ಗುರುವಾರ ರಾತ್ರಿ ಶಿವಮೊಗ್ಗದ ಹುಣಸೋಡಿ ಬಳಿ ಕಲ್ಲು ಗಣಿಯಲ್ಲಿ ಸಂಭವಿಸಿದ ಭೀಕರ ಜಿಲೆಟಿನ್ ಸ್ಪೋಟಕ್ಕೆ ರಾಜ್ಯವೇ ಬೆಚ್ಚಿ ಬಿದ್ದಿದೆ. ಘಟನೆಯಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಸ್ಪೋಟದ ಭೀಕರತೆಗೆ 100 ಕಿ.ಮೀ.ವರೆಗೆ ಭೂಮಿ ಕಂಪಿಸಿದೆ. ಹಲವು ಕಿ.ಮೀ.ವರೆಗಿನ ರಸ್ತೆ ಕಿತ್ತುಹೋಗಿದೆ. ಈ ಸ್ಪೋಟಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ಸ್ಪಷ್ಟಗೊಳ್ಳಬೇಕಿದೆಯಾದರೂ, ಈ ಘಟನೆ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಕರಾಳತೆಯನ್ನೂ ಹೊರಗೆಡವಿದೆ. ನಿಯಮಗಳನ್ನು ಉಲ್ಲಂಘಿಸುತ್ತಿರುವ ಕಲ್ಲು ಗಣಿಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಕಳವಳಕಾರಿ. ಈ ಸಮಸ್ಯೆ ಹೊಸದೇನಲ್ಲ. ಪರಿಸರ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಆಗಾಗ ಈ ಅಪಾಯದ ವಿರುದ್ಧ ದನಿ ಎತ್ತುತ್ತಲೇ ಬಂದಿದ್ದಾರೆ. ಆದರೂ, ಅಕ್ರಮ ಗಣಿಗಾರಿಕೆಗೆ ಲಗಾಮು ಬಿದ್ದಿಲ್ಲ.
ಕಳೆದ 5 ವರ್ಷಗಳಲ್ಲಿ 2,452 ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಗಳು ಹಾಗೂ 1,126 ಎಫ್ಐಆರ್ ದಾಖಲಾಗಿವೆ. ಅಕ್ರಮವಾಗಿ ಕಲ್ಲು ಸಾಗಣೆ ಮಾಡುತ್ತಿದ್ದ ಪ್ರಕರಣದಲ್ಲಿ 7,938 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ, ಅನಧಿಕೃತ ಕಲ್ಲು ದಾಸ್ತಾನು ಸಂಬಂಧ 596 ಪ್ರಕರಣ ದಾಖಲಾಗಿ, 9 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ಅರಣ್ಯ ಸಂರಕ್ಷಣೆ ಕಾಯ್ದೆಯನ್ನು ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಪತ್ತೆಯಾದರೆ 2 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ. ವರೆಗೆ ದಂಡ ಹಾಕುವ ನಿಯಮವಿದೆ. ಆದರೆ, ಈ ಸಂಬಂಧ ಇಲಾಖೆಯಲ್ಲಿ ಪ್ರಬಲ ಕಾನೂನಿನ ಅಸ್ತ್ರ ಇಲ್ಲದಿರುವುದು ಪ್ರಮುಖ ತೊಡಕಾಗಿ ಪರಿಣಮಿಸಿದೆ. ಒಂದಿಷ್ಟು ದಂಡ ಕಟ್ಟುವ ಕಲ್ಲು ಕ್ವಾರಿ ಮಾಲೀಕರು ಮತ್ತೆ ಗಣಿಗಾರಿಕೆಯಲ್ಲಿ ತೊಡಗುತ್ತಿದ್ದು, ಶಿಕ್ಷೆಯ ಭಯ ಇಲ್ಲದಂತಾಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೊಪ್ಪಳ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಚಾಮರಾಜನಗರ, ದಕ್ಷಿಣ ಕನ್ನಡ ಸೇರಿ ರಾಜ್ಯದ ಇನ್ನಿತರ ಜಿಲ್ಲೆಗಳಲ್ಲಿ ಹೆಚ್ಚು ಅಕ್ರಮ ಕಲ್ಲು ಗಣಿಗಾರಿಕೆಗಳು ನಡೆಯುತ್ತಿದ್ದು, ಈ ಪಿಡುಗಿನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಗಣಿಗಳಲ್ಲಿ ಅಪಾರ ಪ್ರಮಾಣದ ಜಿಲೆಟಿನ್ ಸಂಗ್ರಹಗೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಗಣಿ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳ ಜನರು ಪ್ರಾಣಭೀತಿಯಲ್ಲೇ ಬದುಕುವಂತಾಗಿದೆ. ಮೂಲಗಳ ಪ್ರಕಾರ, ಶಿವಮೊಗ್ಗ ಜಿಲ್ಲೆಯಲ್ಲಿ 88 ಗಣಿ ಗುತ್ತಿಗೆಗಳಿಗೆ ಅನುಮತಿ ನೀಡಲಾಗಿದೆ. ಆದರೆ, ಸಾವಿರಕ್ಕೂ ಅಧಿಕ ಕಲ್ಲು ಗಣಿಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿ. ನಿಷೇಧಿತ ಸ್ಪೋಟಕಗಳ ಪೂರೈಕೆಯನ್ನು ತಡೆಯಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.
ಅಕ್ರಮ ಗಣಿಗಾರಿಕೆಗೆ ರಾಜಕಾರಣಿಗಳ ಕೃಪಕಟಾಕ್ಷವಿರುತ್ತದೆ ಎಂಬ ಆರೋಪಗಳೂ ಇವೆ. ಆದರೆ, ಜನರ ಜೀವಕ್ಕೆ ಸಂಚಕಾರ ತರುತ್ತಿರುವ, ಪರಿಸರಕ್ಕೆ, ಜೀವವೈವಿಧ್ಯಕ್ಕೆ ಹಾನಿ ಎಸಗುತ್ತಿರುವ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಪ್ರಭುತ್ವ ಪ್ರಬಲ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಹುಣಸೋಡಿಯಲ್ಲಿ ನಡೆದಂಥ ದುರಂತ ಭವಿಷ್ಯದಲ್ಲಿ ಮತ್ತೆಂದೂ ಸಂಭವಿಸದಿರಲಿ. ಕಲ್ಲು ಗಣಿಗಳಲ್ಲಿ ಮತ್ತು ಇತರ ಗಣಿಗಾರಿಕೆ ಪ್ರದೇಶಗಳಲ್ಲಿ ಸುರಕ್ಷತಾ ನಿಯಮಗಳು ಪರಿಣಾಮಕಾರಿಯಾಗಿ ಪಾಲಿಸುವಂತೆ ಆಗಬೇಕು. ಈ ನಿಟ್ಟಿನಲ್ಲಿ ಸಂಬಂಧಿತ ನಿಯಮಗಳು ಇನ್ನಷ್ಟು ಬಿಗಿಯಾಗಬೇಕು.