ಬಹು ಉತ್ಸಾಹ ಮತ್ತು ನಿರೀಕ್ಷೆಗಳೊಂದಿಗೆ ಆರಂಭವಾಗುವ ಸರ್ಕಾರಿ ಯೋಜನೆ, ಕಾರ್ಯಕ್ರಮಗಳು ಸ್ವಲ್ಪ ದಿನಗಳಲ್ಲೇ ಹಳಿ ತಪು್ಪತ್ತವೆ. ಪೂರ್ವ ತಯಾರಿ ಮಾಡಿಕೊಳ್ಳದಿರುವುದು, ಯೋಜನೆ ಜಾರಿಯ ಬಳಿಕ ಅಗತ್ಯ ಮೇಲ್ವಿಚಾರಣೆ ಕೈಗೊಳ್ಳದಿರುವುದು, ಆರಂಭಿಕ ಸಮಸ್ಯೆಗಳನ್ನು ಕೂಡಲೇ ನಿವಾರಿಸದಿರುವುದು, ಅಧಿಕಾರಿಗಳ, ಸಿಬ್ಬಂದಿ ವರ್ಗದ ನಿರ್ಲಕ್ಷ್ಯ ಹೀಗೆ ಹಲವು ಕಾರಣಗಳಿಂದ ಯೋಜನೆಗಳು ದಿಕ್ಕು ತಪು್ಪತ್ತವೆ. ಇದರಿಂದ ನಷ್ಟವಾಗುವುದು ಫಲಾನುಭವಿಗಳಿಗೆ. ಯೋಜನೆಯ ಫಲಾನುಭವಿ ಆಗುವ ಹಂತದಲ್ಲೇ ಹಲವು ಪ್ರಕ್ರಿಯೆ ನಡೆಸಿ, ದಾಖಲಾತಿಗಳನ್ನು ನೀಡಿ, ಇದಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಹಲವು ಬಾರಿ ಅಲೆದು ಜನರು ಹೈರಾಣಾಗಿರುತ್ತಾರೆ. ಇನ್ನು ಯೋಜನೆ ಜಾರಿಯಲ್ಲಿನ ಲೋಪ ಅಥವಾ ವಿಳಂಬವು ಗಾಯಕ್ಕೆ ಉಪು್ಪ ಸವರಿದಂತೆ. ಯೋಜನೆ ಘೋಷಿಸುವಾಗಿನ ಉತ್ಸಾಹ ಮತ್ತು ಬದ್ಧತೆ ಜಾರಿ ಮಾಡುವಾಗ ಹಾಗೂ ಆ ನಂತರದ ದಿನಗಳಲ್ಲಿಯೂ ಮುಂದುವರಿಯಬೇಕು. ಇಲ್ಲವಾದರೆ, ಅಪಸವ್ಯಗಳೇ ಮೇಲುಗೈ ಸಾಧಿಸಿ, ಜನಹಿತಾಸಕ್ತಿಯ ಆಶಯ ಗೌಣವಾಗಿ ಬಿಡುತ್ತದೆ. ಇದಕ್ಕೊಂದು ತಾಜಾ ನಿದರ್ಶನ ಅನ್ನಭಾಗ್ಯ ಯೋಜನೆ. ಬಿಪಿಎಲ್ ಕುಟುಂಬಗಳಿಗೆ ಪಡಿತರ ವಿತರಣೆ ವ್ಯವಸ್ಥೆಯಡಿ ಹತ್ತು ಕೆಜಿ ಅಕ್ಕಿ ನೀಡುವುದಾಗಿ ವಿಧಾನಸಭೆ ಚುನಾವಣೆ ಸಮಯದಲ್ಲಿ ಭರವಸೆ ನೀಡಲಾಗಿತ್ತು. ಆದರೆ, ರಾಜ್ಯ ಸರ್ಕಾರ ರಚನೆಯಾದ ಬಳಿಕ ಅಕ್ಕಿಯ ಕೊರತೆ ಇರುವುದು ಗಮನಕ್ಕೆ ಬಂತು. ಕೇಂದ್ರ ಸರ್ಕಾರವೇ ಅಕ್ಕಿ ನೀಡುತ್ತಿಲ್ಲ ಎಂಬ ಆರೋಪ ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿತು. ಆ ಬಳಿಕ ಅಕ್ಕಿ ಬದಲು ಹಣ ನೀಡುವ ಪದ್ಧತಿ ಜಾರಿಗೆ ಬಂತು.
ಪ್ರಸ್ತುತ ಅನ್ನಭಾಗ್ಯ ಯೋಜನೆಗೆ ಒಂದು ವರ್ಷವಾಗಿದೆ. ಆದರೆ, ಕೆಲವು ತಿಂಗಳುಗಳಿಂದ ಹಣವನ್ನು ಫಲಾನುಭವಿಗಳಿಗೆ ವರ್ಗಾವಣೆ ಮಾಡಲು ಸಾಕಷ್ಟು ತಾಂತ್ರಿಕ ಸಮಸ್ಯೆಗಳು ತಲೆದೋರಿವೆ. ಅವುಗಳನ್ನು ನಿವಾರಿಸಿ ಫಲಾನುಭವಿಗಳಿಗೆ ಹಣ ತಲುಪುವಂತೆ ಮಾಡಬೇಕಾದದ್ದು ರಾಜ್ಯ ಸರ್ಕಾರದ ಹೊಣೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಬಿಪಿಎಲ್, ಎಪಿಎಲ್ ಸೇರಿ ಒಟ್ಟು 1.13 ಕೋಟಿ ಕಾರ್ಡ್ಗಳ ಪೈಕಿ 96 ಲಕ್ಷ ಕಾರ್ಡ್ಗಳಿಗೆ 660 ಕೋಟಿ ರೂ. ಜಮೆ ಮಾಡಲಾಗುತ್ತದೆ. ಅಂತ್ಯೋದಯ ಕಾರ್ಡ್ನಲ್ಲಿ ನಾಲ್ವರು ಸದಸ್ಯರಿದ್ದರೆ ಕುಟುಂಬಕ್ಕೆ 170 ರೂ., ಐವರಿದ್ದರೆ 510 ರೂ., ಆರು ಸದಸ್ಯರಿದ್ದರೆ 850 ರೂ. ಜಮೆ ಮಾಡಲಾಗುತ್ತಿದೆ. ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಅಂತ್ಯೋದಯ ಕಾರ್ಡ್ದಾರರು ಹಣದಿಂದ ವಂಚಿತವಾಗಿರುವುದು ಯೋಜನೆಯ ಹಿನ್ನಡೆ.
ಡಿಬಿಟಿ ಮೂಲಕ ಕಾರ್ಡ್ದಾರರ ಖಾತೆಗೆ ಹಣ ವರ್ಗಾಯಿಸಲು ದೀರ್ಘ ಪ್ರಕ್ರಿಯೆ ನಡೆಯುತ್ತಿತ್ತು. ಇದನ್ನು ತಪ್ಪಿಸಲು ಆಹಾರ ಇಲಾಖೆ ಹೊಸದಾಗಿ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದೆ. ಆದರೆ, ಈ ಸಾಫ್ಟ್ವೇರ್ನಲ್ಲಿ ಪದೇಪದೆ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಫಲಾನುಭವಿಗಳು ಹಣಕ್ಕಾಗಿ ಕಾಯುವಂತಾಗಿದೆ. ಪ್ರತಿ ಬಾರಿ ಸಮಸ್ಯೆ ಸೃಷ್ಟಿಯಾದ ಬಳಿಕ ತರಾತುರಿಯಲ್ಲಿ ಪರಿಹಾರದ ದಾರಿ ಹುಡುಕುವ ಬದಲು, ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ ಮೊದಲು ತಾಂತ್ರಿಕ ಸಮಸ್ಯೆ ನಿವಾರಿಸಲು ಅಧಿಕಾರಿವರ್ಗ ಇಚ್ಛಾಶಕ್ತಿ ಪ್ರದರ್ಶಿಸಬೇಕು.