೃತ ಪ್ರತಿಭಟನೆಯು ಹೋರಾಟ ದಿಕ್ಕು ತಪ್ಪಿರುವುದಕ್ಕೆ ಸಾಕ್ಷಿ.

ಈ ರಾಜಕೀಯ ವಿಪ್ಲವದ ಸಂದರ್ಭದಲ್ಲಿ ಪ್ರತಿಭಟನಕಾರರು ಅಲ್ಪಸಂಖ್ಯಾತ ಹಿಂದುಗಳನ್ನು ಮತ್ತು ಹಿಂದು ದೇವಸ್ಥಾನಗಳನ್ನು ಗುರಿಯಾಗಿಸಿ ಹಿಂಸಾಚಾರ ನಡೆಸಿರುವುದು ವರದಿಯಾಗಿದೆ. ಢಾಕಾದ ಸುಪ್ರಸಿದ್ಧ ಕಾಳಿ ದೇವಸ್ಥಾನ ಮತ್ತು ಇಸ್ಕಾನ್ ದೇವಸ್ಥಾನಗಳನ್ನು ಗುರಿಯಾಗಿಸಿ, ಬೆಂಕಿ ಹಚ್ಚಲಾಗಿದೆ. ಆಗಸ್ಟ್ 5 ಮತ್ತು 6ರಂದು ತಾರಕ್ಕೇರಿದ ಹಿಂಸಾಚಾರದ ಘಟನೆಗಳು ಜನರನ್ನು, ಅದರಲ್ಲೂ ಅಲ್ಪಸಂಖ್ಯಾತ ಹಿಂದುಗಳನ್ನು ಭಯಭೀತಗೊಳಿಸಿದೆ. ಹಿಂದು ಮುಖಂಡರು ಮತ್ತು ಹಿಂದುಗಳ ವ್ಯಾಪಾರ ಕೇಂದ್ರಗಳನ್ನು ಗುರಿಯಾಗಿಸಿ 24 ಜಿಲ್ಲೆಗಳಲ್ಲಿ ದಾಳಿ ನಡೆದಿದೆ. 16.72 ಕೋಟಿ ಜನಸಂಖ್ಯೆ ಇರುವ ಬಾಂಗ್ಲಾದೇಶದಲ್ಲಿ ಶೇಕಡ 91ರಷ್ಟು ಮುಸ್ಲಿಂರಿದ್ದರೆ, ಹಿಂದುಗಳ ಜನಸಂಖ್ಯೆ ಕೇವಲ ಶೇಕಡ 8ರಷ್ಟಿದೆ.

ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ನಡೆಸಲಾದ ದೌರ್ಜನ್ಯದಿಂದ, ಅಲ್ಲೂ ಹಿಂದುಗಳ ಜನಸಂಖ್ಯೆ ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹಲವು ದೇವಸ್ಥಾನಗಳು ಪಾಳುಬಿದ್ದಿವೆ. ಬಾಂಗ್ಲಾದೇಶ ಭಾರತದ ಮಿತ್ರರಾಷ್ಟ್ರವಾಗಿದ್ದರೂ, ಈಗ ಪರಿಸ್ಥಿತಿ ಬದಲಾಗಿದೆ. ಅಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಬೇಕಿದ್ದು, ಆ ಬಳಿಕ ಬಾಂಗ್ಲಾದೇಶದೊಂದಿಗಿನ ನೀತಿಗಳು ಹೇಗಿರಬೇಕು ಎಂಬುದರ ಬಗ್ಗೆ ಕೇಂದ್ರ ಸರ್ಕಾರ ನಿರ್ಣಯ ತಳೆಯಬೇಕಿದೆ.

ಬಾಂಗ್ಲಾದ ರಾಜಕೀಯ ವಿಪ್ಲವ ಸ್ಥಿತಿಯ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆಯನ್ನು ನಡೆಸಿದೆ, ಅಲ್ಲಿನ ಬೆಳವಣಿಗೆಗಳ ಮೇಲೆ ಗಮನಹರಿಸಿದ್ದು, ಬಾಂಗ್ಲಾದಲ್ಲಿನ ಭಾರತೀಯ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡಿದೆ. ಆದರೆ, ಅಲ್ಲಿನ ಹಿಂದುಗಳ ರಕ್ಷಣೆಗೆ ಮುಂದಾಗುವುದು ಕೂಡ ಅವಶ್ಯವಾಗಿದೆ. ಹಿಂದುವಿರೋಧಿ ಹಿಂಸಾಚಾರಕ್ಕೆ ತಕ್ಷಣ ಕಡಿವಾಣ ಹಾಕುವಂತೆ ಅಲ್ಲಿನ ಸೇನೆಗೆ ಮತ್ತು ಮಧ್ಯಂತರ ಆಡಳಿತಗಾರರಿಗೆ ಭಾರತ ಸರ್ಕಾರ ರಾಜತಾಂತ್ರಿಕ ಮಾರ್ಗಗಳ ಮೂಲಕ ತಾಕೀತು ಮಾಡಬೇಕು. ಮತ್ತು ಹಿಂದುಗಳ ಮೇಲಿನ ದಾಳಿಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ, ಇಂಥ ಕೃತ್ಯಗಳು ತಕ್ಷಣ ನಿಲ್ಲಿಸುವಂತೆ ರಾಜತಾಂತ್ರಿಕ ಒತ್ತಡವನ್ನು ಹೇರಬೇಕು.

ಈಗಾಗಲೇ ನೂರಾರು ಹಿಂದುಗಳು ಭಾರತಕ್ಕೆ ಬಂದಿದ್ದು, ಅವರಿಗೆ ಸೂಕ್ತ ರೀತಿಯಲ್ಲಿ ಆಶ್ರಯ ಒದಗಿಸಬೇಕು. ಆತ್ಮಸ್ಥೈರ್ಯ ತುಂಬಬೇಕು. ಇಂಥ ವಿಷಯಗಳಲ್ಲಿ ರಾಜಕೀಯವನ್ನು ಬದಿಗಿಟ್ಟು, ವಸ್ತುಸ್ಥಿತಿಯನ್ನು ಅವಲೋಕಿಸಿ ಮುಂದಿನ ಹೆಜ್ಜೆ ಇರಿಸಬೇಕು. ಹಿಂದುಗಳು ಬಾಂಗ್ಲಾದೇಶದಲ್ಲಿ ಅಸುರಕ್ಷಿತ ಭಾವ ಅನುಭವಿಸುತ್ತಿರುವುದಂತೂ ಹೌದು. ಹಾಗಾಗಿ, ಭಾರತಕ್ಕೆ ಆಶ್ರಯ ಕೋರಿ ಬರುತ್ತಿರುವ ಬಾಂಗ್ಲಾ ಹಿಂದುಗಳಿಗೆ ಬದುಕು ಕಟ್ಟಿಕೊಳ್ಳಲು ಸರ್ಕಾರ ನೆರವಾಗಬೇಕು. ಮಾನವೀಯ ನೆಲೆಯಲ್ಲಿ ಅಗತ್ಯ ಸಹಾಯವನ್ನು ಒದಗಿಸಬೇಕು.