ನ್ಯೂಸ್

ಸಂಪಾದಕೀಯ| ಸ್ವಚ್ಛತೆ ಆದ್ಯತೆಯಾಗಲಿ

Webdesk - Manjunatha B

ವಿದೇಶಗಳಿಗೆ ಭಾರತವನ್ನು ಹೋಲಿಸುವಾಗ ಅಥವಾ ಮಹಾನಗರಗಳ ದೌರ್ಬಲ್ಯದ ಬಗ್ಗೆ ಮಾತನಾಡುವಾಗ ಸ್ವಚ್ಛತೆಯ ಕೊರತೆ ಬಗ್ಗೆ ಮತ್ತೆ ಮತ್ತೆ ಕಳವಳ ವ್ಯಕ್ತವಾಗುತ್ತಲೇ ಇರುತ್ತದೆ. 2014ರ ಗಾಂಧಿ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ, ಸ್ವಚ್ಛತೆ ಎಂಬ ಮೌಲ್ಯಪ್ರಾಪ್ತಿಗೆ ಸಾಮೂಹಿಕ ಪ್ರಯತ್ನ ಅಗತ್ಯ ಎಂದಿದ್ದರು. ಸಮಾಜದ ಎಲ್ಲ ರಂಗಗಳ ಗಣ್ಯರು ಈ ಅಭಿಯಾನವನ್ನು ಬೆಂಬಲಿಸಿ, ನೈರ್ಮಲ್ಯದ ಮಂತ್ರ ಪಠಿಸಿದ್ದರು. ಆನಂತರದಲ್ಲಿ ದೇಶದ ಸ್ವಚ್ಛ ನಗರಗಳ ಪಟ್ಟಿಯನ್ನೂ ಕೇಂದ್ರ ಹೊರಡಿಸುತ್ತಿದೆ. ಅದರಂತೆ, ಕೇಂದ್ರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ 2023ನೇ ಸಾಲಿನ ‘ಸ್ವಚ್ಛ ಸರ್ವೆಕ್ಷಣಾ ಪ್ರಶಸ್ತಿ’ ಫಲಿತಾಂಶ ಗುರುವಾರ ಪ್ರಕಟವಾಗಿದೆ. ಆದರೆ, ಇದರಲ್ಲಿ ಕರ್ನಾಟಕ ಹಿನ್ನಡೆ ಕಂಡಿದ್ದು, ಸ್ವಚ್ಛತೆಯ ಸೂತ್ರಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂಬುದಕ್ಕೆ ಸಾಕ್ಷಿ ಒದಗಿಸಿವೆ.

ದೇಶದ ಸ್ವಚ್ಛ ನಗರಗಳ ಪಟ್ಟಿಯ ಮೊದಲ 100 ರ್ಯಾಂಕ್​ಗಳಲ್ಲಿ ಮೈಸೂರು ಮಹಾನಗರ ಪಾಲಿಕೆ (23) ಹಾಗೂ ಹುಬ್ಬಳ್ಳಿ-ಧಾರವಾಡ ಪಾಲಿಕೆ (87) ಹೊರತುಪಡಿಸಿ ಇನ್ನುಳಿದ ನಗರ, ಪಟ್ಟಣಗಳು ಸ್ಥಾನ ಪಡೆದಿಲ್ಲ ಎಂಬುದು ಗಮನಾರ್ಹ. ಇಡೀ ರಾಜ್ಯಕ್ಕೆ ಮಾದರಿಯಾಗಬೇಕಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 125ನೇ ಸ್ಥಾನವನ್ನು ಪಡೆದಿದೆ. ದಕ್ಷಿಣ ಭಾರತ ಒಳಗೊಂಡ ರಾಜ್ಯಗಳ ವಲಯ ವಿಭಾಗದಲ್ಲೂ ಕರ್ನಾಟಕದ ಯಾವುದೇ ಮಧ್ಯಮ ಪ್ರಮಾಣದ ನಗರ-ಪಟ್ಟಣ ಪ್ರಶಸ್ತಿ ಪಡೆದುಕೊಂಡಿಲ್ಲ. ಕಸ ಸಂಗ್ರಹ, ಮೂಲದಲ್ಲೇ ಕಸ ವಿಂಗಡಣೆ, ತ್ಯಾಜ್ಯ ಸಂಸ್ಕರಣೆ ಸೇರಿ ಹಲವು ಮಾನದಂಡಗಳನ್ನು ಪರಿಗಣಿಸಿ, ನಗರಗಳ ರ‍್ಯಾಂಕಿಂಗ್ ನಿರ್ಧರಿಸಲಾಗುತ್ತದೆ. ಆದರೆ, ಕಸ ಸಂಗ್ರಹ, ಮೂಲದಲ್ಲೇ ಕಸ ವಿಂಗಡಣೆಯಲ್ಲಿ ಸ್ಥಳೀಯ ಸಂಸ್ಥೆಗಳು ನಿರಾಸಕ್ತಿ ವಹಿಸಿರುವುದೇ ಈ ಹಿನ್ನಡೆಗೆ ಪ್ರಮುಖ ಕಾರಣ. ತ್ಯಾಜ್ಯ ಸಂಸ್ಕರಣೆ ನಿಟ್ಟಿನಲ್ಲಂತೂ ಇನ್ನು ಬಹುದೂರ ಕ್ರಮಿಸಬೇಕಿದೆ.

ದೇಶದ ಹಲವು ಮಹಾನಗರಪಾಲಿಕೆಗಳು, ನಗರಪಾಲಿಕೆಗಳು ಶೂನ್ಯತ್ಯಾಜ್ಯದ ನೀತಿಗಳನ್ನು ಅಳವಡಿಸಿಕೊಂಡು, ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತಿವೆ. ಹಂತಹಂತವಾಗಿ ಈ ವಿಷಯದಲ್ಲಿ ಜನರಲ್ಲೂ ಜಾಗೃತಿ ಮೂಡುತ್ತಿದೆ. ಮಾಹಿತಿ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಿರುವ ಕರ್ನಾಟಕ ಈ ವಿಷಯದಲ್ಲಿ ಅನಾಸಕ್ತಿ ತಳೆದಿರುವುದಾದರೂ ಏಕೆ? ಅಷ್ಟಕ್ಕೂ, ಸ್ವಚ್ಛತೆ ಕಾಯ್ದುಕೊಳ್ಳುವುದು ನಿರಂತರ ಪ್ರಕ್ರಿಯೆ. ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಇದರ ಕೊಡುಗೆಯೂ ಇದೆ.

ಹೊಸ ಆವಿಷ್ಕಾರಗಳು, ತಂತ್ರಜ್ಞಾನದ ಲಾಭ ಪಡೆದು ನಗರ, ಪಟ್ಟಣಗಳನ್ನು ನೈರ್ಮಲ್ಯವಾಗಿಸಲು ಪಣ ತೊಡಬೇಕಿದೆ. ಸ್ವಚ್ಛತೆ ಮತ್ತು ಅಭಿವೃದ್ಧಿಗೆ ನಿಕಟ ಸಂಬಂಧವಿದ್ದು, ಅದನ್ನು ಸ್ಥಳೀಯ ಸಂಸ್ಥೆಗಳು, ಸರ್ಕಾರ ಅರಿತು ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಿದೆ.