ರಾಜ್ಯದಲ್ಲಿ ಜೂನ್ 1ರಿಂದ ಹೊಸ ಶೈಕ್ಷಣಿಕ ವರ್ಷ (2026-27) ಅಧಿಕೃತವಾಗಿ ಆರಂಭವಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಸಂಭ್ರಮ ಮತ್ತು ಉಲ್ಲಾಸದ ವಾತಾವರಣ ಮನೆಮಾಡಿದೆ. ಈ ಬಾರಿ ಶಿಕ್ಷಣ ಇಲಾಖೆಯು ಮಕ್ಕಳನ್ನು ಬರಮಾಡಿಕೊಳ್ಳಲು ಒಂದಷ್ಟು ಹೊಸ ಯೋಜನೆಗಳೊಂದಿಗೆ ಸಜ್ಜಾಗಿದೆಯಾದರೂ, ಅದರ ಬೆನ್ನಲ್ಲೇ ಕೆಲವು ಹಳೆಯ ಮತ್ತು ಹೊಸ ಸವಾಲುಗಳು ತಲೆದೂರಿವೆ. ಈ ಬಾರಿ 1ರಿಂದ 10ನೇ ತರಗತಿಯ ಜೊತೆಗೆ ದ್ವಿತೀಯ ಪಿಯುಸಿವರೆಗೂ ಉಚಿತ ಪಠ್ಯಪುಸ್ತಕ ವಿತರಣೆಯನ್ನು ವಿಸ್ತರಿಸಲಾಗಿರುವುದು ಸ್ವಾಗತಾರ್ಹ. ಶೇಕಡ 95ಕ್ಕೂ ಹೆಚ್ಚು ಶಾಲೆಗಳಿಗೆ ಈಗಾಗಲೇ ಮೊದಲ ಭಾಗದ ಪಠ್ಯಪುಸ್ತಕಗಳು ಹಾಗೂ ಶೇ. 90ರಷ್ಟು ಶಾಲೆಗಳಿಗೆ ಮೊದಲ ಸೆಟ್ ಸಮವಸ್ತ್ರ ತಲುಪಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. ಆದರೆ, ಈ ಬಾರಿ ಕೇಂದ್ರೀಕೃತ ಟೆಂಡರ್ ಪ್ರಕ್ರಿಯೆ ತಡವಾಗಿರುವುದರಿಂದ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಸಿಗಲು ಕನಿಷ್ಠ ಜುಲೈ ಅಂತ್ಯದವರೆಗೆ ಕಾಯಬೇಕಾಗಿದೆ. ರಾಜ್ಯದ 900 ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದ್ದು, ಎಲ್ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡಲು ಸಿದ್ಧತೆ ನಡೆದಿರುವುದು, ಉತ್ತಮ ಬೆಳವಣಿಗೆ.
ಈ ನಡುವೆ ಹಳೆಯ ಸಮಸ್ಯೆಗಳು ಮರುಕಳಿಸುತ್ತಲೇ ಇವೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗ ಸೇರಿದಂತೆ ರಾಜ್ಯದಾದ್ಯಂತ ಸಾವಿರಾರು ಶಾಲಾ ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡಿವೆ. ಜೂನ್ನಲ್ಲಿ ಮುಂಗಾರು ಮಳೆ ಆರಂಭವಾಗುತ್ತಿರುವುದರಿಂದ ಸೋರುವ ಸೂರಿನಡಿ ಮಕ್ಕಳು ಕೂರಬೇಕಾದ ಅನಿವಾರ್ಯತೆ ಇದೆ. ಕಲ್ಯಾಣ ಕರ್ನಾಟಕ ಭಾಗದಲ್ಲೇ 2,009 ಕೊಠಡಿಗಳು ಶಿಥಿಲವಾಗಿವೆ ಎಂದು ಗುರುತಿಸಲಾಗಿದೆ. ಶಿಥಿಲಗೊಂಡ ಕೊಠಡಿಗಳ ದುರಸ್ತಿಗೆ ಕೇವಲ ಶಿಕ್ಷಣ ಇಲಾಖೆಯ ಅನುದಾನವನ್ನು ನೆಚ್ಚಿಕೊಳ್ಳದೆ, ಸ್ಥಳೀಯ ಶಾಸಕರ ನಿಧಿ, ಜಿಲ್ಲಾ ಪಂಚಾಯಿತಿ ಮತ್ತು ಪ್ರಾದೇಶಿಕ ಮಂಡಳಿಗಳ ವಿಶೇಷ ನಿಧಿಯನ್ನು ಬಳಸಿಕೊಂಡು ಯುದ್ಧೋಪಾದಿಯಲ್ಲಿ ದುರಸ್ತಿ ಮಾಡಬೇಕು. ಅಪಾಯಕಾರಿ ಕಟ್ಟಡಗಳಲ್ಲಿ ತರಗತಿ ನಡೆಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ಸುರಕ್ಷಿತ ವಾತಾವರಣ ಒದಗಿಸಿದಾಗ ಮಾತ್ರ ಅವರು ಉತ್ಸಾಹದಿಂದ ಶಾಲೆಯ ಕಡೆ ಹೆಜ್ಜೆ ಹಾಕಲು ಸಾಧ್ಯ. ಹಳ್ಳಿಗಳ ಹಲವು ಶಾಲೆಗಳಲ್ಲಿ ತರಗತಿಗೊಬ್ಬ ಶಿಕ್ಷಕರಿಲ್ಲದ ಪರಿಸ್ಥಿತಿ ಇದೆ. ಅತಿಥಿ ಶಿಕ್ಷಕರನ್ನು ನೆಚ್ಚಿಕೊಂಡೇ ಹೆಚ್ಚಿನ ಶಾಲೆಗಳು ನಡೆಯುತ್ತಿವೆ. ಇದರ ಪರಿಣಾಮವಾಗಿ, ಸರ್ಕಾರಿ ಕನ್ನಡ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ತೀವ್ರವಾಗಿ ಕುಸಿಯುತ್ತಿದೆ. ಹಾಗಾಗಿ, ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕು ಹಾಗೂ ಗ್ರಾಮೀಣ ಭಾಗಗಳಿಗೆ ಕಡ್ಡಾಯ ಸೇವೆ ನಿಯಮವನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು.
ದೊಡ್ಡ ಕೆಪಿಎಸ್ ಶಾಲೆಗಳನ್ನು ತೆರೆಯುವ ಉತ್ಸಾಹದಲ್ಲಿ ಹಳ್ಳಿಗಳ ಸಣ್ಣ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳಲು, ಶಾಲೆಗಳನ್ನು ದತ್ತು ಪಡೆಯಲು, ಮೂಲಸೌಕರ್ಯ ಒದಗಿಸಲು ಸರ್ಕಾರ ಪ್ರೇರೇಪಿಸಬೇಕು. ಕಳೆದ ಒಂದು ದಶಕದಲ್ಲೇ (2016-2026) ರಾಜ್ಯದಲ್ಲಿ 7,575 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಮಕ್ಕಳ ಸಂಖ್ಯೆ ಇಳಿಮುಖವಾಗಿರುವುದು ಹಾಗೂ ಶಾಲೆಗಳ ವಿಲೀನ ಇದಕ್ಕೆ ಮುಖ್ಯ ಕಾರಣ. ಸರ್ಕಾರಿ ಶಾಲೆಗಳ ಸಮಗ್ರ ಸುಧಾರಣೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕವಾದರೆ ಮಾತ್ರ ನಮ್ಮ ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ.