ನ್ಯೂಸ್

ಸಂಪಾದಕೀಯ: ಸುಧಾರಣೆಯತ್ತ ಹೊರಳಲಿ

Webdesk - Mallikarjun K R

ಜಮ್ಮು-ಕಾಶ್ಮೀರ ವಿಧಾನಸಭೆಯ ಚುನಾವಣೆ ನಿರೀಕ್ಷೆಯಂತೆ ಘೋಷಣೆಯಾಗಿದೆ. ಸೆಪ್ಟೆಂಬರ್ 18ರಿಂದ ಅಕ್ಟೋಬರ್ 1ರವರೆಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಮತ್ತೆ ಚುನಾಯಿತ ಸರ್ಕಾರ ಸ್ಥಾಪನೆ ನಿಟ್ಟಿನಲ್ಲಿ ಈ ಕ್ರಮ ಸ್ವಾಗತಾರ್ಹ. 2024ರ ಸೆಪ್ಟೆಂಬರ್ 30ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ 2023ರ ಡಿಸೆಂಬರ್​ನಲ್ಲಿ ಆದೇಶ ನೀಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಸಂವಿಧಾನದ 370ನೇ ವಿಧಿಯನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್​ನಲ್ಲಿ ಕೇಂದ್ರ ಸರ್ಕಾರ ಹಿಂಪಡೆದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಜಮ್ಮು-ಕಾಶ್ಮೀರದ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಉಗ್ರದಾಳಿಗಳ ಸಂಖ್ಯೆ ಕ್ಷೀಣಿಸಿದ್ದವಾದರೂ, ಈ ವರ್ಷದ ಜೂನ್​ನಿಂದ ಭಯೋತ್ಪಾದಕರು ತಂತ್ರವನ್ನು ಬದಲಿಸಿಕೊಂಡು ಜಮ್ಮುವನ್ನು ಕೇಂದ್ರೀಕರಿಸಿ ದಾಳಿಗಳನ್ನು ನಡೆಸುತ್ತಿರುವುದು ಹೊಸ ಸವಾಲನ್ನು ಸೃಷ್ಟಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಯ ಬಾರಿ ವಿಧಾನಸಭೆ ಚುನಾವಣೆ ನಡೆದಿದ್ದು 2014ರಲ್ಲಿ. ಆಗ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯು (ಪಿಡಿಪಿ) ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. 2018ರಲ್ಲಿ ಬಿಜೆಪಿ ಬೆಂಬಲ ವಾಪಸ್ ಪಡೆದ ಬಳಿಕ ಸರ್ಕಾರ ಪತನಗೊಂಡಿತ್ತು. ಅಂದಿನಿಂದಲೂ ಅಲ್ಲಿ ಚುನಾಯಿತ ಸರ್ಕಾರ ಇರಲಿಲ್ಲ. ಶೀಘ್ರವೇ ಚುನಾವಣೆ ನಡೆಸುವಂತೆ ಹಲವು ರಾಜಕೀಯ ಪಕ್ಷಗಳು ಆಗ್ರಹಿಸುತ್ತಲೇ ಬಂದಿದ್ದವು. ಚುನಾವಣೆ ಘೋಷಣೆಯಾದ ಬಳಿಕ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. 18ನೇ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಲ್ಲಿಯ ಜನರು ಉತ್ಸಾಹದಿಂದ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವುದು ಹೊಸ ಆಶಾವಾದ ಮೂಡಿಸಿದೆ. 35 ವರ್ಷಗಳಲ್ಲಿಯೇ ಅತಿಹೆಚ್ಚು ಮತದಾನ ಪ್ರಮಾಣ ದಾಖಲಾಗಿತ್ತು (ಶೇಕಡ 58.6) ಎಂಬ ಸಂಗತಿ ಗಮನಾರ್ಹ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಮ್ಮು-ಕಾಶ್ಮೀರದ ಜನರು ವಿಶ್ವಾಸ ಇಟ್ಟಿದ್ದಾರೆ ಎಂಬುದಕ್ಕೆ ಈ ಬೆಳವಣಿಗೆ ಸ್ಪಷ್ಟ ನಿದರ್ಶನ.

ಹಿಂದೆಲ್ಲ ಚುನಾವಣೆ ನಡೆದಾಗ ಪ್ರತ್ಯೇಕತಾವಾದಿಗಳ ಹಿಂಸೆ ವಿಕೋಪಕ್ಕೆ ತಲುಪುತ್ತಿತ್ತು. ಆದರೆ, ಕೇಂದ್ರ ಕೈಗೊಂಡ ದಿಟ್ಟ ಕ್ರಮದಿಂದ ಬಹುತೇಕ ಪ್ರತ್ಯೇಕತಾವಾದಿಗಳು ಈಗ ಜೈಲಿನಲ್ಲಿದ್ದಾರೆ. ಪ್ರಸಕ್ತ ಚುನಾವಣೆಯು ಹೊಸ ಸುಧಾರಣೆಗೆ ತೆರೆದುಕೊಳ್ಳುವ ಮಾಧ್ಯಮವಾಗಬೇಕು. ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ, ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವಿಕೆ ಮತ್ತು ಜನರ ಜೀವನಸ್ತರವನ್ನು ಉನ್ನತೀಕರಿಸುವುದು ರಾಜಕೀಯ ಪಕ್ಷಗಳ ಆದ್ಯತೆಯಾಗಬೇಕು. ಇದನ್ನು ಬಿಟ್ಟು ಮತ್ತೆ ತುಷ್ಟೀಕರಣದ ರಾಜಕಾರಣ ಬೇಡ. ಪ್ರತ್ಯೇಕತಾವಾದಿಗಳ ಓಲೈಕೆ ಬೇಡ. ಜಮ್ಮು-ಕಾಶ್ಮೀರ ಹಿಂದೆಲ್ಲ ಆತಂಕ, ಹಿಂಸೆ, ರಕ್ತಪಾತವನ್ನೇ ಕಂಡಿದ್ದು, ಇತ್ತೀಚಿನ ವರ್ಷಗಳಲ್ಲಿ ಸಕಾರಾತ್ಮಕ ಬದಲಾವಣೆಗೆ ತೆರೆದುಕೊಳ್ಳುತ್ತಿದೆ. ಚುನಾವಣೆಯ ಬಳಿಕ, ಮತ್ತೆ ರಾಜ್ಯದ ಸ್ಥಾನಮಾನ ಪ್ರಾಪ್ತಿಯಾಗಿ ಜಮ್ಮು-ಕಾಶ್ಮೀರ ಅಭಿವೃದ್ಧಿಯ ಓಟದಲ್ಲಿ ಕಾಣಿಸಿಕೊಳ್ಳಲಿ. ಚುನಾವಣೆ ಸಂದರ್ಭದಲ್ಲಿ ಭಯೋತ್ಪಾದಕರು ಮತ್ತು ಭಾರತವಿರೋಧಿ ಶಕ್ತಿಗಳು ಪಿತೂರಿ ನಡೆಸುವ, ಹಿಂಸೆ ಹರಡುವ ಸಾಧ್ಯತೆಗಳಿದ್ದು, ಮತ್ತಷ್ಟು ಕಟ್ಟೆಚ್ಚರ ವಹಿಸಿ, ಆ ಮೂಲಕ ಪ್ರಜಾತಂತ್ರದ ಪರ್ವವನ್ನು ಯಶಸ್ವಿಗೊಳಿಸಬೇಕಿದೆ.