ಜಗತ್ತಿನ ಎರಡು ಬಲಾಢ್ಯ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿರುವ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಕಳೆದ ಹಲವು ವರ್ಷಗಳಲ್ಲಿ ಹೊಸ ಎತ್ತರಕ್ಕೆ ತಲುಪಿದೆ. ಇದೇ ವರ್ಷ ಭಾರತಕ್ಕೆ ಭೇಟಿ ನೀಡಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಭಾರತ ನಮ್ಮ ಆಪ್ತಮಿತ್ರ’ ಎಂದು ಹೇಳುವ ಜತೆಗೆ, ಸ್ವದೇಶಕ್ಕೆ ಮರಳಿದ ಮೇಲೆ ಹಲವು ಬಾರಿ ಭಾರತವನ್ನು, ಇಲ್ಲಿ ಸಿಕ್ಕ ಸ್ವಾಗತವನ್ನು ಸ್ಮರಿಸಿಕೊಂಡು, ಶ್ಲಾಘನೆಯ ನುಡಿಗಳನ್ನಾಡಿದ್ದರು. ಅದಕ್ಕೂ ಮುಂಚೆ ಅಮೆರಿಕದಲ್ಲಿ ಅನಿವಾಸಿ ಭಾರತೀಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡರು. ಅಲ್ಲದೆ, ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಆ ರಾಷ್ಟ್ರ, ಬಹಿರಂಗವಾಗಿ ನಮ್ಮ ದೇಶದ ಬೆಂಬಲಕ್ಕೆ ನಿಂತಿದೆ. ಚೀನಾ ವಿನಾಕಾರಣ ಗಡಿವಿವಾದಗಳನ್ನು ಸೃಷ್ಟಿಸುವುದು ಮತ್ತು ಶಾಂತಿ ಕದಡಲು ಯತ್ನಿಸುವ ಮೂಲಕ ಆಕ್ರಮಣಕಾರಿ ಹಾಗೂ ವಿಸ್ತಾರಣಾವಾದಿ ಧೋರಣೆ ಅನುಸರಿಸುವುದನ್ನು ಅಮೆರಿಕ ಚೆನ್ನಾಗಿ ಅರ್ಥಮಾಡಿಕೊಂಡಿದೆ. ಭಾರತ, ಆಸ್ಟ್ರೇಲಿಯಾ, ಹಾಂಕಾಂಗ್ ಸೇರಿ ಹಲವು ರಾಷ್ಟ್ರಗಳೊಡನೆ ಡ್ರಾ್ಯಗನ್ ರಾಷ್ಟ್ರ ಸುಖಾಸುಮ್ಮನೆ ವಿವಾದ ಸೃಷ್ಟಿಸಿಕೊಂಡಿದೆ. ಪೂರ್ವ ಲಡಾಖ್ ಪ್ರದೇಶದಲ್ಲಿ ಚೀನಾದ ನಡವಳಿಕೆ ಮತ್ತು ಅದಕ್ಕೆ ಭಾರತ ನೀಡಿರುವ ದಿಟ್ಟ ಉತ್ತರವನ್ನು ಜಾಗತಿಕ ಸಮುದಾಯ ಗಮನಿಸಿದೆ. ಈ ವಿಷಯದಲ್ಲಿ ಅಮೆರಿಕದ ಹೆಚ್ಚು ಸಂಸದರು, ಅದೂ ಪಕ್ಷಾತೀತವಾಗಿ ಭಾರತದ ಬೆಂಬಲಕ್ಕೆ ನಿಂತಿರುವುದು ಗಮನಾರ್ಹ ಬೆಳವಣಿಗೆ.
ಅಮೆರಿಕ ಸಂಸತ್ತಿನ ಉಭಯ ಸದನಗಳಾದ ಹೌಸ್ ಆಫ್ ರೆಪ್ರಸಂಟೇಟಿವ್ಸ್ ಮತ್ತು ಸೆನೆಟ್ ಸದಸ್ಯರು ಭಾರತದ ಪರವಾಗಿ ದನಿಯೆತ್ತಿದ್ದು, ಈ ಮೂಲಕ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಾಂಧವ್ಯ ಮತ್ತಷ್ಟು ಗಟ್ಟಿಗೊಂಡಂತಾಗಿದೆ. ಮಿಲಿಟರಿ ಆಕ್ರಮಣ ನಿಲ್ಲಿಸುವಂತೆ ಚೀನಾಕ್ಕೆ ಅಲ್ಲಿನ ಸಂಸದರು ಆಗ್ರಹಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲೂ ಇದಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ. ಅಷ್ಟು ಮಾತ್ರವಲ್ಲ, ಚೀನಾದ ವಿಡಿಯೋ ಷೇರಿಂಗ್ ಆಪ್ ಟಿಕ್ಟಾಕ್ ನಿಷೇಧಿಸಲು ಚಿಂತನೆ ನಡೆಸಿರುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಭಾರತ ಈಗಾಗಲೇ ಟಿಕ್ಟಾಕ್, ವಿ ಚಾಟ್ ಸೇರಿ ನೂರಕ್ಕೂ ಹೆಚ್ಚು ಆಪ್ಗಳನ್ನು ನಿಷೇಧ ಮಾಡಿದ ಬೆನ್ನಲ್ಲೇ ಅಮೆರಿಕದ ಈ ಕ್ರಮ ಚೀನಾಕ್ಕೆ ಮತ್ತೊಂದು ಆಘಾತ ನೀಡಿದೆ.
ಆ ಎರಡೂ ದೇಶಗಳ ವಾಣಿಜ್ಯ ಸಮರ ಈ ಮೂಲಕ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಗಳಿವೆ. ಮಾತುಕತೆ ಮೂಲಕ ಏರ್ಪಟ್ಟ ಪ್ಪಂದಗಳಿಗೆ ಒಂದಿಷ್ಟು ಬದ್ಧತೆ ತೋರದ ಚೀನಾ ಪ್ರಸಕ್ತ ಉತ್ತರಾಖಂಡದ ಲಿಪುಲೇಖ್ ಪಾಸ್ ಉದ್ದಕ್ಕೂ ತನ್ನ ಸೈನಿಕರನ್ನು ನಿಯೋಜಿಸಿದೆ. ಜಾಗತಿಕವಾಗಿ ಹಲವು ಆಯಾಮಗಳಲ್ಲಿ ಮುಖಭಂಗಕ್ಕೆ ಈಡಾಗುತ್ತಿರುವ ಚೀನಾ ಹತಾಶವಾಗಿದೆ ಎಂಬುದಕ್ಕೆ ಅದರ ಇಂಥ ವರ್ತನೆಗಳೇ ಸಾಕ್ಷಿ. ಅದೇನಿದ್ದರೂ, ಚೀನಾವನ್ನು ಹಣಿಯಲು ಭಾರತದ ಬೆನ್ನಿಗೆ ಅಮೆರಿಕದಂಥ ರಾಷ್ಟ್ರ ನಿಂತಿರುವುದು ಉತ್ತಮ ಬೆಳವಣಿಗೆಯೇ. ಇನ್ನಾದರೂ ಚೀನಾ ಉದ್ಧಟತನವನ್ನು ಬಿಟ್ಟು, ಶಾಂತಿ-ಸೌಹಾರ್ದದ ಹಾದಿ ತುಳಿಯುವುದೇ ಕಾದು ನೋಡಬೇಕು.