Editorial 
ನ್ಯೂಸ್

ಸಂಪಾದಕೀಯ; ರೈತರ ಹಿತರಕ್ಷಣೆ ಅಗತ್ಯ

ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಮುಂಗಾರು ಮಳೆಯೇ ಆರ್ಥಿಕತೆಯ ಬೆನ್ನೆಲುಬು. ಆದರೆ, ಈ ವರ್ಷದ ಹವಾಮಾನ ಮುನ್ಸೂಚನೆಗಳು ಅನ್ನದಾತನ ಎದೆಯಲ್ಲಿ ನಡುಕ ಹುಟ್ಟಿಸಿವೆ. ಪೆಸಿಫಿಕ್ ಮಹಾಸಾಗರದ ಮೇಲ್ಮೈ ಉಷ್ಣಾಂಶ ಹೆಚ್ಚಾಗುವುದರಿಂದ ಉಂಟಾಗುವ ಎಲ್ ನಿನೋ ಪ್ರಭಾವದಿಂದಾಗಿ ಈ ಬಾರಿ ದೇಶದಲ್ಲಿ ಮುಂಗಾರು ಮಳೆ ಕುಂಠಿತವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಇದರಿಂದ ಇಡೀ ದೇಶದ ಆಹಾರ ಭದ್ರತೆ ಮತ್ತು ಗ್ರಾಮೀಣ ಬದುಕಿನ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ.
ಒಟ್ಟು ಜಿಡಿಪಿಯಲ್ಲಿ ಕೃಷಿ ವಲಯ ಸುಮಾರು ಶೇ. 15ರಿಂದ 18ರಷ್ಟು ಪಾಲನ್ನು ಹೊಂದಿದೆ. ಅದಕ್ಕಿಂತ ಹೆಚ್ಚಾಗಿ, ದೇಶದ ಅರ್ಧಕ್ಕಿಂತ ಹೆಚ್ಚು ಜನರು ಇಂದಿಗೂ ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಒಟ್ಟು ಕೃಷಿ ಭೂಮಿಯ ಪೈಕಿ ಶೇ. 70ಕ್ಕೂ ಹೆಚ್ಚು ಭಾಗ ಮಳೆಯನ್ನೇ ಆಶ್ರಯಿಸಿದೆ. ಮುಂಗಾರು ಮಳೆ ವಿಫಲವಾದರೆ, ಮಾರುಕಟ್ಟೆಯಲ್ಲಿನ ಆಹಾರ ಧಾನ್ಯಗಳ ಬೆಲೆಯೂ ಏರಿಕೆಯಾಗುತ್ತದೆ. ಗ್ರಾಮೀಣ ಭಾಗದಲ್ಲಿ ಜನರ ಖರೀದಿ ಸಾಮರ್ಥ್ಯ ಕುಸಿಯುವುದರಿಂದ ಕೈಗಾರಿಕಾ ಉತ್ಪನ್ನಗಳ ಬೇಡಿಕೆಯೂ ಕಡಿಮೆಯಾಗಿ, ಇಡೀ ಆರ್ಥಿಕ ಚಕ್ರಕ್ಕೆ ಅಡೆತಡೆ ಉಂಟಾಗುತ್ತದೆ.
ಯುದ್ಧ ಹಾಗೂ ಇಂಧನ ಬಿಕ್ಕಟ್ಟಿನ ನಡುವೆಯೂ ಭಾರತದ ಕಾರ್ಪೆರೇಟ್ ಕ್ಷೇತ್ರ ಸ್ಥಿರವಾಗಿದೆ. ಆದರೆ, ಕೃಷಿ ಕ್ಷೇತ್ರದಲ್ಲಿ ಪರಿಸ್ಥಿತಿ ಹೀಗಿಲ್ಲ. ಮಳೆ ಕೊರತೆಯಾದಾಗ ದೊಡ್ಡ ರೈತರು ಹೇಗೋ ನೀರಾವರಿ ಸೌಲಭ್ಯಗಳನ್ನು ಬಳಸಿಕೊಳ್ಳಬಲ್ಲರು. ಆದರೆ, ಒಂದೆರಡು ಎಕರೆ ನಂಬಿಕೊಂಡಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಪರಿಸ್ಥಿತಿ ಚಿಂತಾಜನಕವಾಗುತ್ತದೆ. ಮಳೆ ಇಲ್ಲದೆ ಅಂತರ್ಜಲ ಮಟ್ಟ ಕುಸಿದಾಗ ಬೋರ್​ವೆಲ್​ಗಳು ಬತ್ತಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುತ್ತದೆ. ಅಕಾಲಿಕ ಮಳೆ, ಅನಿಶ್ಚಿತ ಮಳೆಯಿಂದಾಗಿ ಈಗಾಗಲೇ ಬೆಳೆದ ಬೆಳೆಗಳು ಕೈಗೆ ಬರದಂತಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರ ಯುದ್ಧೋಪಾದಿಯಲ್ಲಿ ರೈತರ ನೆರವಿಗೆ ಧಾವಿಸಬೇಕು. ಬೆಳೆ ವಿಮೆ ಯೋಜನೆಗಳು ಕೇವಲ ಕಾಗದದ ಮೇಲೆ ಇರಬಾರದು. ಬೆಳೆ ನಷ್ಟವಾದ ತಕ್ಷಣ ರೈತರಿಗೆ ಯಾವುದೇ ವಿಳಂಬವಿಲ್ಲದೆ ಪರಿಹಾರ ತಲುಪುವಂತಾಗಬೇಕು. ಯುದ್ಧದ ಕಾರಣದಿಂದಾಗಿ ಜಾಗತಿಕವಾಗಿ ರಸಗೊಬ್ಬರಗಳ ಬೆಲೆ ಏರಿಕೆಯಾಗಿದೆ. ಸರ್ಕಾರ ಸಬ್ಸಿಡಿ ನೀಡಿ ರೈತರಿಗೆ ಕೈಗೆಟಕುವ ದರದಲ್ಲಿ ಇವುಗಳನ್ನು ಒದಗಿಸಬೇಕು. ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳ ಬಗ್ಗೆ ಕೃಷಿ ಇಲಾಖೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಕಿರು ನೀರಾವರಿ ಮತ್ತು ಹನಿ ನೀರಾವರಿ ಪದ್ಧತಿಗೆ ಹೆಚ್ಚಿನ ಪೋ›ತ್ಸಾಹ ನೀಡಬೇಕು. ಕೃಷಿ ಚಟುವಟಿಕೆಗಳು ಕುಂಠಿತವಾದಾಗ ಗ್ರಾಮೀಣ ಜನರು ವಲಸೆ ಹೋಗುವುದನ್ನು ತಡೆಯಲು ನರೇಗಾ ಅಡಿಯಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು.
ಅನ್ನದಾತ ಸಂಕಷ್ಟದಲ್ಲಿದ್ದಾಗ ಬೆನ್ನಿಗೆ ನಿಲ್ಲುವುದು ನಿಜವಾದ ಆಡಳಿತದ ಧರ್ಮ. ಪ್ರಕೃತಿಯ ಮುನಿಸನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲದಿದ್ದರೂ, ಅದರ ಪರಿಣಾಮಗಳನ್ನು ಎದುರಿಸಲು ರೈತರನ್ನು ಸಜ್ಜುಗೊಳಿಸುವುದು ನಮ್ಮ ಕೈಯಲ್ಲಿದೆ. ನಗರಗಳಲ್ಲಿ ಕುಳಿತು ಆರ್ಥಿಕ ಸುಧಾರಣೆಗಳ ಬಗ್ಗೆ ಮಾತನಾಡುವ ಮೊದಲು, ಹೊಲದಲ್ಲಿ ಬೆವರು ಹರಿಸುವ ರೈತನ ಮುಖದಲ್ಲಿನ ಆತಂಕವನ್ನು ಅಳಿಸುವುದು ಇಂದಿನ ತುರ್ತು ಅಗತ್ಯ.