Editorial | ಸಂಪಾದಕೀಯ; ಸೂಕ್ತ ನಿರ್ಧಾರ 
ನ್ಯೂಸ್

ಸಂಪಾದಕೀಯ; ಸೂಕ್ತ ನಿರ್ಧಾರ

ಮಣಿಕಂಠ ಪಾ ಹಿರೇಮಠ
ರಾಜ್ಯದ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರಕ್ಕೆ ಒಂದು ಬಾರಿ ವಿನಾಯಿತಿ ಕೊಟ್ಟು ವಿದ್ಯುತ್‌ ಸಂಪರ್ಕಕ್ಕೆ ಅರ್ಜಿ ಸಲ್ಲಿಸಲು 15 ದಿನಗಳ ಅವಕಾಶ ನೀಡಿ ಸರ್ಕಾರ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ. 2026ರ ಮೇ 31ರ ಒಳಗಾಗಿ ಶಾಶ್ವತ ವಿದ್ಯುತ್‌ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವ ಅಥವಾ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆಯದೆ ಕಟ್ಟಡ ನಿರ್ಮಿಸಿರುವ ಹಾಗೂ ಯಾವುದೇ ವಿದ್ಯುತ್‌ ಸಂಪರ್ಕ ಪಡೆಯದೆ ಕಟ್ಟಡ ಪೂರ್ಣಗೊಂಡಿರುವ ಪ್ರಕರಣಗಳಿಗೆ ಮಾತ್ರ ಈ ಆದೇಶ ಅನ್ವಯ ಆಗಲಿದೆ.
ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಇಲ್ಲದೆ ವಿದ್ಯುತ್‌ ಸಂಪರ್ಕಕ್ಕಾಗಿ ಪರದಾಡುತ್ತಿದ್ದ ಕಟ್ಟಡ ಮಾಲೀಕರು ಇದರಿಂದ ನಿರಾಳರಾಗಿದ್ದಾರೆ. 2,400 ಚದರ ಅಡಿವರೆಗಿನ ನಿವೇಶನಗಳಲ್ಲಿ ನಿರ್ಮಿಸಲಾದ ಜಿ+3 (ನೆಲಮಹಡಿ + 3 ಅಂತಸ್ತು) ಅಥವಾ ಸ್ಟಿಲ್ಟ್‌ ಪಾರ್ಕಿಂಗ್‌ + 4 ಮಹಡಿಗಳವರೆಗಿನ ವಸತಿ ಕಟ್ಟಡಗಳಿಗೆ (ಶೇ.20ರಷ್ಟು ಯೋಜನೆ ವ್ಯತ್ಯಾಸದ ಮಿತಿಯೊಂದಿಗೆ) ಹಾಗೂ ಗ್ರಾಮೀಣ ಭಾಗದ ರೈತರ ಮನೆ, ಕೊಟ್ಟಿಗೆಗಳಿಗೆ ಈ ವಿನಾಯಿತಿ ಅನ್ವಯಿಸುತ್ತದೆ. ಅರ್ಹ ಗ್ರಾಹಕರು ಈ ವಿನಾಯಿತಿಯ ಲಾಭ ಪಡೆಯಲು ಸರ್ಕಾರ ನಿಗದಿಪಡಿಸಿರುವ 15 ದಿನಗಳ ಅಲ್ಪಾವಧಿಯೊಳಗೆ (ಜುಲೈ ಮೊದಲ ವಾರದೊಳಗೆ) ಆಯಾ ವಿದ್ಯುತ್‌ ಸರಬರಾಜು ಕಂಪನಿಗಳ ಉಪವಿಭಾಗದ ಕಚೇರಿಗಳಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕಿದೆ.
ಈ ಹಿಂದೆ ಇದ್ದ ಗೊಂದಲಗಳನ್ನು ನಿವಾರಿಸಿ, ಮೇ 31ರೊಳಗೆ ಕಾಮಗಾರಿ ಮುಗಿಸಿ ಇನ್ನು ಅರ್ಜಿ ಸಲ್ಲಿಸದವರಿಗೂ ಜೂನ್‌ 22ರಿಂದ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಜಿಯೋ-ಟ್ಯಾಗ್ ಆಧಾರಿತ ಪರಿಶೀಲನೆ ನಡೆಸಿ ತ್ವರಿತವಾಗಿ ಕಾಯಂ ಸಂಪರ್ಕ ನೀಡಲು ಎಸ್ಕಾಂಗಳಿಗೆ ಸೂಚಿಸಿರುವುದರಿಂದ ವಿಳಂಬ ನೀತಿ ತಪ್ಪುತ್ತದೆ. ಗ್ರಾಮೀಣ ಭಾಗದಲ್ಲಿ ಕೃಷಿ ಪಂಪ್‌ಸೆಟ್‌ಗಳು, ತೋಟದ ಮನೆಗಳು, ದನದ ಕೊಟ್ಟಿಗೆ ಹಾಗೂ ರೇಷ್ಮೆ ಸಾಕಾಣಿಕೆ ಮನೆಗಳಿಗೂ ಒಸಿ ನಿಯಮದಿಂದ ಸಂಪೂರ್ಣ ಮುಕ್ತಿ ನೀಡಿರುವುದರಿಂದ ರೈತಾಪಿ ವರ್ಗಕ್ಕೆ ದೊಡ್ಡ ನೆರವಾಗಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಒಸಿ ಕಡ್ಡಾಯವಾಗಿದ್ದರಿಂದ ಸ್ಥಗಿತಗೊಂಡಿದ್ದ ವಿದ್ಯುತ್‌ ಸಂಪರ್ಕ ಪ್ರಕ್ರಿಯೆಗಳು ಈಗ ಮರುಚಾಲನೆ ಪಡೆದುಕೊಂಡಿವೆ. ಆದರೆ, ನೆಲಮಹಡಿಯಲ್ಲಿ ವಾಣಿಜ್ಯ ಮಳಿಗೆಗಳಿದ್ದು (ಅಂಗಡಿ) ಮೇಲ್ಭಾಗದಲ್ಲಿ ಮನೆ ಹೊಂದಿರುವ ಕಟ್ಟಡಗಳು, ಪಿಜಿಗಳು ಮತ್ತು ಸಂಪೂರ್ಣ ವಾಣಿಜ್ಯ ಸಂಕೀರ್ಣಗಳಿಗೆ ಈ ಆದೇಶದಲ್ಲಿ ಯಾವುದೇ ವಿನಾಯಿತಿ ನೀಡಿಲ್ಲ. ಹಾಗಾಗಿ ಆ ವರ್ಗದ ಮಾಲೀಕರು ಇನ್ನೂ ಗೊಂದಲದಲ್ಲೇ ಉಳಿದಿದ್ದಾರೆ. ಅಲ್ಲದೆ, ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ.) ಇಲ್ಲ ಎಂಬ ಕಾರಣಕ್ಕೆ ಸುಮಾರು ಮೂರೂವರೆ ಲಕ್ಷ ಮನೆಗಳಿಗೆ ಕಾಯಂ ವಿದ್ಯುತ್‌ ಸಂಪರ್ಕ ನಿರಾಕರಿಸಿ, ತಾತ್ಕಾಲಿಕ ಸಂಪರ್ಕದ ಹೆಸರಿನಲ್ಲಿ ದುಪ್ಪಟ್ಟು ಶುಲ್ಕ ವಸೂಲಿ ಮಾಡುತ್ತಿರುವುದು ಬೆಸ್ಕಾಂ ಮತ್ತಿತರ ವಿದ್ಯುತ್‌ ಕಂಪನಿಗಳ ದಬ್ಬಾಳಿಕೆಗೆ ಕೈಗನ್ನಡಿಯಾಗಿದೆ. ಸಾಮಾನ್ಯ ಗ್ರಾಹಕರು ಪ್ರತಿ ಯೂನಿಟ್‌ಗೆ ₹5.80 ಪಾವತಿಸಿದರೆ, ಇವರಿಂದ ₹10.50 ವಸೂಲಿ ಮಾಡಲಾಗುತ್ತಿರುವುದು ತೀರಾ ಅನ್ಯಾಯ. ಮನೆ ನಿರ್ಮಾಣ ಮುಗಿದಿದ್ದರೂ ನಿಯಮಗಳ ಗೊಂದಲದಿಂದಾಗಿ ತಿಂಗಳಿಗೆ ಸಾವಿರಾರು ರೂಪಾಯಿ ಹೆಚ್ಚುವರಿ ಬಿಲ್ ಕಟ್ಟುವುದು ಮಧ್ಯಮ ವರ್ಗದವರ ಬದುಕನ್ನು ದುಸ್ತರಗೊಳಿಸಿದೆ. ಆದ್ದರಿಂದ, ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡ ಸೇರಿ ಎಲ್ಲ ರೀತಿಯ ಕಟ್ಟಡಗಳಿಗೆ ಒಂದು ಬಾರಿಯ ವಿನಾಯಿತಿಯನ್ನು ಅನ್ವಯಗೊಳಿಸುವುದು ಸೂಕ್ತ.