‘ಬೆಂಗಳೂರು ಸೈಬರ್ ವಂಚನೆಗಳ ಹಬ್ ಆಗಿ ಬದಲಾಗುತ್ತಿದ್ದು, ವಿದ್ಯಾವಂತರು ಮತ್ತು ವೃತ್ತಿಪರರೇ ಹೆಚ್ಚಾಗಿ ವಂಚನೆಗೆ ಒಳಗಾಗುತ್ತಿದ್ದಾರೆ’ ಎಂಬ ಕಳವಳಕಾರಿ ಸಂಗತಿಯನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಹೊರಗೆಡವಿದ್ದಾರೆ. ಹಾಗಾಗಿ, ಸೈಬರ್ ಜಗತ್ತಿನಲ್ಲಿ ವ್ಯವಹರಿಸುವಾಗ ಹೆಚ್ಚು ಎಚ್ಚರದಿಂದ ಇರಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ.
ಮಾಹಿತಿ-ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಬೆಂಗಳೂರು ಈಗ ಸೈಬರ್ ಅಪರಾಧಗಳ ತಾಣವಾಗಿ ಬದಲಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯೇ ಹೌದು. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧದ ಸ್ವರೂಪಗಳು ಬದಲಾಗಿದ್ದು, ವ್ಯಾಪ್ತಿಯೂ ಹೆಚ್ಚಿದೆ. ವಂಚಕರಿಂದ ಡಿಜಿಟಲ್ ಅರೆಸ್ಟ್ನ
ಪ್ರಕರಣಗಳು ಹೆಚ್ಚುತ್ತಲೇ ಇವೆ. ಮತ್ತೊಂದೆಡೆ, ಕೆಲಸ ಕೊಡಿಸುವ, ಹೂಡಿಕೆಗೆ ಹೆಚ್ಚು ರಿಟರ್ನ್ಸ್ ನೀಡುವ, ಕಡಿಮೆ ಬಡ್ಡಿಗೆ ಸಾಲ ನೀಡುವ ಆಮಿಷವೊಡ್ಡಿ, ಜನರಿಂದ ಮಾಹಿತಿ ಸಂಗ್ರಹಿಸುತ್ತಿರುವ ದುರುಳರು, ಅವರನ್ನು ಸೈಬರ್ ವಂಚನೆಯ ಜಾಲಕ್ಕೆ ಸುಲಭವಾಗಿ ಸಿಲುಕಿಸುತ್ತಿದ್ದಾರೆ. ಹಿಂದೆ, ದೈಹಿಕ ಅಪರಾಧಗಳು ಪೊಲೀಸರಿಗೆ ಸವಾಲಾಗಿದ್ದವು, ಈಗ ಬೌದ್ಧಿಕ ಅಪರಾಧಗಳು ಹೊಸ ಸವಾಲಾಗಿ ಪರಿಣಮಿಸಿದ್ದು, ಪರಿಹಾರದ ಕ್ರಮಗಳು ಕೂಡ ಪರಿಣಾಮಕಾರಿಯಾಗಿಸಬೇಕಾದ ಅಗತ್ಯವಿದೆ. ಪೊಲೀಸ್ ಇಲಾಖೆ ಸೈಬರ್ ಅಪರಾಧಗಳ ಕುರಿತಂತೆ ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇಂಥ ಅರಿವು ಮೂಡಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದ್ದು, ಬೆಂಗಳೂರು ಮಾತ್ರವಲ್ಲದೆ ದ್ವಿತೀಯ ದರ್ಜೆ ನಗರಗಳಿಗೂ ವಿಸ್ತರಿಸಬೇಕಿದೆ. ಆದರೆ, ಮತ್ತೊಂದೆಡೆ ಸೈಬರ್ ವಂಚಕರು ಹೊಸ ಹೊಸ ದಾರಿಗಳ ಮೂಲಕ ಜನರ ಹಣಕ್ಕೆ ಕನ್ನ ಹಾಕುತ್ತಿದ್ದಾರೆ ಮತ್ತು ಈ ವಂಚಕರು ಹೆಚ್ಚಾಗಿ ವಿದೇಶಗಳಲ್ಲಿ ಕುಳಿತು ಇಂಥ ಕೃತ್ಯಗಳನ್ನು ನಡೆಸುವುದರಿಂದ ಅವರನ್ನು ಪತ್ತೆ ಹಚ್ಚುವುದು ಕಠಿಣವಾಗಿ ಪರಿಣಮಿಸಿದೆ. ಒಂದು ವೇಳೆ ತಂತ್ರಜ್ಞಾನದ ನೆರವಿನಿಂದ ಪತ್ತೆ ಹಚ್ಚಿದರೂ, ಅವರನ್ನು ಭಾರತಕ್ಕೆ ಕರೆತಂದು ಕಾನೂನು ಕ್ರಮಕ್ಕೆ ಒಳಪಡಿಸುವುದು, ಸವಾಲಿನದ್ದಾಗಿದೆ. ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆಯ (ಎನ್ಸಿಆರ್ಬಿ) 2023ರ ವರದಿಯ ಪ್ರಕಾರ, ಸೈಬರ್ ಅಪರಾಧದಲ್ಲಿ ಬೆಂಗಳೂರು ಅತೀ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ನಗರವೆನಿಸಿದ್ದರೆ, ಕರ್ನಾಟಕ ರಾಜ್ಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ 2021ರಲ್ಲಿ 52,974 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದರೆ 2022ರಲ್ಲಿ 65,893 ಕೇಸ್ ದಾಖಲಾಗಿದ್ದು, ಭಾರಿ ಏರಿಕೆ ಕಂಡಿರುವುದಕ್ಕೆ ನಿದರ್ಶನ. ಮಾತ್ರವಲ್ಲ, 2024ರ ಮೊದಲ ನಾಲ್ಕು ತಿಂಗಳಲ್ಲೇ (ಜನವರಿ-ಏಪ್ರಿಲ್) ಸೈಬರ್ ವಂಚನೆಯ 7.40 ಲಕ್ಷ ಪ್ರಕರಣಗಳು ದಾಖಲಾಗಿದ್ದು, ಅಮಾಯಕರು 1,750 ಕೋಟಿ ರೂ. ಕಳೆದುಕೊಂಡಿದ್ದಾರೆ. ಹಾಗಾಗಿ, ಸೈಬರ್ ಜಾಗೃತಿ ಕೂಡ ಹೊಸ ಆಯಾಮಕ್ಕೆ ತೆರೆದುಕೊಂಡು, ಅದನ್ನು ಶಾಲೆ-ಕಾಲೇಜುಗಳಿಗೂ ವಿಸ್ತರಿಸಬೇಕಿದೆ. ಸಾರ್ವಜನಿಕರಲ್ಲಿ ಅರಿವು ಹೆಚ್ಚಿಸುವ ಹಲವು ಉಪಕ್ರಮಗಳಿಗೆ ವೇಗ ನೀಡಬೇಕಿದೆ. ಅದರಲ್ಲೂ, ವಿದ್ಯಾವಂತರೇ ಸೈಬರ್ ಅಪರಾಧಗಳಿಗೆ ಬಲಿಪಶು ಆಗುತ್ತಿದ್ದು, ಪರಿಹಾರದ ನವೀನ ಕ್ರಮಗಳನ್ನೂ ಶೋಧಿಸಬೇಕಿದೆ. ಸೈಬರ್ ಅಪರಾಧಗಳನ್ನು ತಡೆಗಟ್ಟಲು ಪೊಲೀಸರಿಗೂ ತಂತ್ರಜ್ಞಾನ ಆಧಾರಿತ ಗುಣಮಟ್ಟದ ತರಬೇತಿ ನೀಡಬೇಕಿದೆ ಮತ್ತು ತನಿಖೆ ಕೈಗೊಳ್ಳಲು ಪೂರಕವಾಗುವಂತೆ ಪೊಲೀಸ್ ಇಲಾಖೆಯನ್ನು ತಂತ್ರಜ್ಞಾನಸ್ನೇಹಿ ಆಗಿಸಬೇಕಿದೆ.