ನ್ಯೂಸ್

ಸಂಪಾದಕೀಯ: ಪರಿಸರಪೂರಕ ಅಭಿವೃದ್ಧಿ

ಸುದೀಪ್​ ವಿ.ಎನ್​

ರಾಜ್ಯದಲ್ಲಿ ಮುಂಗಾರು ಆಗಮನವಾಗಿದ್ದು, ಹಲವೆಡೆ ಗುಡ್ಡ ಕುಸಿತದಂತಹ ಘಟನೆಗಳೂ ಸಂಭವಿಸುತ್ತಿವೆ. ದಕ್ಷಿಣ ಕನ್ನಡ, ಕೊಡಗು ಮುಂತಾದ ಪ್ರದೇಶಗಳಲ್ಲಿ ಭೂಕುಸಿತಗಳು ಆಗುತ್ತಿರುವ ಹಿನ್ನೆಲೆಯಲ್ಲಿ, ಪಶ್ಚಿಮ ಘಟ್ಟದ ಧಾರಣಾಶಕ್ತಿಯ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಲಿಖಿತ ಸೂಚನೆ ನೀಡಿದ್ದಾರೆ. ಪಶ್ಚಿಮ ಘಟ್ಟದಲ್ಲಿ ರಸ್ತೆ ಮತ್ತಿತರ ಯೋಜನೆಗಳು ಕಾರ್ಯಗತವಾಗುತ್ತಿದ್ದು, ಇದರಿಂದ ಘಟ್ಟ ಅಪಾಯಕ್ಕೆ ಸಿಲುಕಿದೆ, ಆಸ್ತಿಹಾನಿ, ಬೆಳೆ ಹಾನಿ, ಜೀವಹಾನಿಯ ಜೊತೆಗೆ ವನ್ಯಜೀವಿಗಳೂ ಸಂಕಷ್ಟ ಎದುರಿಸುವಂತಾಗಿದೆ. ಪಶ್ಚಿಮಘಟ್ಟ ಕ್ಷೀಣಿಸಿದರೆ ಮುಂಬರುವ ದಿನಮಾನಗಳಲ್ಲಿ ತೀವ್ರ ಜಲಕ್ಷಾಮ ಎದುರಾಗುವ ಭೀತಿ ಇದೆ ಎಂಬ ತಜ್ಞರ ಆತಂಕವನ್ನು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ವರ್ಷ ಕೇರಳದ ವಯನಾಡು ಮುಂತಾದೆಡೆ ಭೂಕುಸಿತ ಸಂಭವಿಸಿ ಅಪಾರ ಹಾನಿಯಾದ ಸಂದರ್ಭದಲ್ಲಿಯೂ, ಕರ್ನಾಟಕ ವ್ಯಾಪ್ತಿಯ ಪಶ್ಚಿಮ ಘಟ್ಟದ ಸುರಕ್ಷತೆ ಬಗ್ಗೆಯೂ ಆತಂಕ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ವ್ಯಾಪ್ತಿಯಲ್ಲಿನ ಅಕ್ರಮ ಕಟ್ಟಡಗಳು, ಅನಧಿಕೃತ ಹೋಮ್ ಸ್ಟೇ ಮುಂತಾದವುಗಳ ತೆರವಿಗೆ ರಾಜ್ಯ ಸರ್ಕಾರ ಮುಂದಾಗಿತ್ತು. ಪಶ್ಚಿಮ ಘಟ್ಟವು ಪ್ರಮುಖ ಜಾಗತಿಕ ಜೀವವೈವಿಧ್ಯ ತಾಣಗಳಲ್ಲಿ ಸೇರಿದೆ.

ಇಲ್ಲಿ ಅಪಾರವಾದ ಸಸ್ಯ ಹಾಗೂ ಪ್ರಾಣಿಸಂಪತ್ತಿದ್ದು, ಅಭಿವೃದ್ಧಿ ಯೋಜನೆಗಳು, ಅತಿಕ್ರಮಣ ಇತ್ಯಾದಿ ಕಾರಣಕ್ಕೆ ಈ ಸಂಪತ್ತಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂಬ ಕಳವಳ ಅನೇಕ ವರ್ಷಗಳಿಂದ ಇದೆ. ಕರ್ನಾಟಕದ ಒಟ್ಟು ಅರಣ್ಯದ ಪೈಕಿ ಶೇ.60ರಷ್ಟು ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿಯೇ ಇರುವುದು ಗಮನಾರ್ಹ. ಮಳೆಯ ಮಾರುತ ತಡೆದು ಮಳೆ ಸುರಿಸುವಲ್ಲಿಯೂ ಪಶ್ಚಿಮ ಘಟ್ಟದ್ದು ಮುಖ್ಯ ಪಾತ್ರ. ಹೀಗಾಗಿ ಈ ಅಮೂಲ್ಯ ಸಂಪತ್ತಿನ ರಕ್ಷಣೆಯಾಗಲೇಬೇಕು. ಖಾಸಗಿ ಸಂಘಟನೆಗಳು ಧಾರಣಶಕ್ತಿಯ ಅಧ್ಯಯನ ನಡೆಸಿದ ನಿದರ್ಶನ ಇದೆಯಾದರೂ, ಈಗ ಸರ್ಕಾರವೇ ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿರುವುದು ವಿಶೇಷ. ದಟ್ಟಾರಣ್ಯದ ವ್ಯಾಪ್ತಿಯಲ್ಲಿ ರಸ್ತೆ, ಕಟ್ಟಡ ನಿರ್ವಣ, ಜಲ ವಿದ್ಯುತ್ ಯೋಜನೆ ಇತ್ಯಾದಿ ಚಟುವಟಿಕೆಗಳು ಹಾಗೂ ಅತಿಕ್ರಮಣದ ಕಾರಣಕ್ಕೆ ಪರಿಸರ ಸ್ಥಿತಿಯ ಮೇಲೆ ದುಷ್ಪರಿಣಾಮ ಆಗುತ್ತದೆ. ಇದಲ್ಲದೆ, ಈಚಿನ ವರ್ಷಗಳಲ್ಲಿ ಪ್ರವಾಸೋದ್ಯಮವು ದೊಡ್ಡ ಪ್ರಮಾಣದಲ್ಲಿ ಬೆಳೆದಿರುವುದರಿಂದ ಹೋಮ್ ಸ್ಟೇಗಳು ಭಾರಿ ಸಂಖ್ಯೆಯಲ್ಲಿ ನಿರ್ವಣಗೊಂಡಿವೆ.

ಈ ಪೈಕಿ ಅನೇಕವಕ್ಕೆ ಅನುಮತಿ ಇಲ್ಲ. ಹಾಗಂತ, ವ್ಯಾಪಕ ಉದ್ಯೋಗಾವಕಾಶ ಹಾಗೂ ಆದಾಯ ತರುವ ಪ್ರವಾಸೋದ್ಯಮವನ್ನು ನಿರ್ಲಕ್ಷಿಸುವ ಹಾಗೂ ಇಲ್ಲ. ಅದೇ ರೀತಿ, ಜನರಿಗೆ ಅತ್ಯಗತ್ಯವಾದ ರಸ್ತೆ, ನೀರು ಮುಂತಾದ ಯೋಜನೆಗಳನ್ನೂ ಸಂಪೂರ್ಣವಾಗಿ ಕಡೆಗಣಿಸಲಾಗದು. ಅದೇ ಹೊತ್ತಿಗೆ, ಪರಿಸರ ಆರೋಗ್ಯದ ಬಗ್ಗೆಯೂ ಎಚ್ಚರ ಬೇಕು. ಒಟ್ಟಿನಲ್ಲಿ, ಒಂದು ಸಮತೋಲನದ ನಿಲುವು ಇಂದಿನ ತುರ್ತ. ಯಾವ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದು, ಯಾವ ಯೋಜನೆ ಪರಿಸರಕ್ಕೆ ಭಾರವಾಗಬಹುದು ಎಂಬುದನ್ನು ತಿಳಿಯಲು ಧಾರಣಾ ಶಕ್ತಿಯ ಅಧ್ಯಯನ ನೆರವಾಗಬಹುದು. ಬಳಿಕ ಈ ಬಗ್ಗೆ ಅರ್ಥಪೂರ್ಣ ನಿರ್ಣಯ ಹೊರಹೊಮ್ಮುವುದೆಂದು ನಿರೀಕ್ಷಿಸೋಣ.