ಕರೊನಾ ತಂದೊಡ್ಡಿದ ಬಿಕ್ಕಟ್ಟಿನಿಂದ ಆರ್ಥಿಕತೆಗೆ ಬಲವಾದ ಪೆಟ್ಟು ಬಿದ್ದಿದ್ದು ಗೊತ್ತಿರುವ ಸಂಗತಿಯೇ. ಈ ನಷ್ಟದಿಂದ ಹೊರಬಂದು, ಆರ್ಥಿಕತೆ ಚೇತರಿಸಿಕೊಳ್ಳಲು ದೀರ್ಘ ಸಮಯವೇ ಬೇಕಾಗುತ್ತದೆ ಎಂದು ಆರ್ಥಿಕ ತಜ್ಞರೇ ಅಂದಾಜಿಸಿದ್ದರು. ಆದರೆ, ಲಾಕ್ಡೌನ್ ಅಂತ್ಯಗೊಂಡ ಬಳಿಕ ಬಹುತೇಕ ಕಡೆ ಆರ್ಥಿಕ ಚಟುವಟಿಕೆಗಳು ವೇಗ ಪಡೆದಿರುವುದರಿಂದ ಅಲ್ಪಾವಧಿಯಲ್ಲೇ ಭಾರತದ ಆರ್ಥಿಕತೆ ಏರುಗತಿಯಲ್ಲಿ ಸಾಗುತ್ತಿದೆ. ಈ ಫೆಬ್ರವರಿ ತಿಂಗಳಲ್ಲಿ 1.13 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದೆ. 2020ರ ಫೆಬ್ರವರಿಗೆ ಹೋಲಿಸಿದರೆ ಶೇಕಡ 7ರಷ್ಟು ಏರಿಕೆ ಕಂಡಿರುವುದು ಗಮನಾರ್ಹ. ಜಿಎಸ್ಟಿ ಸಂಗ್ರಹ ಸತತ ಐದನೇ ತಿಂಗಳು 1 ಲಕ್ಷ ಕೋಟಿ ರೂಪಾಯಿ ದಾಟಿದ್ದು, ಇದು ಆರ್ಥಿಕ ಚೇತರಿಕೆಯನ್ನು ಸ್ಪಷ್ಟವಾಗಿ ದರ್ಶಿಸುತ್ತಿದೆ ಎಂದು ವಿತ್ತ ಸಚಿವಾಲಯ ಹೇಳಿದೆ. ದೇಶದ ತಯಾರಿಕಾ ವಲಯದಲ್ಲಿ ಕೋವಿಡ್ನ ಕೆಲ ನಿರ್ಬಂಧಗಳು ಇನ್ನೂ ಜಾರಿಯಲ್ಲಿವೆ. ಅವನ್ನು ಹಿಂಪಡೆದರೆ ತಯಾರಿಕಾ ವಲಯದ ಚಟುವಟಿಕೆ ಮತ್ತು ಉದ್ಯೋಗಸೃಷ್ಟಿ ಹೆಚ್ಚಲಿದೆ ಎಂದು ಕ್ಷೇತ್ರತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಮಹಾರಾಷ್ಟ್ರ, ಕೇರಳ ಹೊರತುಪಡಿಸಿ ಉಳಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರೊನಾ ಪ್ರಕರಣಗಳು ತಗ್ಗಿರುವುದರಿಂದ ಮತ್ತು ಲಸಿಕೆ ಅಭಿಯಾನವೂ ವೇಗ ಪಡೆದಿರುವುದರಿಂದ ಮುಂದಿನ ದಿನಗಳಲ್ಲಿ ಮಾರುಕಟ್ಟೆ ಮತ್ತಷ್ಟು ಚೇತರಿಸಿಕೊಳ್ಳುವ ಸಾಧ್ಯತೆಯಿದೆ.
ಜಿಎಸ್ಟಿ ಸಂಗ್ರಹ ಹೆಚ್ಚಳ ಗೊಂಡಿರುವುದು, ಆ ಮೂಲಕ ವಾಣಿಜ್ಯ ರಂಗ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವುದು ಉತ್ತಮ ಬೆಳವಣಿಗೆಯೇ. ಆದರೆ, ಬೆಲೆಯೇರಿಕೆ ಜನಸಾಮಾನ್ಯರ ಚಿಂತೆಯನ್ನು ಹೆಚ್ಚಿಸಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುಗತಿ ಕಾಣುತ್ತಿರುವ ಪರಿಣಾಮ, ಬಡವರು ಮತ್ತು ಮಧ್ಯಮ ವರ್ಗದವರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚುತ್ತಲೇ ಇದು, ಅಡುಗೆ ಅನಿಲ ಸಿಲಿಂಡರ್ (ಎಲ್ಪಿಜಿ) ಬೆಲೆಯಂತೂ ಮೂರೇ ತಿಂಗಳಲ್ಲಿ ಐದು ಬಾರಿ ಹೆಚ್ಚಿದೆ. ‘ಜನರು ಭರವಸೆಗಳನ್ನೇ ತಿಂದು ಬದುಕಬೇಕೆ?’ ಎಂದು ಪ್ರತಿಪಕ್ಷ ಕೇಂದ್ರ ಸರ್ಕಾರವನ್ನು ಕುಟುಕಿದೆ.
ಪೆಟ್ರೋಲ್, ಡೀಸೆಲ್, ಎಲ್ಪಿಜಿ-ಇವೆಲ್ಲ ದಿನಬಳಕೆಯಲ್ಲಿ ಅಗತ್ಯ ವಸ್ತುಗಳು. ಇವು ದುಬಾರಿಯಾದರೆ ಸರಕು ಸಾಗಣೆ, ಪ್ರಯಾಣದರ ಸೇರಿದಂತೆ ಹಲವು ಏರಿಕೆಗಳನ್ನು ಕಾಣಬೇಕಾಗುತ್ತದೆ. ಕರೊನಾ ಪರಿಣಾಮ ಮೊದಲೇ ಜನಸಾಮಾನ್ಯರ ಬಜೆಟ್ ಬಿಗಡಾಯಿಸಿದೆ. ಉದ್ಯೋಗ ನಷ್ಟ, ಸಂಬಳ ಕಡಿತದಿಂದ ಸಮಸ್ಯೆ ಅನುಭವಿಸುತ್ತಿರುವ ಶ್ರೀಸಾಮಾನ್ಯರು, ತಿಂಗಳಿಡೀ ಮನೆ ನಡೆಸುವುದು ಹೇಗೆ ಎಂದು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ನಮ್ಮ ದೇಶದಲ್ಲಿ ಬಡವರ ಮತ್ತು ಮಧ್ಯಮ ವರ್ಗದವರ ಸಂಖ್ಯೆ ಹೆಚ್ಚಿದೆ. ಈ ವಾಸ್ತವ ಸರ್ಕಾರಕ್ಕೆ ಗೊತ್ತಿದೆ. ಹೀಗಿರುವಾಗ, ಬೆಲೆಯೇರಿಕೆಯನ್ನು ನಿಯಂತ್ರಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ಬೆಲೆಯೇರಿಕೆ ಪ್ರಕ್ರಿಯೆ ನಿರಂತರವಾಗಿ ಸಾಗುತ್ತಿರುವಾಗ, ಮತ್ತೊಂದೆಡೆ ಆರ್ಥಿಕ ಚೇತರಿಕೆಯ ಅಂಕಿಅಂಶಗಳು ಜನಸಾಮಾನ್ಯರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಪರಿಣಾಮಗಳು ಸೇರಿ ಬೆಲೆಯೇರಿಕೆಗೆ ಇತರ ಕಾರಣಗಳು ಇರಬಹುದಾದರೂ, ಈ ಸ್ಥಿತಿಯಲ್ಲಿ ಪರಿಹಾರ ಹುಡುಕುವುದು ಮುಖ್ಯವಾಗಬೇಕು. ಕರೊನಾ ಆಘಾತದಿಂದ ಚೇತರಿಸಿಕೊಳ್ಳದ ಜನಸಾಮಾನ್ಯರ ಗಾಯದ ಮೇಲೆ ಬೆಲೆಯೇರಿಕೆಯ ಬರೆ ಎಳೆದರೆ ಹೇಗೆ? ಸರ್ಕಾರದಲ್ಲಿ ಇರುವವರು ಇಂಥ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸುವ ಅಥವಾ ಅವುಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವ ಚರ್ಚೆ ನಡೆಯುತ್ತಿದ್ದು, ಸಮಂಜಸ ನಿರ್ಧಾರ ಹೊರಬೀಳಲಿ.