ಗ್ರಾಮೀಣ ಕೇಂದ್ರಿತ ಅಭಿವೃದ್ಧಿ ಸಾಧ್ಯವಾಗದೇ ಇರುವುದರಿಂದ ಇಂದಿಗೂ ಹಳ್ಳಿಗಳ ಸ್ಥಿತಿ ಶೋಚನೀಯವಾಗಿದ್ದು, ಉದ್ಯೋಗ ಅರಸಿಕೊಂಡು ದೂರದ ಪ್ರದೇಶಗಳಿಗೆ ಹೋಗಬೇಕಿದೆ. ವಲಸೆ ಸಮಸ್ಯೆ ಇಂದು-ನಿನ್ನೆಯದೇನಲ್ಲ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಸಾವಿರಾರು ಗ್ರಾಮಸ್ಥರು ಕೂಲಿಯನ್ನು ಅರಸಿ ದೊಡ್ಡ ಶಹರವನ್ನು ಸೇರುವುದು, ಅಲ್ಲಿ ಯಾವುದೇ ಸುರಕ್ಷೆ ಇಲ್ಲದೆ ಬದುಕನ್ನು ಸಾಗಿಸುವುದು ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಇದರ ಪ್ರಮಾಣ ಎಷ್ಟು ತೀವ್ರವಾಗಿದೆ ಎಂದರೆ ಹಳ್ಳಿಗೆ ಹಳ್ಳಿಗಳೇ ಖಾಲಿ ಆಗುತ್ತಿದ್ದು, ಮನೆಗಳಲ್ಲಿ ಬರೀ ವೃದ್ಧರು, ಶಾಲೆಗೆ ಹೋಗುವ ಮಕ್ಕಳು ಉಳಿದುಕೊಂಡಿದ್ದಾರೆ. ಇವರ ಅಸಹಾಯಕತೆಯನ್ನು ವ್ಯವಸ್ಥೆ ಅರ್ಥ ಮಾಡಿಕೊಂಡಿಲ್ಲ. ಸರ್ಕಾರಿ ಯೋಜನೆಗಳು ಇದ್ದರೂ ಸರಿಯಾಗಿ ನಿರ್ವಹಣೆ ಇಲ್ಲದೆ ಸಮಸ್ಯೆ ಬಗೆಹರಿದಿಲ್ಲ.
ಊರಲ್ಲೇ ಇದ್ದರೆ ಕೆಲಸ ಸಿಗುವುದಿಲ್ಲ, ಸಣ್ಣಪುಟ್ಟ ಕೆಲಸ ಸಿಕ್ಕರೂ ಅದರಿಂದ ಸಾಲ ತೀರಿಸಲು ಆಗುವುದಿಲ್ಲ ಎಂದು ಪಟ್ಟಣ ಅಥವಾ ಅನ್ಯರಾಜ್ಯಗಳ ಇತರ ಪ್ರದೇಶಗಳಿಗೆ ತೆರಳುವ ಈ ಕಾರ್ವಿುಕರ ಬದುಕು ನಿಜಕ್ಕೂ ಶೋಚನೀಯ.
ಕಳೆದ ಒಂದೇ ವಾರದಲ್ಲಿ ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ 25 ಸಾವಿರ ಬಂಜಾರ ಕುಟುಂಬಗಳ ಅಂದಾಜು 1.50 ಲಕ್ಷ ಜನರು ವಿವಿಧೆಡೆ ಗುಳೆ ಹೋಗಿರುವುದು ಸಮಸ್ಯೆಯ ತೀವ್ರತೆಗೆ ಸಾಕ್ಷಿ. ತಾಂಡಾಗಳ ಸ್ಥಿತಿ ದಯನೀಯವಾಗಿದೆ. ಗುಳೆ ಎಂಬುದು ಲಂಬಾಣಿ ಹಾಗೂ ತಳ ಸಮುದಾಯಗಳಿಗೆ ಅಂಟಿರುವ ಶಾಪವಾಗಿದ್ದು, ಗುಳೆ ತಡೆಗಟ್ಟಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ತಳ ಸಮುದಾಯಗಳ ನಾಯಕರ ಆಗ್ರಹವಾಗಿದೆ. ತಾಂಡಾಗಳ ನಿವಾಸಿಗಳಂತೂ ರಾಜಕೀಯ ನಾಯಕರ ಆಶ್ವಾಸನೆಗಳಿಂದ ರೋಸಿ ಹೋಗಿದ್ದು, ಉತ್ತಮ ಕೂಲಿ ದೊರೆಯುವ ಕಾವೇರಿ ಕಣಿವೆ ಪ್ರದೇಶದಲ್ಲಿ ಹರಡಿಕೊಂಡಿದ್ದಾರೆ. ಮಾತ್ರವಲ್ಲ, ಗೋವಾ, ದೂರದ ಮುಂಬೈ, ಹೈದರಾಬಾದ್, ಬೆಂಗಳೂರು, ಮಂಗಳೂರು ಸೇರಿ ಹಲವು ನಗರಗಳಲ್ಲಿ ತಾಂಡಾ ನಿವಾಸಿಗಳು ದುಡಿಯುತ್ತಿರುವುದು, ವರ್ಷಕ್ಕೊಮ್ಮೆ ಊರಿಗೆ ಹೋಗಿ ಹಿರಿಯರನ್ನು ನೋಡಿಕೊಂಡು ಬರುವುದು ರೂಢಿಯಾಗಿಬಿಟ್ಟಿದೆ.
ಮೂಲಸೌಕರ್ಯಗಳೇ ಇಲ್ಲದ ಈ ತಾಂಡಾಗಳಲ್ಲಿ ಉದ್ಯೋಗಸೃಷ್ಟಿಸುವವರು ಯಾರು? ಇತರ ಹಳ್ಳಿಗಳಲ್ಲಿ ಕೂಡ ಪರಿಸ್ಥಿತಿ ಭಿನ್ನವೇನಿಲ್ಲ. ಹಿಂದೆಲ್ಲ ನಮ್ಮ ಹಳ್ಳಿಗಳು ಸ್ವಾವಲಂಬಿಯಾಗಿದ್ದವು. ಅವರಿಗೆ ಬೇಕಾದ್ದನ್ನು ಅಲ್ಲೇ ಬೆಳೆದು, ಮಿಕ್ಕಿದ್ದನ್ನು ಮಾರಾಟ ಮಾಡಿ, ಆರ್ಥಿಕ ಬಲ ಕಂಡುಕೊಳ್ಳುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಹಳ್ಳಿಗಳನ್ನು ಬರೀ ಮತಬ್ಯಾಂಕ್ಗಳಾಗಿ ನೋಡುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಗುಳೆ ಹೋದವರ ಬದುಕು ಅನೇಕ ಬಗೆಯ ಸಂಕಷ್ಟಗಳಿಂದಲೇ ಸುತ್ತುವರಿದಿರುತ್ತದೆ. ದೇಶದ ನಗರ ಪ್ರದೇಶಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಹಾಗೆಯೇ ಗ್ರಾಮೀಣ ಭಾಗಗಳಲ್ಲಿ ಸ್ಮಾರ್ಟ್ ವಿಲೇಜ್ ಯೋಜನೆಗಳನ್ನು ರೂಪಿಸಿ ಜಾರಿಗೆ ತರಬೇಕೆಂಬ ಚಿಂತನೆ ಅನುಷ್ಠಾನಕ್ಕೆ ಬಂದಿಲ್ಲ.
ಹಳ್ಳಿಗಳ ಆರ್ಥಿಕತೆ ಬಲಪಡಿಸಲು, ಅಲ್ಲಿ ಉದ್ಯೋಗಾವಕಾಶ ಸೃಷ್ಟಿಸಲು ರಚನಾತ್ಮಕ ಮತ್ತು ಪರಿಣಾಮಕಾರಿ ಯೋಜನೆ ಹಾಕಿಕೊಳ್ಳದಿದ್ದರೆ ಮುಂದಿನ ದಿನಗಳ ಸ್ಥಿತಿ ಇನ್ನಷ್ಟು ಘೋರವಾಗಬಹುದು. ಹಾಗಾಗುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು, ಹಳ್ಳಿಗಳ ಅಭಿವೃದ್ಧಿಗೆ ಮುಂದಾಗಲಿ ಎಂಬುದೇ ಆಶಯ