ಕರೊನಾ ಸೋಂಕಿನ ಹಾವಳಿಯ ಮಧ್ಯೆ ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬೇಕೋ, ಬೇಡವೋ ಎಂಬ ಬಗ್ಗೆ ವಿಸõತವಾದ ಚರ್ಚೆ ನಡೆದು, ಪರ-ವಿರೋಧ ಅಭಿಪ್ರಾಯಗಳೂ ಬಂದು, ಕಡೆಗೂ ಇಂದಿನಿಂದ (ಗುರುವಾರ) ಪರೀಕ್ಷೆ ನಡೆಯುತ್ತಿದೆ. ಹಲವು ರಾಜ್ಯಗಳು 10ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿವೆಯಾದರೂ, ಎಸ್ಸೆಸ್ಸೆಲ್ಸಿ ಶೈಕ್ಷಣಿಕ ಜೀವನದ ಮುಖ್ಯ ಘಟ್ಟ ಆಗಿರುವುದರಿಂದ ಪರೀಕ್ಷೆ ನಡೆಸಲೇ ಬೇಕು ಎಂಬ ತೀರ್ವನವನ್ನು ರಾಜ್ಯ ಸರ್ಕಾರ ಕೈಗೊಂಡಿತು. ಅಷ್ಟೇ ಅಲ್ಲ, ಸುಪ್ರೀಂ ಕೋರ್ಟ್ ಕೂಡ ಪರೀಕ್ಷೆ ನಡೆಸಲು ಹಸಿರು ನಿಶಾನೆ ತೋರಿತು. ವಿದ್ಯಾರ್ಥಿಗಳ ಆಶಯ, ಪಾಲಕರ ವಿಶ್ವಾಸ, ಶಿಕ್ಷಕರ-ಶಿಕ್ಷಣ ತಜ್ಞರ ಅಭಿಪ್ರಾಯದ ಮೇರೆಗೆ ಪರೀಕ್ಷೆ ನಡೆಸಲಾಗುತ್ತಿದೆ. ಈ ಬಾರಿ 8,48,203 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. 2,879 ಪರೀಕ್ಷಾ ಕೇಂದ್ರಗಳ ಜತೆಗೆ 330 ಹೆಚ್ಚುವರಿ ಕೇಂದ್ರಗಳನ್ನು ತೆರೆಯಲಾಗಿದೆ. 236 ಹೆಲ್ಪ್ ಡೆಸ್ಕ್ ತೆರೆಯಲಾಗಿದ್ದು, 7115 ಥರ್ಮಲ್ ಸ್ಕಾ್ಯನರ್ಗಳನ್ನು ಒದಗಿಸಲಾಗಿದೆ. ಅಲ್ಲದೆ, 6418 ಜನರು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಜುಲೈ 4ರವರೆಗೆ ಪರೀಕ್ಷೆಗಳು ನಡೆಯಲಿರುವುದರಿಂದ ಎಲ್ಲ ಬಗೆಯ ಪೂರಕ ಸಿದ್ಧತೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಜ್ ಮಾಡಿ ಶುಚಿಗೊಳಿಸಲಾಗಿದ್ದು, ವೈಯಕ್ತಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲೂ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ. ಹಲವೆಡೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಳೆಯಿಂದ ಊರಿಗೆ ತೆರಳಲು ಸಮಸ್ಯೆಯಾದರೆ ವಸತಿ ವ್ಯವಸ್ಥೆಯನ್ನೂ ನಿಗದಿತ ಹಾಸ್ಟೇಲ್ಗಳಲ್ಲಿ ಮಾಡಲಾಗಿದೆ. ಶಿಕ್ಷಣ ಸಚಿವ ಸುರೇಶಕುಮಾರ್ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಡಿಡಿಪಿಐ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಗೊಂದಲವಿಲ್ಲದಂತೆ ಪರೀಕ್ಷೆ ನಡೆಸಲು ಎಲ್ಲ ಅವಶ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಪಿಯು ಇಂಗ್ಲಿಷ್ ಪರೀಕ್ಷೆಯ ಯಶಸ್ವಿ ನಿರ್ವಹಣೆ ಸರ್ಕಾರದ ವಿಶ್ವಾಸ ಹೆಚ್ಚಿಸಿದೆ. ಆದರೆ, ಕಳೆದೊಂದು ವಾರದಲ್ಲಿ ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪರೀಕ್ಷೆ ಮುಂದೂಡಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಮುನ್ನೆಚ್ಚರಿಕಾ ಕ್ರಮಗಳು ಮತ್ತು ಸುರಕ್ಷಿತ ವಿಧಾನಗಳ ಅಳವಡಿಕೆಯ ನಂತರ ಪರೀಕ್ಷೆ ನಡೆಸಲು ಮುಂದಾಗಿರುವುದರಿಂದ ಯಾವುದೇ ಸಮಸ್ಯೆ ಸೃಷ್ಟಿ ಆಗದು ಎಂಬ ವಿಶ್ವಾಸ ಸರ್ಕಾರದ್ದು.
ಈ ಸನ್ನಿವೇಶದಲ್ಲಿ ಪಾಲಕರ ಮೇಲೂ ಮಹತ್ವದ ಹೊಣೆಗಾರಿಕೆ ಇದೆ. ಮಕ್ಕಳು ಆತಂಕ, ಉದ್ವೇಗ, ಒತ್ತಡಕ್ಕೆ ಒಳಗಾಗದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವಂತೆ ಅವರಲ್ಲಿ ಸ್ಪೂರ್ತಿ ತುಂಬಬೇಕಿದೆ. ಬದಲಾಗಿ, ಯಾವುದೋ ವದಂತಿಗಳನ್ನು, ಭಯವನ್ನು ಅವರಲ್ಲಿ ಬಿತ್ತುವುದು ಬೇಡ. ಈ ಪರೀಕ್ಷೆ ಸರ್ಕಾರದ್ದಷ್ಟೇ ಅಲ್ಲ ಮಕ್ಕಳ ವಿಶ್ವಾಸವನ್ನೂ ಹೆಚ್ಚಿಸಲಿದೆ. ಅತಿಯಾದ ಭಯವೇ ಅರ್ಧ ಸೋಲಿಗೆ ಕಾರಣ ಎನ್ನಲಾಗುತ್ತದೆ. ವಿದ್ಯಾರ್ಥಿಗಳು ಎದೆಗುಂದದೆ ಖುಷಿಖುಷಿಯಾಗಿ ಪರೀಕ್ಷೆ ಬರೆಯಲಿ. ಸ್ವಲ್ಪ ವಿಳಂಬವಾಗಿ ಪರೀಕ್ಷೆ ನಡೆಯುತ್ತಿದೆ ಅಷ್ಟೇ. ಇದರಿಂದ ಮುಂದಿನ ಶೈಕ್ಷಣಿಕ ಹಾದಿಗೆ ಯಾವುದೇ ತೊಡಕು ಆಗುವುದಿಲ್ಲ. ಎಸ್ಸೆಸ್ಸೆಲ್ಲಿ ವಿದ್ಯಾರ್ಥಿಗಳಿಗೆ ಶುಭವಾಗಲಿ, ಗೆಲುವಿನ ಮೆಟ್ಟಿಲು ಹತ್ತಿರವಾಗಲಿ.