ನ್ಯೂಸ್

ಸಂಪಾದಕೀಯ: ವಿವೇಚನೆಯಿಂದ ವರ್ತಿಸಿ

ಬಾಬುಪ್ರಸಾದ್​ ಮೋಡಿಸ್​

ಆತ್ಮಹತ್ಯೆಗೆ ಪ್ರಚೋದನೆ ಸಂಬಂಧದ ಕಾನೂನು ದುರ್ಬಳಕೆ ಆಗದಂತೆ ಎಚ್ಚರ ವಹಿಸಬೇಕೆಂದು ಕೆಳ ನ್ಯಾಯಾಲಯಗಳಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ದೇಶದ ಸವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಈ ರೀತಿ ಆದೇಶಿಸುತ್ತಿರುವುದು ಇದು ಎರಡನೇ ಬಾರಿ. ಕಳೆದ ಡಿಸೆಂಬರ್​ನಲ್ಲಿಯೂ ಸುಪ್ರೀಂಕೋರ್ಟ್ ಇಂಥದೇ ಎಚ್ಚರಿಕೆಯನ್ನು ಕೊಟ್ಟಿತ್ತು. ಇದು ಈ ವಿಷಯವನ್ನು ಸುಪ್ರೀಂ ಕೋರ್ಟ್ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ವ್ಯಕ್ತಿಯೊಬ್ಬ ಕಚೇರಿಯಲ್ಲಿನ ಒತ್ತಡದಿಂದಾಗಿ ಅಥವಾ ಕೌಟುಂಬಿಕ ವ್ಯಾಜ್ಯದ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡಾಗ ಆತನ ಸಂಬಂಧಿಗಳು, ಸ್ನೇಹಿತರು, ಪರಿಚಿತರು ಆಘಾತದಲ್ಲಿರುತ್ತಾರೆ. ಆದರೆ ಪೊಲೀಸ್ ಅಧಿಕಾರಿಗಳು ಶಂಕೆಯ ಆಧಾರದ ಮೇಲೆ ಅಥವಾ ಆರೋಪಗಳನ್ನು ಆಧರಿಸಿ, ಅವರನ್ನೇ ಆರೋಪಿಗಳನ್ನಾಗಿ ಹೆಸರಿಸುತ್ತಾರೆ. ತಮಗಿರುವ ಕೆಲಸದ ಒತ್ತಡದಲ್ಲಿ ಯಾರ್ಯಾರದೋ ಮೇಲೆ ಕೇಸು ದಾಖಲಿಸಿ ಕೋರ್ಟಿಗೆ ಕಳಿಸಿ ಕೈತೊಳೆದುಕೊಳ್ಳುತ್ತಾರೆ. ಮುಂದಾಲೋಚನೆ, ಮುನ್ನೆಚ್ಚರಿಕೆ, ಪೂರ್ವ ತನಿಖೆ ಮುಂತಾದವುಗಳೇನೂ ಇದರಲ್ಲಿ ಕಾಣಿಸುವುದಿಲ್ಲ. ಇದು ಕಾನೂನಿನ ಆಶಯಕ್ಕೆ ವಿರುದ್ಧವಾಗಿದ್ದು, ಪ್ರಕರಣ ದಾಖಲಿಸುವಾಗ ಎಚ್ಚರ ವಹಿಸಬೇಕು.

ಭಾರತೀಯ ದಂಡ ಸಂಹಿತೆಯ 306ನೇ ವಿಧಿ ಏನು ಹೇಳುತ್ತದೆ, ಅದರ ಅರ್ಥ ಏನು ಎಂಬುದನ್ನು ತಿಳಿದುಕೊಳ್ಳದೇ ಉದಾಸೀನದಿಂದ ಪ್ರಕರಣ ದಾಖಲಿಸುವುದು ಸರಿಯಲ್ಲ. ಸುಮ್ಮನೆ ಯಾಂತ್ರಿಕವಾಗಿ ಆರೋಪ ದಾಖಲಿಸಿ ‘ರಕ್ಷಣಾತ್ಮಕ ಆಟ’ ಆಡುವುದು ಅಧಿಕಾರಿಗಳಿಗೆ ಶೋಭೆ ತರುವುದಿಲ್ಲ. ಈ ಬಗ್ಗೆ ತನಿಖಾಧಿಕಾರಿಗಳಲ್ಲಿ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಬ್ಯಾಂಕ್ ಸಾಲ ತೀರಿಸಲಾಗದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದರೆಂಬ ಆರೋಪದ ಮೇಲೆ ಬ್ಯಾಂಕ್ ಅಧಿಕಾರಿಯ ಮೇಲೆ ಪ್ರಕರಣ ದಾಖಲಾಗುತ್ತದೆ. ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಮೇಲಿನ ನಿರ್ದೇಶನಗಳನ್ನು ನೀಡಿದೆ. ಅಲ್ಲದೆ, ಆ ಬ್ಯಾಂಕ್ ಅಧಿಕಾರಿಯನ್ನು ಖುಲಾಸೆ ಮಾಡಿದೆ. ಈ ರೀತಿಯ ಪ್ರಕರಣ ಇದೊಂದೇ ಅಲ್ಲ. ನೌಕರನೊಬ್ಬ ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಾಗ, ಅದಕ್ಕೆ ಪ್ರಚೋದನೆ ನೀಡಿದರೆಂದು ಆತನ ಮೇಲಧಿಕಾರಿಗಳನ್ನು ಆರೋಪಕ್ಕೆ ಗುರಿ ಮಾಡಿದ ಎಷ್ಟೋ ಉದಾಹರಣೆಗಳಿವೆ.

ಇದೇ ಕಾರಣಕ್ಕೆ ಸುಪ್ರೀಂ ಕೋರ್ಟ್, ‘ವ್ಯಕ್ತಿಯೊಬ್ಬರ ಸಾವಿನ ಸಮಯದಲ್ಲಿ ಆತನ ಕುಟುಂಬದವರು ಯಾರಾದರೂ ಒಬ್ಬರ ವಿರುದ್ಧ ದೂರುವುದು ಸಹಜ. ಮೃತನ ದುಃಖತಪ್ತ ಕುಟುಂಬ ಸದಸ್ಯರ ಆ ಸಮಯದ ಭಾವನೆಗಳನ್ನೇ ಗಂಭೀರವಾಗಿ ಪರಿಗಣಿಸಿ ಯಾರದೋ ವಿರುದ್ಧ ಪ್ರಕರಣ ದಾಖಲಿಸಬಾರದು. ಆತ್ಮಹತ್ಯೆಗೆ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಚೋದನೆ ನೀಡಿರುವ ಬಗ್ಗೆ ಏನಾದರೂ ಸಾಕ್ಷ್ಯಾಧಾರ ಇರಬೇಕು’ ಎಂದು ಸ್ಪಷ್ಟಪಡಿಸಿದೆ.

ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಗಳಲ್ಲಿ ಆರೋಪ ಸಾಬೀತಾದ ಮತ್ತು ಶಿಕ್ಷೆಯಾದ ಉದಾಹರಣೆಗಳು ಈಗಾಗಲೇ ತುಂಬ ಕಡಿಮೆ ಇವೆ. ಆರೋಪ ದಾಖಲಿಸುವಾಗ ಸರಿಯಾದ ಪ್ರಕ್ರಿಯೆ ಪಾಲನೆ ಆಗಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಹಾಗಾಗಿ, ಸುಪ್ರೀಂ ಕೋರ್ಟ್​ನ ಈ ಅಭಿಪ್ರಾಯಗಳನ್ನು ಇನ್ನು ಮುಂದೆ ಇಂತಹ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳು ಮಾರ್ಗಸೂಚಿಯಂತೆ ಪರಿಗಣಿಸಬೇಕಾಗಿದೆ.