Editorial | ಸಂಪಾದಕೀಯ; ಗುಳೆ ತಡೆಯಿರಿ 
ನ್ಯೂಸ್

ಸಂಪಾದಕೀಯ; ಗುಳೆ ತಡೆಯಿರಿ

ಮಣಿಕಂಠ ಪಾ ಹಿರೇಮಠ
ರಾಜ್ಯದ 17 ಜಿಲ್ಲೆಗಳಲ್ಲಿ ಇನ್ನೂ ಮಳೆಯ ಕೊರತೆ ಇದ್ದು, ಕೃಷಿ ಚಟುವಟಿಕೆಗಳು ವೇಗ ಪಡೆದಿಲ್ಲ. ಬರದ ಛಾಯೆ ದಟ್ಟವಾಗಿ ಆವರಿಸಿದ್ದು, ಕೃಷಿ ಕಾರ್ಮಿಕರು ಹಾಗೂ ಇತರ ಶ್ರಮಿಕರು ಕೆಲಸಕ್ಕಾಗಿ ಗುಳೆ ಹೋಗುವ ಅನಿವಾರ್ಯತೆ ಎದುರಾಗಿದೆ. ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗಗಳಲ್ಲಿ ಈ ಸಮಸ್ಯೆ ವ್ಯಾಪಕವಾಗಿದ್ದು, ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಮೋತಿಕಲ್​ ತಾಂಡಾ, ದೂಪದಹಳ್ಳಿ ಸೇರಿ ವಿವಿಧ ಗ್ರಾಮಗಳಿಂದ 2 ಸಾವಿರಕ್ಕೂ ಅಧಿಕ ಜನರು ಗುಳೆ ಹೋಗಿರುವುದು ಸಮಸ್ಯೆಯ ತೀವ್ರತೆಗೆ ಸಾಕ್ಷಿ.
ವಿಜಯಪುರ, ಕೊಪ್ಪಳ, ಗದಗ, ಹಾವೇರಿ, ಯಾದಗಿರಿ, ಕಲಬುರಗಿ, ಬೀದರ್​ ಜಿಲ್ಲೆಗಳಲ್ಲೂ ಸ್ಥಿತಿ ಭಿನ್ನವಾಗೇನೂ ಇಲ್ಲ. ಬರಗಾಲ ಬಂದಾಗ ಅಥವಾ ನೆರೆಯ ಸ್ಥಿತಿ ಸೃಷ್ಟಿಯಾದಾಗ ಇಲ್ಲಿನ ಹಳ್ಳಿಗಳೇ ಖಾಲಿಯಾಗುತ್ತವೆ. ಆದರೆ, ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಪ್ರಯತ್ನಗಳು ಗಂಭೀರವಾಗಿ ನಡೆದಿಲ್ಲ. ಸ್ಥಳೀಯವಾಗಿ ಉದ್ಯೋಗಸೃಷ್ಟಿ ಆಗದ ಪರಿಣಾಮ ಗುಳೆ ಸಾಮಾನ್ಯ ಎಂಬಂತಾಗಿದೆ. ಕೃಷ್ಣಾ ಮತ್ತು ಮಹಾದಾಯಿ ಸೇರಿದಂತೆ ಹಲವು ಪ್ರಮುಖ ನೀರಾವರಿ ಯೋಜನೆಗಳು ದಶಕಗಳಿಂದ ನನೆಗುದಿಗೆ ಬಿದ್ದಿರುವುದರಿಂದ, ಈ ಭಾಗದ ಕೃಷಿ ಕೇವಲ ಮಳೆಯನ್ನೇ ನಂಬಿ, ನಷ್ಟವೇ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.
ಗ್ರಾಮೀಣ ಭಾಗದಲ್ಲಿ ಜುಲೈ 1ರಿಂದ ನರೇಗಾ ಯೋಜನೆ ಜಾರಿಯಾಗಿದ್ದರೂ, ಇದು ಆರಂಭಿಕ ಹಂತದಲ್ಲಿ ಇರುವುದರಿಂದ ಉದ್ಯೋಗ ಖಾತರಿ ಆಶಯ ಇನ್ನೂ ಈಡೇರಿಲ್ಲ. ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಕೃಷಿ ಬಿಟ್ಟರೆ ಪರ್ಯಾಯ ಉದ್ಯೋಗ ಸೃಷ್ಟಿಸುವ ಸಣ್ಣ ಅಥವಾ ಮಧ್ಯಮ ಗಾತ್ರದ ಕೈಗಾರಿಕೆಗಳು ತೀರಾ ವಿರಳ. ಹೀಗಾಗಿ, ಬದುಕನ್ನು ಕಟ್ಟಿಕೊಳ್ಳಲು ಮಹಾನಗರಗಳಿಗೆ ಬಂದು, ಕಡಿಮೆ ಕೂಲಿಗೆ ಕೆಲಸ ನಿರ್ವಹಿಸುವಂಥ ದಯನೀಯ ಸ್ಥಿತಿ ಇದೆ.
ಬರಗಾಲದಿಂದಾಗಿ ರೈತರು ಮತ್ತು ಕೃಷಿ ಕಾರ್ಮಿಕರು ಸಾಲದ ಸುಳಿಗೆ ಸಿಲುಕಿದ್ದಾರೆ. ಸ್ಥಳೀಯವಾಗಿ ಸಾಲ ತೀರಿಸಲು ದಾರಿ ಇಲ್ಲದೆ, ಬೆಂಗಳೂರು, ಪುಣೆ, ಮುಂಬೈನಂತಹ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಬರಗಾಲದ ಸಮಯದಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಖಾತರಿ ದಿನಗಳನ್ನು ಹೆಚ್ಚಿಸುವುದು ಸೂಕ್ತ. ದೈಹಿಕ ಶ್ರಮದ ಕೆಲಸಗಳಲ್ಲದೆ, ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಕೌಶಲ ಆಧಾರಿತ ಕೆಲಸಗಳನ್ನು ಸೇರಿಸಬೇಕು. ಮುಖ್ಯವಾಗಿ, ಕೂಲಿ ಹಣ ನೇರವಾಗಿ ಮತ್ತು ತತ್ಕ್ಷಣವೇ ಶ್ರಮಿಕರ ಖಾತೆಗೆ ಜಮೆಯಾಗುವಂತೆ ಪಾರದರ್ಶಕತೆ ತರಬೇಕು. ವಿಜಯನಗರ, ಕೊಪ್ಪಳ, ಯಾದಗಿರಿ ಮುಂತಾದ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಸಿಗುವ ಕೃಷಿ ಉತ್ಪನ್ನಗಳಿಗೆ (ಉದಾಹರಣೆಗೆ, ಮೆಣಸಿನಕಾಯಿ, ಶೇಂಗಾ, ಹತ್ತಿ) ಪೂರಕವಾದ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕು. ಗ್ರಾಮೀಣ ಯುವಕರಿಗೆ ಸ್ಥಳೀಯವಾಗಿಯೇ ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ ಮತ್ತು ರಿಯಾಯಿತಿ ದರದಲ್ಲಿ ಸಾಲ ನೀಡಬೇಕು.
ಗುಳೆ ಎನ್ನುವುದು ಕೇವಲ ಜನರ ಸ್ಥಳಾಂತರವಲ್ಲ; ಅದು ನಮ್ಮ ಗ್ರಾಮೀಣ ಆರ್ಥಿಕತೆಯ ವೈಫಲ್ಯದ ಸಂಕೇತ. ಸರ್ಕಾರಗಳು ತಾತ್ಕಾಲಿಕ ಪರಿಹಾರವಾಗಿ ಪಡಿತರ ಧಾನ್ಯ ಅಥವಾ ಅಲ್ಪಸ್ವಲ್ಪ ಪರಿಹಾರ ನೀಡುವುದನ್ನು ಬಿಟ್ಟು, ಗ್ರಾಮೀಣ ಭಾಗದಲ್ಲಿ ಆರ್ಥಿಕ ಸ್ಥಿರತೆ ತರುವ ನಿಟ್ಟಿನಲ್ಲಿ ದೀರ್ಘಾವಧಿ ಯೋಜನೆಗಳನ್ನು ರೂಪಿಸಬೇಕಿದೆ. ಆಗಲೇ ಹಳ್ಳಿಗಳು ಖಾಲಿಯಾಗುವುದನ್ನು ತಡೆಯಲು ಸಾಧ್ಯ.