ಕೇಂದ್ರ ಸರ್ಕಾರ ಕೈಗೊಂಡ ದಿಟ್ಟಕ್ರಮಗಳು, ಭದ್ರತಾ ಪಡೆಗಳ ಭರ್ಜರಿ ಕಾರ್ಯಾಚರಣೆಗಳು ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ರವಾನಿಸಿದ ಕಠಿಣ ಸಂದೇಶದ ಪರಿಣಾಮ ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ಉಗ್ರ ಕೃತ್ಯಗಳು ಗಣನೀಯವಾಗಿ ಕಡಿಮೆಯಾಗಿದ್ದವು. ಅಲ್ಲದೆ, ಉಗ್ರರ ಹಣಕಾಸು ಮೂಲಗಳನ್ನು ಕತ್ತರಿಸುವಲ್ಲಿ ತನಿಖಾ ಸಂಸ್ಥೆಗಳು ಯಶಸ್ವಿಯಾಗಿದ್ದವು. ಆದರೆ, ಜೂನ್ 4ರಂದು ಪ್ರಧಾನಿ ಮತ್ತು ಅವರ ಸಚಿವಸಂಪುಟದ ಪ್ರಮಾಣವಚನಕ್ಕೆ ಸ್ವಲ್ಪ ಸಮಯ ಮೊದಲು ಜಮ್ಮುವಿನಲ್ಲಿ ನಡೆದ ಉಗ್ರದಾಳಿಯಲ್ಲಿ 10 ಜನ ಯಾತ್ರಿಕರು ಬಲಿಯಾದರು. ಮತ್ತೊಂದೆಡೆ, ಭಾರತದ ಯೋಧರು, ಪೊಲೀಸರು ಮತ್ತು ಹಿಂದು ಮುಖಂಡರ ಮೇಲೆ ಗೆರಿಲ್ಲಾ ದಾಳಿ ನಡೆಸುವುದಕ್ಕಾಗಿ ದೇಶದ ಪ್ರತಿ ಜಿಲ್ಲೆಯಲ್ಲೂ ಭಯೋತ್ಪಾದಕರು ಸ್ಲೀಪರ್ಸೆಲ್ ರಚಿಸಲು ನಿರ್ಧರಿಸಿದ್ದ ಆತಂಕಕಾರಿ ಅಂಶ ಎನ್ಐಎ ತನಿಖೆಯಲ್ಲಿ ಬಹಿರಂಗವಾಗಿದೆ. ಬಳ್ಳಾರಿಯ ಐಸಿಸ್ ಮಾಡ್ಯೂಲ್ ಕುರಿತು ತನಿಖೆ ನಡೆಸುವಾಗ ಈ ವಿಷಯ ದೃಢಪಟ್ಟಿದೆ. 2025ರ ವೇಳೆಗೆ ಭಾರತದ ಪ್ರತಿ ಜಿಲ್ಲೆಗಳಲ್ಲಿ ತಲಾ 50 ಸ್ಲೀಪರ್ ಸೆಲ್ ನಿರ್ವಿುಸುವ ಐಸಿಸ್ ಪಿತೂರಿಯ ಭಾಗ ಬಳ್ಳಾರಿ ಐಸಿಸ್ ಮಾಡ್ಯೂಲ್ ಆಗಿತ್ತು. ಗೆರಿಲ್ಲಾ ದಾಳಿಗೆ ಬೇಕಾದ ಸುಧಾರಿತ ಸ್ಪೋಟಕ ಬಳಸಿ ದೇಶದ ವಿವಿಧ ಭಾಗಗಳಲ್ಲಿ ಹಿಂಸಾಚಾರ ನಡೆಸುವ ಸಂಚು ರೂಪಿಸಲಾಗಿತ್ತು ಎಂಬುದು ವಿಚಾರಣೆಯ ವೇಳೆ ತಿಳಿದುಬಂದಿದೆ. ಉಗ್ರರ ಸಂಚುಗಳ ಒಳಸುಳಿ ಅರಿತು ಮೂಲದಲ್ಲೇ ಚಿವುಟಿ ಹಾಕುವ ಕಾರ್ಯ ಮತ್ತಷ್ಟು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯಬೇಕಾದ ಅಗತ್ಯವನ್ನು ಎನ್ಐಎಯ ಈ ವರದಿ ಎತ್ತಿತೋರಿಸುತ್ತದೆ. ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಮಾಸುವ ಮುನ್ನ, ಗೆರಿಲ್ಲಾ ದಾಳಿಯ ಸಂಚು ಬಹಿರಂಗಗೊಂಡಿರುವುದು ಉಗ್ರಜಾಲಗಳ ಸಕ್ರಿಯತೆಗೆ ಸಾಕ್ಷಿ.
ಈ ಎಲ್ಲ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಆಂತರಿಕ ಭದ್ರತೆ ಕೇಂದ್ರ, ರಾಜ್ಯ ಸರ್ಕಾರಗಳ ಮೊದಲ ಆದ್ಯತೆಯಾಗಬೇಕಿದೆ. ಜಮ್ಮು-ಕಾಶ್ಮೀರದಲ್ಲಿ ಉಗ್ರರ ಶೋಧಕ್ಕಾಗಿ ಭದ್ರತಾ ಪಡೆಗಳು ಕಾರ್ಯಾಚರಣೆ ತೀವ್ರಗೊಳಿಸಿವೆ. ಅಂತೆಯೇ, ದೇಶದಲ್ಲಿ ಸಕ್ರಿಯವಾಗಿರುವ ಅಥವಾ ಭೂಗತವಾಗಿ ಕಾರ್ಯನಿರ್ವಹಿಸುತ್ತಿರುವ ಉಗ್ರ ಬೇರುಗಳನ್ನು ಪತ್ತೆ ಹಚ್ಚಿ, ಅವುಗಳ ಸಂಪೂರ್ಣ ನಿಮೂಲನೆಗೆ ಪಣ ತೊಡಬೇಕಿದೆ. ಭಯೋತ್ಪಾದನೆ ನಿಗ್ರಹದ ಕ್ರಮಗಳು ವೇಗ ಪಡೆಯಬೇಕಿದ್ದು, ಉಗ್ರ ಚಟುವಟಿಕೆಗಳ ಬಗ್ಗೆ ಶೂನ್ಯ ಸಹಿಷ್ಣುತೆ ತಳೆಯುವುದು ಈಗಿನ ಅಗತ್ಯವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಭಾರತದ ವರ್ಚಸ್ಸು ಹೆಚ್ಚಿದೆ. ಅದರಲ್ಲೂ, ಭಯೋತ್ಪಾದನಾ ವಿರೋಧಿ ಹೋರಾಟದಲ್ಲಿ ಭಾರತಕ್ಕೆ ಮೇಲುಗೈ ಆಗುತ್ತಿರುವುದು ಶತ್ರುರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾಗೆ ಸಹಿಸಲಾಗುತ್ತಿಲ್ಲ. ಆದ್ದರಿಂದಲೇ, ಇಲ್ಲಿನ ಶಾಂತಿಯನ್ನು ಕದಡುವ, ಹಿಂಸಾಕೃತ್ಯ ಹರಡುವ ಪ್ರಯತ್ನಗಳು ದುಷ್ಟಶಕ್ತಿಗಳಿಂದ ತೀವ್ರಗೊಂಡಿವೆ. ಇದಕ್ಕೆಲ್ಲ ತಕ್ಕ ಉತ್ತರ ನೀಡಲು ಭಾರತ ಸಮರ್ಥವಾಗಿದೆ ಎಂಬುದನ್ನು ಶತ್ರುರಾಷ್ಟ್ರಗಳು ಮರೆಯುವಂತಿಲ್ಲ. ಆದರೂ, ಮೈಯೆಲ್ಲ ಕಣ್ಣಾಗಿರುವ, ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ. ಅಷ್ಟೇ ಅಲ್ಲ, ಇದೇ ದೇಶದಲ್ಲಿ ಇದ್ದುಕೊಂಡು ಉಗ್ರರಿಗೆ ಸಹಕರಿಸುತ್ತಿರುವ ರಾಷ್ಟ್ರದ್ರೋಹಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು.