ನ್ಯೂಸ್

ಸಂಪಾದಕೀಯ| ಆರಂಭಶೂರತ್ವ ಆಗದಿರಲಿ

Webdesk - Manjunatha B

ಸಾಮಾಜಿಕ ಜಾಲತಾಣಗಳಲ್ಲಿ ಹಾವಳಿ ಎಬ್ಬಿಸಿರುವ ಡೀಪ್​ಫೇಕ್ ವಿಡಿಯೋಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ಕಳವಳ ವ್ಯಕ್ತಪಡಿಸಿದ ಬೆನ್ನಿಗೇ, ಅಂಥ ಕಂಟೆಂಟ್​ಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಡೀಪ್​ಫೇಕ್ ವಿಡಿಯೋಗಳ ಬಗ್ಗೆ ದೂರು ನೀಡಲು ಸಾರ್ವಜನಿಕರಿಗಾಗಿ ಒಂದು ಪ್ರತ್ಯೇಕ ವೆಬ್​ಸೈಟ್, ಆಕ್ಷೇಪಾರ್ಹ ಕಂಟೆಂಟ್ ತೆಗೆದುಹಾಕಲು ನಿರ್ದಿಷ್ಟ ಸಮಯದ ಗಡುವು, ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ದಾಖಲಿಸುವುದಕ್ಕೆ ಸಂತ್ರಸ್ತರಿಗೆ ನೆರವು, 3 ವರ್ಷ ಜೈಲು ಮತ್ತು 1 ಲಕ್ಷ ರೂ. ದಂಡ, ಈ ಪ್ರಕ್ರಿಯೆಯ ಉಸ್ತುವಾರಿ ನೋಡಿಕೊಳ್ಳಲು ಒಬ್ಬ ವಿಶೇಷ ಅಧಿಕಾರಿಯ ನೇಮಕ ಮುಂತಾದ ನಿರ್ಧಾರಗಳನ್ನು ಕೇಂದ್ರ ಕೈಗೊಂಡಿದೆ. ಕೃತಕ ಬುದ್ಧಿಮತ್ತೆಯ (ಎಐ) ದುರುಪಯೋಗವನ್ನು ಮೋದಿ ಸರ್ಕಾರ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದಕ್ಕೆ ಈ ತೀರ್ವನಗಳೇ ಸಾಕ್ಷಿ.

ನಟಿ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಕಾಜೋಲ್ ಮುಂತಾದವರ ಡೀಪ್​ಫೇಕ್ ವಿಡಿಯೋ ಮತ್ತು ಚಿತ್ರಗಳು ಎಲ್ಲೆಡೆ ವೈರಲ್ ಆಗಿ, ದೊಡ್ಡ ಸುದ್ದಿಯಾಗಿದ್ದರಿಂದ ಅದು ಕೇಂದ್ರ ಸರ್ಕಾರದ ಗಮನಕ್ಕೂ ಬಂತು. ಆದರೆ ಎಐ ತಂತ್ರಜ್ಞಾನದ ಮೂಲಕ ರೂಪಿಸಿದ ಅಥವಾ ಮಾರ್ಫ್ ಮಾಡಿದ ಇನ್ನೂ ನೂರಾರು ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸುತ್ತುತ್ತಲೇ ಇವೆ. ಇದು ಖಂಡಿತವಾಗಿಯೂ ಸಂಬಂಧಿಸಿದ ವ್ಯಕ್ತಿಗಳ ವೈಯಕ್ತಿಕ ಹಕ್ಕುಗಳ ಉಲ್ಲಂಘನೆ. ಜತೆಗೆ ಸಮಾಜದಲ್ಲಿ ಅವರ ಬಗೆಗೆ ತಪ್ಪು ಮಾಹಿತಿ ಹರಡುವುದರಿಂದ ಮಾನಹಾನಿ ಪ್ರಕರಣದ ವ್ಯಾಪ್ತಿಗೂ ಬರುತ್ತದೆ.

ಅತ್ಯಂತ ನೈಜ ಎನ್ನಿಸುವಂತೆ ಕಾಣಿಸುವ ಇವುಗಳನ್ನು ಸಾಮಾನ್ಯ ಜನರು ನಿಜವೆಂದೇ ನಂಬುತ್ತಾರೆ. ಅವುಗಳ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚುವ ಗೋಜಿಗೆ ತಮ್ಮ ಪರಿಚಿತರಿಗೆ, ಸ್ನೇಹಿತರಿಗೆ, ಕುಟುಂಬ ಸದಸ್ಯರಿಗೆ ಕಳಿಸುತ್ತಾರೆ. ಇಂತಹ ಮಾನಹಾನಿಕರ ವಿಡಿಯೋ/ಚಿತ್ರ ರೂಪಿಸುವುದಂತೂ ಅಪರಾಧವೇ. ಅಂಥವರು ಶಿಕ್ಷಾರ್ಹರು ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಅವಕಾಶವಾಗಲೇಬಾರದು. ಆದರೆ ಅದನ್ನು ಸತ್ಯವೆಂದು ನಂಬಿ ಇತರರಿಗೆ ಕಳಿಸುವುದು ಕೂಡ ಅಪರಾಧವೇ? ಅವರು ಕೂಡ ಶಿಕ್ಷಾರ್ಹರೇ? ಅಥವಾ ಅವರು ಅಮಾಯಕರೇ? ಈ ಬಗ್ಗೆ ಕೇಂದ್ರ ಸರ್ಕಾರ ರೂಪಿಸುತ್ತಿರುವ ನಿಯಮಗಳಲ್ಲಿ ಸ್ಪಷ್ಟತೆ ಮೂಡಿಸಬೇಕಾದ ಅವಶ್ಯಕತೆ ಇದೆ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಆರಂಭಶೂರತ್ವ ಮೆರೆಯದೇ, ಹೊಸ ರೀತಿಯ ಈ ಪಿಡುಗನ್ನು ಬೇರುಸಮೇತ ಕಿತ್ತುಹಾಕಬೇಕು.

ಇತ್ತೀಚೆಗೆ ಬ್ರಿಟನ್​ನಲ್ಲಿ ನಡೆದ ಮೊತ್ತಮೊದಲ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್​ನ ಸುರಕ್ಷತಾ ಶೃಂಗಸಭೆಯಲ್ಲಿ ಈ ಪಿಡುಗಿನ ಬಗ್ಗೆ ಚರ್ಚೆಯಾಗಿದೆ. ಈ ಶೃಂಗಸಭೆಯಲ್ಲಿ ಅಮೆರಿಕ, ಫ್ರಾನ್ಸ್, ಚೀನಾ, ಜಪಾನ್, ಭಾರತ ಸೇರಿದಂತೆ ಒಟ್ಟು 28 ರಾಷ್ಟ್ರಗಳು ಭಾಗವಹಿಸಿದ್ದವು. ಎಐ ದುರ್ಬಳಕೆಯನ್ನು ತಡೆಗಟ್ಟಲು ಜಾಗತಿಕ ಕ್ರಮವೂ ಅಗತ್ಯ ಎಂಬುದನ್ನು ಶೃಂಗಸಭೆ ಪ್ರತಿಪಾದಿಸಿತು. ಈ ವಿಷಯದಲ್ಲಿ ತಮ್ಮ ಪಾತ್ರವೂ ಹಿರಿದು ಎಂಬುದನ್ನು ಜಗತ್ತಿನ ಬೃಹತ್ ಟೆಕ್ ಕಂಪನಿಗಳು ಅರಿಯಬೇಕಾಗಿದೆ.