ನ್ಯೂಸ್

ಸಂಪಾದಕೀಯ: ನವಭಾರತಕ್ಕೆ ದಿಕ್ಸೂಚಿ

Mandara

ಶ್ರೇಷ್ಠ ವ್ಯಕ್ತಿತ್ವದ ನಿರ್ಮಾಣ ಆ ಮೂಲಕ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗುವುದು ಶಿಕ್ಷಣದಿಂದಲೇ. ಉತ್ತಮ ಮೌಲ್ಯಗಳು, ಜ್ಞಾನ, ಕೌಶಲ, ಸಂಸ್ಕಾರ, ಸ್ಥೈರ್ಯ-ಇವೆಲ್ಲ ಶಿಕ್ಷಣದ ಮೂಲಕ ಬಿತ್ತಬೇಕು. ಹಾಗಾಗಿಯೇ, ಗುರುಕುಲ ಪದ್ಧತಿಯನ್ನೂ ಒಳಗೊಂಡ ಭಾರತದ ಪ್ರಾಚೀನ ಶಿಕ್ಷಣ ಪದಟಛಿತಿ ಶಿಕ್ಷಣವೆಂದರೆ ಬರೀ ಅಕ್ಷರಗಳ ಅರಿವು ಮೂಡಿಸುವುದಲ್ಲ, ಬದಲಾಗಿ ವ್ಯಕ್ತಿನಿರ್ವಣ ಎಂದು ಸಾರಿತ್ತು. ಆ ನಿಟ್ಟಿನಲ್ಲಿ ಹಲವು ಮೈಲಿಗಲ್ಲುಗಳನ್ನೂ ದಾಖಲಿಸಿತ್ತು. ಆದರೆ ಇತ್ತೀಚಿನ ಶಿಕ್ಷಣ ವ್ಯವಸ್ಥೆ ಬರೀ ಮಾಹಿತಿ ನೀಡುತ್ತಿದೆಯೇ ಹೊರತು ನಿಜವಾದ ಜ್ಞಾನವಲ್ಲ ಮತ್ತು ಸಮಾಜದಲ್ಲಿ ಕಂಡುಬರುವ ಹಲವು ಬಗೆಯ ಅಪಸವ್ಯಗಳಿಗೆ ಶಿಕ್ಷಣ ವ್ಯವಸ್ಥೆಯ ಕೊರತೆಗಳೇ ಕಾರಣ ಎಂಬುದು ವ್ಯಾಪಕವಾಗಿ ಕೇಳಿಬರುವ ಮಾತು. ಈ ಎಲ್ಲ ಕಳವಳಗಳಿಗೆ ಸಮರ್ಥ ಉತ್ತರ ಕೊಟ್ಟು, ನವಭಾರತಕ್ಕೆ ದಿಕ್ಸೂಚಿಯಾಗುವಂಥ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದಿಸಿದೆ.

34 ವರ್ಷಗಳ ಬಳಿಕ ರೂಪುಗೊಂಡ ಹೊಸ ಶಿಕ್ಷಣ ನೀತಿ ಜ್ಞಾನ ಮತ್ತು ಕೌಶಲ ಎರಡಕ್ಕೂ ಪ್ರಾಧಾನ್ಯ ನೀಡಿದ್ದು, ಈಗಿನ ಸ್ವರೂಪದಲ್ಲಿ, ವ್ಯಾಖ್ಯಾನಗಳಲ್ಲಿ ವ್ಯಾಪಕ ಬದಲಾವಣೆಗಳನ್ನು ತಂದಿದೆ. ಈಗ ಚಾಲ್ತಿಯಲ್ಲಿರುವ 10+2 ಮಾದರಿಯ ಬದಲು ಪೂರ್ವ ಪ್ರಾಥಮಿಕ ಶಿಕ್ಷಣವನ್ನೂ ಒಳಗೊಂಡು 5+3+3+4 ಮಾದರಿಗೆ ಮುದ್ರೆ ಒತ್ತಿದೆ. ಪದವಿಯನ್ನು ಯಾವ ಹಂತದಲ್ಲಿ ನಿಲ್ಲಿಸಿದರೂ, ಅದನ್ನು ಶಿಕ್ಷಣ ಮೊಟಕುಗೊಳಿಸಿದವರು ಎಂದು ಪರಿಗಣಿಸದೆ ಪ್ರಮಾಣಪತ್ರ ನೀಡುವ ವ್ಯವಸ್ಥೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ನಿಯಂತ್ರಣ, ಆರನೇ ತರಗತಿಯಿಂದಲೇ ತಾಂತ್ರಿಕ, ವೃತ್ತಿಪರ ಕೌಶಲ ಕಲಿಕೆ, ಅಂಕಪಟ್ಟಿಯಲ್ಲಿ ಅಂಕದ ಜತೆಗೆ ಕೌಶಲದ ನಮೂದು, ಅಗತ್ಯ ವಿಷಯಗಳಿಗಷ್ಟೇ ಪಠ್ಯ,

ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಏಕರೂಪ ಪರೀಕ್ಷೆ ಸೇರಿ ಹಲವು ಅಂಶಗಳು ಶೈಕ್ಷಣಿಕ ವಲಯದಲ್ಲಿ ಸಂಚಲನವೇ ಮೂಡಿಸಿವೆ. ಕೆಲ ಬದಲಾವಣೆಗಳಂತೂ ಕ್ರಾಂತಿಕಾರಿ ಕ್ರಮ ಎಂದು

ಶೈಕ್ಷಣಿಕ ತಜ್ಞರು ವ್ಯಾಖ್ಯಾನಿಸಿದ್ದಾರೆ. ಮಾತೃಭಾಷೆ/ಪ್ರಾದೇಶಿಕ ಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂಬ ಬಹು ವರ್ಷಗಳ ಬೇಡಿಕೆಗೆ ಸ್ಪಂದನೆ ಸಿಕ್ಕಿದ್ದು, ಐದನೇ ತರಗತಿಯವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ಒದಗಿಸಲು ನಿರ್ಧರಿಸಲಾಗಿದೆ. ಮಕ್ಕಳಲ್ಲಿ ಪರೀಕ್ಷಾ ಆತಂಕ ಕಡಿಮೆ ಮಾಡಿ, ಕಲಿಕೆಯಲ್ಲಿ ಉತ್ಸಾಹ ಮೂಡಿಸಲು ಕ್ರಮ ಕೈಗೊಳ್ಳಲಾಗಿದ್ದು, 3, 5, 8ನೇ ತರಗತಿಗಷ್ಟೇ ಪರೀಕ್ಷೆ ನಡೆಯಲಿವೆ. ಯುಜಿಸಿ ಮಾದರಿಯಲ್ಲಿ ‘ಭಾರತೀಯ ಶಿಕ್ಷಣ ಮಂಡಳಿ’ ರಚಿಸಿರುವುದು ಹಲವು ಸುಧಾರಣೆಗಳಿಗೆ ಅನುವು ಮಾಡಿಕೊಡಲಿದೆ. ಹೊಸ ನೀತಿಯ ಈ ಎಲ್ಲ ಅಂಶಗಳು 2030ರವರೆಗೂ ಹಂತಹಂತವಾಗಿ ಜಾರಿಗೆ ಬರಲಿರುವುದರಿಂದ, ಉತ್ತಮ ಆಶಯದ ಕ್ರಮಗಳು ಅನುಷ್ಠಾನದ ಹಂತದಲ್ಲಿ ಹಳಿ ತಪ್ಪದಂತೆ ಎಚ್ಚರಿಕೆ ವಹಿಸಬೇಕಿದೆ. ಅಲ್ಲದೆ, ಹೊಸ ನೀತಿಯ ಕುರಿತಂತೆ ಶೈಕ್ಷಣಿಕ ರಂಗ ಮತ್ತು ಜನಸಾಮಾನ್ಯರ ವಲಯದಲ್ಲೂ ಆಮೂಲಾಗ್ರ ಚರ್ಚೆ ನಡೆಯಲಿ. ಮುಖ್ಯವಾಗಿ, ರಾಜ್ಯ ಸರ್ಕಾರಗಳು ರಾಜಕೀಯ ಮತ್ತು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಿ.