ಬೆಳಗಾವಿಯಲ್ಲಿ ಕಳೆದ ಹತ್ತು ದಿನಗಳಿಂದ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನವು ಮೊದಲೇ ನಿಗದಿಯಾಗಿದ್ದಂತೆ ಶುಕ್ರವಾರ ಸಮಾಪನಗೊಂಡಿದೆ. ಈ ಅಲ್ಪ ಅವಧಿಯಲ್ಲಿ ಒಟ್ಟು 9 ಅಧಿಸೂಚನೆಗಳು, 3 ಅಧ್ಯಾದೇಶಗಳು, 61 ವಾರ್ಷಿಕ ವರದಿಗಳು, 105 ಲೆಕ್ಕ ಪರಿಶೋಧನಾ ವರದಿಗಳು ಹಾಗೂ 1 ಲೆಕ್ಕ ತಪಾಸಣಾ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ನಿಯಮ 69ರಡಿ 5 ಮಹತ್ವದ ವಿಷಯಗಳನ್ನು ರ್ಚಚಿಸಲಾಗಿದೆ. ಶಾಸಕರು ತಮ್ಮ ಕ್ಷೇತ್ರಗಳ ಸಮಸ್ಯೆಗಳು ಮತ್ತು ಸಾರ್ವಜನಿಕ ತುರ್ತು ವಿಷಯಗಳಿಗೆ ಸಂಬಂಧಿಸಿದಂತೆ ಕೇಳಿದ ಸುಮಾರು 2 ಸಾವಿರ ಪ್ರಶ್ನೆಗಳಿಗೆ ಉತ್ತರ ದೊರಕಿದೆ. ಶೂನ್ಯವೇಳೆಯಲ್ಲೂ ಸುಮಾರು 30 ವಿಷಯಗಳ ಕುರಿತು ಪ್ರಸ್ತಾಪಿಸಲು ಸದಸ್ಯರಿಗೆ ಅವಕಾಶ ದೊರೆತಿದೆ.
ಉತ್ತರ ಕರ್ನಾಟಕದ ಪ್ರಮುಖ ಸ್ಥಳಗಳಲ್ಲಿ ಒಂದಾದ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನವನ್ನು ನಡೆಸುವುದರ ಉದ್ದೇಶವೇ ಆ ಭಾಗದ ಜ್ವಲಂತ ಸಮಸ್ಯೆಗಳ ಕುರಿತು ವಿವರವಾದ ಚರ್ಚೆ ನಡೆಸುವುದು. ಈ ಸಲದ ಅಧಿವೇಶನವು ಆರಂಭದಲ್ಲಿ ಬೇರೆ ಬೇರೆ ವಿಷಯಗಳನ್ನು ಚರ್ಚೆಗೆ ಎತ್ತಿಕೊಂಡರೂ ಕೊನೆಯ 2-3 ದಿನಗಳ ಕಾಲ ಆ ಭಾಗದ ವಿಷಯಗಳನ್ನೇ ಚರ್ಚೆಗೆ ಪರಿಗಣಿಸಿದ್ದು ಗಮನಿಸಬೇಕಾದ ವಿಷಯ. ಆ ದೃಷ್ಟಿಯಿಂದ ನೋಡಿದರೆ ಅಲ್ಲಿನ ಜನರ ಆಶೋತ್ತರಗಳಿಗೆ ಈ ಅಧಿವೇಶನ ತಕ್ಕ ಮಟ್ಟಿಗೆ ಸ್ಪಂದನೆ ನೀಡಿದೆ ಎಂದೇ ಹೇಳಬಹುದು.
ಆದರೆ, ಉತ್ತರ ಕರ್ನಾಟಕದ ವಿಷಯಗಳ ಬಗ್ಗೆ ಮೊದಲ ವಾರದಲ್ಲಿಯೇ, ಅಂದರೆ ಮೊದಲ ಆದ್ಯತೆಯಾಗಿ ಪರಿಗಣಿಸಿ, ಚರ್ಚೆ ನಡೆಸುವ ಉದ್ದೇಶ ಈ ಬಾರಿಯೂ ಈಡೇರಲಿಲ್ಲ. ಕೊನೆಯಲ್ಲಿ ನಡೆದ ಚರ್ಚೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ 45 ಜನ ಶಾಸಕರು ಭಾಗವಹಿಸಿದ್ದರು ಎಂಬುದು ಸಮಾಧಾನದ ಸಂಗತಿ. ಅವರೆಲ್ಲರ ಬೇಡಿಕೆಗಳಿಗೆ ಶುಕ್ರವಾರ ಸ್ಪಂದಿಸಿ ಭಾಷಣ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ಸಹಕಾರ ಸಂಸ್ಥೆಗಳಲ್ಲಿ ರೈತರು ಹೊಂದಿರುವ ಮಧ್ಯಮಾವಧಿ, ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ.
ಪ್ರಾದೇಶಿಕ ಅಸಮತೋಲನ ಕುರಿತ ಡಾ. ಡಿ.ಎಂ. ನಂಜುಂಡಪ್ಪ ವರದಿಯ ಸಮಗ್ರ ಅವಲೋಕನಕ್ಕೆ ಉನ್ನತ ಮಟ್ಟದ ಸಮಿತಿ ರಚಿಸುವುದಾಗಿ ಹೇಳಿದ್ದಾರೆ. ಬೆಳಗಾವಿಯಲ್ಲಿ 3 ಸಾವಿರ ಎಕರೆಯಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆ, ವಿಜಯಪುರದಲ್ಲಿ ಉತ್ಪಾದನಾ ಕ್ಲಸ್ಟರ್, ರಾಯಚೂರಿನಲ್ಲಿ ಹತ್ತಿ ಕೈಗಾರಿಕೆ, ರಾಯಚೂರು ಮತ್ತು ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಮುಂತಾದವು ಕೂಡ ಮುಖ್ಯಮಂತ್ರಿಗಳ ಭರವಸೆಗಳಲ್ಲಿ ಸೇರಿವೆ. ಇವೆಲ್ಲವೂ ಕೇವಲ ಭರವಸೆಗಳಾಗಿ ಉಳಿಯದೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲೇ ಕಾರ್ಯರೂಪಕ್ಕೆ ಬರುತ್ತವೆಯೇ ಎಂಬುದನ್ನು ಕಾದುನೋಡಬೇಕಿದೆ. ಇವುಗಳ ಅನುಷ್ಠಾನಕ್ಕೆ ಕಾಲಮಿತಿಯ ಯೋಜನೆ ಹಾಕಿಕೊಂಡು, ಸಮರೋಪಾದಿಯಲ್ಲಿ ಭರವಸೆ ಈಡೇರಿಸಲು ಸರ್ಕಾರ ಸನ್ನದ್ಧವಾಗಬೇಕೆಂಬುದು ಆ ಭಾಗದ ಜನರ ಆಶಯವಾಗಿದೆ.