ನ್ಯೂಸ್

ಸಂಪಾದಕೀಯ; ಮಾರ್ಗಸೂಚಿ ಪಾಲಿಸಿ

ಸುದೀಪ್​ ವಿ.ಎನ್​

ದೇಶಾದ್ಯಂತ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. 2021ರಲ್ಲಿ 5,425 ಮತ್ತು 2022ರಲ್ಲಿ 13,044 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವ ಅಂಕಿಅಂಶಗಳನ್ನು ಗಮನಿಸಿದ ಸುಪ್ರೀಂಕೋರ್ಟ್, ಇದನ್ನು ‘ವ್ಯವಸ್ಥೆಯ ವೈಫಲ್ಯ’ ಎಂದು ಬಣ್ಣಿಸಿದೆ. ಈ ಪಿಡುಗನ್ನು ತಡೆಗಟ್ಟಲು ಸುಪ್ರೀಂಕೋರ್ಟ್ 15 ಅಂಶಗಳ ಮಾರ್ಗಸೂಚಿ ರೂಪಿಸಿರುವುದು ಸ್ವಾಗತಾರ್ಹ. ಆದರೆ, ಇದರ ಯಶಸ್ಸು ರಾಜ್ಯ ಸರ್ಕಾರಗಳು ಮತ್ತು ಶಿಕ್ಷಣ ಸಂಸ್ಥೆಗಳ ಆಸಕ್ತಿ ಹಾಗೂ ಅನುಷ್ಠಾನದ ಮೇಲೆ ಅವಲಂಬಿತವಾಗಿದೆ.

ವಿದ್ಯಾರ್ಥಿಗಳ ಆತ್ಮಹತ್ಯೆಗೆ ಹಲವಾರು ಕಾರಣಗಳಿವೆ. ಶೈಕ್ಷಣಿಕ- ಸಾಮಾಜಿಕ ಒತ್ತಡ, ಕುಟುಂಬದ ತೊಂದರೆಗಳು, ಮಾನಸಿಕ ಆರೋಗ್ಯದ ಸಮಸ್ಯೆ ಮತ್ತು ಸಮಾಜದಿಂದ ಸಿಗದ ಬೆಂಬಲ ಇವೆಲ್ಲವೂ ಈ ದುರಂತಗಳಿಗೆ ದಾರಿ ಮಾಡಿಕೊಡುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿರುವುದು ಈ ಸಮಸ್ಯೆಯ ತೀವ್ರತೆಯನ್ನು ಎತ್ತಿ ತೋರಿಸುತ್ತದೆ. ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮಾನಸಿಕ ಆರೋಗ್ಯ ಕೌನ್ಸೆಲಿಂಗ್ ಮಾಡಿಸುವುದು, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸುವುದಕ್ಕೆ ವಿದ್ಯಾಸಂಸ್ಥೆಗಳಲ್ಲಿ ಸೂಕ್ತ ವ್ಯವಸ್ಥೆ ಮಾಡುವುದು ಮುಂತಾದ ಸಲಹೆಗಳು ಸುಪ್ರೀಂಕೋರ್ಟ್​ನ ಮಾರ್ಗಸೂಚಿಯಲ್ಲಿ ಇವೆ. ಸಮಸ್ಯೆಯ ಪರಿಹಾರದ ದಿಸೆಯಲ್ಲಿ ಇದು ಅತ್ಯಂತ ಸಕಾರಾತ್ಮಕ ಹೆಜ್ಜೆಯಾಗಿದೆ. ಆದರೆ, ಈ ಮಾರ್ಗಸೂಚಿಗಳು ಕೇವಲ ಕಾಗದದ ಮೇಲೆ ಉಳಿಯದೆ, ನಿಜವಾದ ಬದಲಾವಣೆಯನ್ನು ತರಬೇಕೆಂದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಶಿಕ್ಷಣ ಸಂಸ್ಥೆಗಳು ಇವುಗಳ ಅನುಷ್ಠಾನಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇದನ್ನು ಯಶಸ್ವಿಯಾಗಿ ಜಾರಿಗೊಳಿಸಲು ಶಿಕ್ಷಣ ಸಂಸ್ಥೆಗಳಲ್ಲಿ ತರಬೇತಿ ಪಡೆದ ಕೌನ್ಸೆಲರ್​ಗಳನ್ನು ನೇಮಕ ಮಾಡಿಕೊಳ್ಳಬೇಕು. ಜೊತೆಗೆ, ವಿದ್ಯಾರ್ಥಿಗಳಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಸುರಕ್ಷಿತ ವಾತಾವರಣ ಸೃಷ್ಟಿಸಬೇಕು.

ಮಕ್ಕಳ ಮೇಲೆ ಅತಿ ಹೆಚ್ಚು ಪರಿಣಾಮ ಬೀರುವುದು ಹೆಚ್ಚಿನ ಅಂಕ ಗಳಿಕೆಗೆ ಪಾಲಕರು ಮತ್ತು ಶಿಕ್ಷಕರು ಹೇರುವ ಒತ್ತಡ. ಶೈಕ್ಷಣಿಕ ಸಾಧನೆಯು ಮಕ್ಕಳ ಮುಂದಿನ ಜೀವನಕ್ಕೆ ಮಹತ್ವದ ಅಡಿಪಾಯ ಎಂಬುದು ನಿರ್ವಿವಾದವಾದರೂ ಭವಿಷ್ಯ ಕಂಡುಕೊಳ್ಳಲು ಅದೊಂದೇ ಸಾಧನವಲ್ಲ. ಪ್ರತಿಯೊಬ್ಬರೂ ವಿಭಿನ್ನ ಸಾಮರ್ಥ್ಯ ಹೊಂದಿರುತ್ತಾರೆ. ಅವರವರ ಆಸಕ್ತಿಯ ಕ್ಷೇತ್ರ, ಸಾಮರ್ಥ್ಯ ನೋಡಿಕೊಂಡು ಆ ದಿಸೆಯಲ್ಲಿ ಪ್ರೋತ್ಸಾಹಿಸಿ ಮುನ್ನಡೆಸುವ ಪರಿಪಾಠವನ್ನು ಪಾಲಕರು ಮತ್ತು ಶಿಕ್ಷಕರು ಬೆಳೆಸಿಕೊಳ್ಳಬೇಕು. ಪಠ್ಯಕ್ಕೆ ಕೊಡುವಷ್ಟು ಮಹತ್ವವನ್ನು ಪಠ್ಯೇತರ ಚಟುವಟಿಕೆಗೂ ನೀಡಬೇಕು. ಇದರಿಂದ ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡ ಸಾಕಷ್ಟು ಕಡಿಮೆಯಾಗುತ್ತದೆ. ಇದರ ಜೊತೆಗೆ, ಆತ್ಮಹತ್ಯೆ ತಡೆಗಟ್ಟುವುದಕ್ಕಾಗಿ ಮನಶ್ಶಾಸ್ತ್ರಜ್ಞರ ಜತೆ ಸಮಾಲೋಚಿಸಿ, ರಾಷ್ಟ್ರ ಮಟ್ಟದಲ್ಲಿ ಒಂದು ಸಮಗ್ರ ಯೋಜನೆಯನ್ನು ರೂಪಿಸಬೇಕು. ವಿದ್ಯಾರ್ಥಿಗಳು ದೇಶದ ಭವಿಷ್ಯ. ಅವರ ಮಾನಸಿಕ ಆರೋಗ್ಯವನ್ನು ಕಾಪಾಡದಿದ್ದರೆ, ರಾಷ್ಟ್ರದ ಭವಿಷ್ಯವೇ ಅಪಾಯದಲ್ಲಿದ್ದಂತೆ. ಸುಪ್ರೀಂಕೋರ್ಟ್​ನ ಮಾರ್ಗಸೂಚಿಯ ಯಶಸ್ಸು ಸಮಾಜದ ಎಲ್ಲ ವರ್ಗಗಳ ಸಹಾಯ- ಸಹಕಾರದ ಮೇಲೆ ಅವಲಂಬಿತವಾಗಿದೆ. ಈ ದಿಸೆಯಲ್ಲಿ ತಕ್ಷಣದ ಕ್ರಮ ಕೈಗೊಂಡು, ಯುವಮನಸ್ಸುಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ.