ನ್ಯೂಸ್

ಸಂಪಾದಕೀಯ: ಆರೋಗ್ಯ ಸೇವೆ ವ್ಯಾಪ್ತಿ ಹಿಗ್ಗಲಿ

Webdesk - Mallikarjun K R

‘ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ’ಯ ಅಡಿಯಲ್ಲಿ ಆರೋಗ್ಯ ವಿಮಾ ಸೌಲಭ್ಯವನ್ನು 70 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಾದ ಎಲ್ಲರಿಗೂ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ. ಜುಲೈನಲ್ಲಿ ಮಂಡಿಸಲಾದ ಕೇಂದ್ರ ಬಜೆಟ್​ನಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದ ಸರ್ಕಾರ, ಬುಧವಾರ ಇದಕ್ಕೆ ಸಮ್ಮತಿಯ ಅಧಿಕೃತ ಮುದ್ರೆ ಒತ್ತಿದೆ. ಈ ನಿರ್ಧಾರದ ಪರಿಣಾಮವಾಗಿ 4.5 ಕೋಟಿ ಕುಟುಂಬಗಳು, ಒಟ್ಟು ಆರು ಕೋಟಿ ಹಿರಿಯ ನಾಗರಿಕರು 5 ಲಕ್ಷ ರೂ. ಮೌಲ್ಯದ ಉಚಿತ ಆರೋಗ್ಯ ವಿಮೆಗೆ ಅರ್ಹರಾಗಿರುತ್ತಾರೆ. ‘ಅರ್ಹ ಫಲಾನುಭವಿಗಳಿಹೆ ಸರ್ಕಾರದಿಂದ ಹೊಸದಾಗಿ ಕಾರ್ಡ್ ವಿತರಿಸಲಾಗುವುದು’ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಇದರಿಂದ ಹಿರಿಯ ನಾಗರಿಕರ ಚಿಕಿತ್ಸೆಗೆ ಅನುಕೂಲವಾಗಲಿದೆ. ಆದರೆ, ಇದೇ ವೇಳೆ ಆರೋಗ್ಯ ಸೇವೆಯ ವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸುವ ಮತ್ತು ಆರೋಗ್ಯ ವಿಮೆಗೆ ಸಂಬಂಧಪಟ್ಟ ಸರ್ಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿಸುವ ಅಗತ್ಯವಿದೆ. ಕೆಲ ರಾಜ್ಯಗಳು ತಮ್ಮದೇ ಆರೋಗ್ಯ ವಿಮೆ ಯೋಜನೆಗಳನ್ನು ತಂದಿದ್ದು, ಕೇಂದ್ರದ ಆಯುಷ್ಮಾನ್ ಯೋಜನೆಯನ್ನು ನಿರ್ಲಕ್ಷಿಸಿವೆ. ಇನ್ನೂ ಕೆಲವೆಡೆ ರಾಜ್ಯ ಮತ್ತು ಕೇಂದ್ರದ ಕಾರ್ಯಕ್ರಮಗಳನ್ನು ಒಟ್ಟಿಗೆ ಸೇರಿಸಿ, ಒಂದು ಯೋಜನೆ ರೂಪಿಸಲಾಗಿದೆ. ಆದರೆ, ವಾಸ್ತವದಲ್ಲಿ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಬಹುದೊಡ್ಡ ಜನಸಂಖ್ಯೆ ಇಂದಿಗೂ ಇಂಥ ಸರ್ಕಾರಿ ಯೋಜನೆಗಳಿಂದ ವಂಚಿತ ವಾಗಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಪರದಾಡುವಂಥ ಸನ್ನಿವೇಶವಿದೆ. ಅಷ್ಟೇ ಅಲ್ಲ, ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗದೆ ಬಡ ಮತ್ತು ಮಧ್ಯಮವರ್ಗದ ಕುಟುಂಬಗಳು ಸಾಲದ ಶೂಲಕ್ಕೆ ಸಿಲುಕುತ್ತಿವೆ. ಕುಟುಂಬದ ಒಬ್ಬ ವ್ಯಕ್ತಿ ಅನಾರೋಗ್ಯಕ್ಕೀಡಾಗಿ, ವೈದ್ಯಕೀಯ ಚಿಕಿತ್ಸೆ ಪಡೆದರೆ ಅದರಿಂದ ಕುಟುಂಬದ ಆರ್ಥಿಕತೆಯೇ ಬುಡಮೇಲಾಗುತ್ತದೆ. ಕೆಲ ದಿನಗಳ ಚಿಕಿತ್ಸೆಗಾಗಿ ಮಾಡಿದ ಸಾಲವನ್ನು ಹತ್ತಾರು ವರ್ಷಗಳ ಕಾಲ ಭರಿಸುವಂಥ ದಾರುಣ ಸ್ಥಿತಿ. ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿಯ (ಎನ್​ಎಸ್​ಎಸ್​ಒ) ಇತ್ತೀಚಿನ ಸಂಶೋಧನೆ ಪ್ರಕಾರ ಭಾರತದಲ್ಲಿ ಆರೋಗ್ಯ ವ್ಯವಸ್ಥೆಯು ಬಿಕ್ಕಟ್ಟಿನ ಸ್ಥಿತಿಯಲ್ಲಿದ್ದು, ಶೇಕಡ 86 ಗ್ರಾಮೀಣ ಪ್ರದೇಶದ ಜನರು ಹಾಗೂ ಶೇ.82 ನಗರ ಪ್ರದೇಶದ ಜನರು ಆರೋಗ್ಯ ವಿಮೆಯನ್ನು ಹೊಂದಿಲ್ಲ. ಮತ್ತು ಸರ್ಕಾರದ ಆರೋಗ್ಯ ವಿಮೆ ಹೊಂದಲು ನಿಗದಿ ಪಡಿಸಿರುವ ಕಠಿಣ ಮಾನದಂಡಗಳು ಜನರನ್ನು ಇಂಥ ಯೋಜನೆಗಳಿಂದ ವಂಚಿತವಾಗಿಸಿವೆ ಎಂಬುದು ಕಹಿ ವಾಸ್ತವ.

ಹೀಗಾಗಿ, ಆರೋಗ್ಯ ಸೇವೆಯ, ಆರೋಗ್ಯ ವಿಮೆಯ ವ್ಯಾಪ್ತಿಯನ್ನು ವಿಸ್ತರಿಸುವ ಜತೆಗೆ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಖಾತ್ರಿಪಡಿಸಬೇಕಿದೆ. ಇಂದಿಗೂ ಸೂಕ್ತ ಚಿಕಿತ್ಸೆ ಸಿಗದೆ ಅಥವಾ ವೈದ್ಯಕೀಯ ನಿರ್ಲಕ್ಷ್ಯದಿಂದ ಸಂಭವಿಸುತ್ತಿರುವ ಸಾವಿನ ಪ್ರಮಾಣ ಗಾಬರಿ ಹುಟ್ಟಿಸುವಂತಿದೆ. ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ವಿಸ್ತರಣೆಯೂ ಆಗಬೇಕಿದ್ದು, ಸರ್ಕಾರ ಹೆಚ್ಚೆಚ್ಚು ಜನರನ್ನು ಆರೋಗ್ಯ ವಿಮೆಯ ವ್ಯಾಪಿಗೆ ತರಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ.