ನ್ಯೂಸ್

ಸಂಪಾದಕೀಯ: ಸಮಾಜಸ್ವಾಸ್ಥ್ಯ ಹಾಳಾಗದಿರಲಿ

ದೇಶದಲ್ಲಿ ಬೆಟ್ಟಿಂಗ್, ಗ್ಯಾಂಬ್ಲಿಂಗ್, ಕ್ಯಾಸಿನೋ ಆಪ್​ಗಳ ಹಾವಳಿ ಮೇರೆ ಮೀರಿದೆ. ಶಾಲೆ-ಕಾಲೇಜಿಗೆ ಹೋಗುವ ಕೋಟ್ಯಂತರ ಮಕ್ಕಳು ಮತ್ತು ಯುವಜನರು ಈ ಆಪ್​ಗಳಿಗೆ ಅಡಿಕ್ಟ್ ಆಗಿದ್ದಾರೆ. ಅಷ್ಟೇ ಅಲ್ಲ, ಲಕ್ಷಾಂತರ ಮಂದಿ ವಯಸ್ಕರು ಕೂಡ ಈ ಆಪ್​ಗಳಿಗೆ ದಾಸರಾಗಿದ್ದಾರೆ. ತಮ್ಮ ಬಳಿ ಇರುವ ಹಣವನ್ನೆಲ್ಲ ಸುರಿದಿದ್ದು ಸಾಲದೆ, ಬೇರೆಯವರ ಬಳಿ ಸಾಲಸೋಲ ಮಾಡಿಯೂ ಪ್ರತಿದಿನ ಅವುಗಳಲ್ಲಿ ಹಣ ಹೂಡುತ್ತಿದ್ದಾರೆ.

ದಿನಗಳೆದಂತೆ ಇಂತಹ ಆಪ್​ಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಇದು ಕೂಡ ಒಂದು ರೀತಿಯಲ್ಲಿ ಜೂಜಾಟ ಎಂದು ಗೊತ್ತಿದ್ದರೂ, ಗೆಲ್ಲುವುದಕ್ಕಿಂತ ಸೋಲುವ ಸಾಧ್ಯತೆಯೇ ಹೆಚ್ಚು ಎಂಬ ಅರಿವಿದ್ದರೂ ಜನರು ಇವುಗಳ ವಿಷವರ್ತಲದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಕೆಲವರಂತೂ ಲಕ್ಷಾಂತರ ರೂ. ಕಳೆದುಕೊಂಡು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಮಾಡಿದ ಸಾಲವನ್ನು ತೀರಿಸಲಾಗದೇ ಊರು ಬಿಟ್ಟು ಹೋದ ಪ್ರಕರಣಗಳಿಗೇನೂ ಕೊರತೆ ಇಲ್ಲ.

ಈ ಆಪ್​ಗಳನ್ನು ಪ್ರಚಾರ ಮಾಡುವ ಸೆಲೆಬ್ರಿಟಿಗಳೂ ಇಂತಹ ಅನಾಹುತಕಾರಿ ಪರಿಣಾಮಗಳ ಹೊಣೆ ಹೊರಬೇಕಾಗುತ್ತದೆ. ಏಕೆಂದರೆ ಬಹಳಷ್ಟು ಜನರಿಗೆ ಈ ಆಪ್​ಗಳು ಪರಿಚಯವಾಗಿದ್ದೇ ಸೆಲೆಬ್ರಿಟಿಗಳು ನೀಡುವ ಜಾಹೀರಾತುಗಳಿಂದ. ಸೋಶಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ಗಳ ಪಾಲೂ ಇದರಲ್ಲಿದೆ. ಅವರೂ ಈ ಆಪ್​ಗಳ ಜಾಹೀರಾತು ನೀಡಿ ಹಣ ಗಳಿಸುತ್ತಾರೆ. ಜಾಹೀರಾತಿನಲ್ಲಿ ಮುಖ ತೋರಿಸಿ ನಾಲ್ಕು ಮಾತು ಹೇಳಿದ್ದಕ್ಕೆ ಪ್ರತಿಯಾಗಿ ಇವರಿಗೆಲ್ಲ ದೊಡ್ಡ ಮೊತ್ತವೇ ಸಿಗುತ್ತದೆ. ಆದರೆ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಸಮಾಜಕಂಟಕ ಕೆಲಸಗಳಿಗೆ ಕೈಜೋಡಿಸುವುದು ಎಷ್ಟು ಸರಿ?

ಹೈದರಾಬಾದ್ ಸಮೀಪದ ಮಿಯಾಪುರ್​ನ ಉದ್ಯಮಿ ಪಿ.ಎಂ. ಫಣೀಂದ್ರ ಎಂಬುವವರು ಇತ್ತೀಚೆಗೆ, ಬೆಟ್ಟಿಂಗ್ ಆಪ್​ಗಳಿಗೆ ಉತ್ತೇಜನ ನೀಡುವ ಸೆಲೆಬ್ರಿಟಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ತಾವು ಕೂಡ ಇಂತಹ ಆಪ್​ಗಳನ್ನು ಬಳಸಿ ಹಣ ಕಳೆದುಕೊಂಡಿದ್ದು, ನಂತರ ಪಾಲಕರ ಮಾರ್ಗದರ್ಶನದ ಹಿನ್ನೆಲೆಯಲ್ಲಿ ನಿಲ್ಲಿಸಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ. ಸೆಲೆಬ್ರಿಟಿಗಳ ಜಾಹೀರಾತಿನಿಂದ ಪ್ರಭಾವಿತರಾಗಿಯೇ ಜನರು ಈ ಆಪ್​ಗಳಲ್ಲಿ ಹಣ ತೊಡಗಿಸುತ್ತಿರುವುದರಿಂದ ಆ ಸೆಲೆಬ್ರಿಟಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.

ಈ ಹಿನ್ನೆಲೆಯಲ್ಲಿ ಪೊಲೀಸರು ತೆಲುಗು ಚಿತ್ರರಂಗದ ಹಲವಾರು ನಟ-ನಟಿಯರು, ಸೋಶಿಯಲ್ ಮೀಡಿಯಾ ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಕಾರಣಕೇಳಿ ನೋಟಿಸ್ ನೀಡಿದ್ದಾರೆ. ಪೊಲೀಸರ ಕ್ರಮ ಶ್ಲಾಘನಾರ್ಹವಾಗಿದೆ. ಆದರೆ ಇದು ಸುಮ್ಮನೆ ಕಣ್ಣೊರೆಸುವ ತಂತ್ರವಾಗಬಾರದು. ಪೊಲೀಸರ ಕಾನೂನು ಕ್ರಮ ಹೇಗಿರಬೇಕೆಂದರೆ, ಮುಂದಿನ ದಿನಗಳಲ್ಲಿ ಸೆಲೆಬ್ರಿಟಿಗಳು ಇಂತಹ ಸಮಾಜಕಂಟಕ ಆಪ್​ಗಳನ್ನು ಪ್ರಚಾರ ಮಾಡಲು ಹತ್ತು ಸಲ ಯೋಚಿಸುವಂತಾಗಬೇಕು. ಈ ಜೂಜಾಟಕ್ಕೆ ಕಂಪನಿಯವರು ‘ಕೌಶಲ ಆಧರಿತ ಆಟಗಳು’ ಎಂಬ ಹೆಸರು ಇಟ್ಟಿವೆ. ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಸೆಲೆಬ್ರಿಟಿಗಳೂ ಇದನ್ನೇ ಮುಂದೊಡ್ಡಿ ‘ರಂಗೋಲಿ ಕೆಳಗೆ ನುಸುಳುವ’ ಸಾಧ್ಯತೆ ಇರುತ್ತದೆ. ಇದಕ್ಕೆ ಅವಕಾಶ ಆಗಬಾರದು. ಪ್ರಸಿದ್ಧ ವ್ಯಕ್ತಿಗಳು ಸಮಾಜಸ್ವಾಸ್ಥ್ಯ್ಕೆ ಪೂರಕವಾದ ಕೆಲಸ ಮಾಡಬೇಕೇ ವಿನಾ ಸಮಾಜಕಂಟಕ ಕಾರ್ಯಗಳಿಗೆ ಕುಮ್ಮಕ್ಕು ನೀಡಬಾರದು. ಇಂತಹ ಆಪ್​ಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಷೇಧಿಸಲು ಮುಂದಾಗಬೇಕು.