ನ್ಯೂಸ್

ಸಂಪಾದಕೀಯ: ಕೇಂದ್ರ ಸರ್ಕಾರ ಸಲಹೆ ಕರ್ನಾಟಕದ ಪಾಲಿಗೆ ನುಂಗಲಾರದ ತುತ್ತು...!

lakshmihegde

ಜಲವಿವಾದದ ಮುಗಿದ ಅಧ್ಯಾಯವೊಂದು ಆಂಧ್ರ-ತೆಲಂಗಾಣ ನಡುವಿನ ವಿವಾದದಿಂದ ಮತ್ತೆ ಜೀವಂತವಾಗಿದೆ. ನ್ಯಾಯಯುತವಾದ ನೀರಿನ ಪಾಲು ಪಡೆಯುವ ನಿರೀಕ್ಷೆಯಲ್ಲಿದ್ದ ಕರ್ನಾಟಕಕ್ಕೆ ಇದರಿಂದ ಮತ್ತೊಂದು ಆಘಾತವಾಗಿದೆ. ಆಂಧ್ರಪ್ರದೇಶದಿಂದ ವಿಭಜನೆಗೊಂಡು ಪ್ರತ್ಯೇಕ ರಾಜ್ಯವಾದ ಬಳಿಕ ತೆಲಂಗಾಣ ಕೃಷ್ಣಾ ನದಿ ನೀರಿನ ಮರುಹಂಚಿಕೆಯಾಗಬೇಕೆಂದು ಸುಪ್ರೀಂಕೋರ್ಟ್​ನಲ್ಲೂ ಕಾನೂನು ಹೋರಾಟ ನಡೆಸಿದೆ. ಸುಪ್ರೀಂಕೋರ್ಟ್​ನಿಂದ ಪ್ರಕರಣ ಹಿಂತೆಗೆದುಕೊಂಡಲ್ಲಿ ಜಲ ಹಂಚಿಕೆ ವ್ಯಾಜ್ಯವನ್ನು ನ್ಯಾಯಾಧಿಕರಣಕ್ಕೆ ಹೊಸದಾಗಿ ಕಳುಹಿಸಿಕೊಡುತ್ತೇವೆ ಎಂದು ಕೇಂದ್ರ ಸರ್ಕಾರ ಸಲಹೆ ನೀಡಿರುವುದು ಕರ್ನಾಟಕದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸುವ ಸಾಧ್ಯತೆ ಇದೆ.

ಕೃಷ್ಣಾ ನೀರು ಹಂಚಿಕೆ ವ್ಯಾಜ್ಯ ನ್ಯಾಯಾಧಿಕರಣದಲ್ಲಿ 2010ರಲ್ಲೇ ಇತ್ಯರ್ಥಗೊಂಡಿದೆ ಎಂಬುದು ಗಮನಾರ್ಹ. ಅಲ್ಲದೆ, ಕಣಿವೆ ರಾಜ್ಯಗಳು ಐತೀರ್ಪಿನ ಮೇಲೆ ಸ್ಪಷ್ಟೀಕರಣ ಕೋರಿ ಸಲ್ಲಿಸಿದ್ದ ಅರ್ಜಿಗಳ ಮೇಲೆ ನ್ಯಾ. ಬ್ರಿಜೇಶ್ ಕುಮಾರ್ ನೇತೃತ್ವದ ನ್ಯಾಯಾಧಿಕರಣ 2013ರಲ್ಲಿ ತನ್ನ ಅಂತಿಮ ವರದಿಯನ್ನು ನೀಡಿಯಾಗಿದೆ. ಈ ಹಿನ್ನೆಲೆಯಲ್ಲಿ, ಐತೀರ್ಪಿನ ಅಧಿಸೂಚನೆ ಪ್ರಕಟಣೆಗೆ ಕರ್ನಾಟಕ ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ. ಇಂಥ ಹೊತ್ತಲ್ಲಿ ಮತ್ತೆ ಈ ಜಲ ವಿವಾದವನ್ನು ನ್ಯಾಯಾಧಿಕರಣಕ್ಕೆ ಶಿಫಾರಸು ಮಾಡಿದರೆ ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ಉಂಟಾಗುವುದಲ್ಲದೆ, ಅಧಿಸೂಚನೆ ಪ್ರಕಟಣೆಯೂ ಮತ್ತಷ್ಟು ವಿಳಂಬಗೊಳ್ಳಲಿದೆ.

ಅಷ್ಟಕ್ಕೂ ಕೃಷ್ಣಾ ಜಲವಿವಾದ ರ್ತಾಕ ಅಂತ್ಯ ಕಂಡಿದೆ. ತೆಲಂಗಾಣ ಹೊಸ ರಾಜ್ಯವಾಗಿ ಆಂಧ್ರದಿಂದ ಬೇರ್ಪಟ್ಟ ಪರಿಣಾಮ ವಿವಾದ ಆ ಎರಡೂ ರಾಜ್ಯಗಳ ನಡುವೆ ಇದೆ. ತೆಲಂಗಾಣ ತನ್ನ ಸಮಸ್ಯೆಗಳು ಏನೇ ಇದ್ದರೂ, ಅದನ್ನು ಆಂಧ್ರದೊಂದಿಗೆ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಕರ್ನಾಟಕ, ಮಹಾರಾಷ್ಟ್ರವನ್ನು ಇದಕ್ಕೆ ಎಳೆದು ತರುತ್ತಿರುವುದು ಸೂಕ್ತವಲ್ಲ. 2010ರ ಐತೀರ್ಪಿನ ಬಳಿಕ ಸ್ಪಷ್ಟೀಕರಣ ಅರ್ಜಿಗಳ ಮೇಲೆ 2013ರಲ್ಲಿ ತೀರ್ಪು ಬಂದಿರುವುದರಿಂದ ನ್ಯಾಯಾಧಿಕರಣಕ್ಕೆ ಪ್ರಕರಣ ಶಿಫಾರಸು ಮಾಡಿ, ಜಲ ವ್ಯಾಜ್ಯದ ಮರುವಿಚಾರಣೆಗೆ ಅವಕಾಶ ನೀಡುವ ಅಧಿಕಾರವೇ ಕೇಂದ್ರ ಸರ್ಕಾರಕ್ಕಿಲ್ಲ ಎಂಬುದು ತಜ್ಞರ ಸ್ಪಷ್ಟ ಅಭಿಪ್ರಾಯ. ಮತ್ತೆ ಹೊಸ ನ್ಯಾಯಾಧಿಕರಣ ರಚಿಸಿದರೆ, ಕೇಂದ್ರ ರೂಪಿಸಿದ ಏಕ ನ್ಯಾಯಾಧಿಕರಣಕ್ಕೆ ಅರ್ಥವೇನು? ಜಲ ವ್ಯಾಜ್ಯಗಳು ಬೇಗ ಬಗೆಹರಿಯಬೇಕು ಎಂಬ ಮೂಲೋದ್ದೇಶಕ್ಕೆ ಚ್ಯುತಿ ಬಂದಂತಲ್ಲವೇ?

ಕೃಷ್ಣಾ ನದಿ ನೀರು ಹಂಚಿಕೆ ಕುರಿತು ಸುಪ್ರೀಂಕೋರ್ಟ್ ಅಂತಿಮ ತೀರ್ಪಷ್ಟೇ ಬರಬೇಕಿದೆ. ಹೀಗಿರುವಾಗ, ಕೇಂದ್ರ ಸರ್ಕಾರ ನ್ಯಾಯಾಧಿಕರಣದ ಐತೀರ್ಪಿನ ಅಧಿಸೂಚನೆ ಪ್ರಕಟಿಸಬೇಕು. ಇದಕ್ಕಾಗಿ ಕರ್ನಾಟಕ ಆಗ್ರಹಿಸುತ್ತಲೇ ಬಂದಿದೆ. ಆದರೆ ಈ ಬಾರಿ ಈ ಕುರಿತು ಕೇಂದ್ರದ ಮೇಲೆ ತೀವ್ರ ಒತ್ತಡ ಹೇರಬೇಕು, ವಾಸ್ತವಾಂಶಗಳನ್ನು ಮನದಟ್ಟು ಮಾಡಿಕೊಟ್ಟು, ಅಧಿಸೂಚನೆ ಪ್ರಕಟಣೆಗೆ ಪಟ್ಟು ಹಿಡಿಯಬೇಕು. ತೆಲಂಗಾಣದ ಒತ್ತಡಕ್ಕೆ ಕೇಂದ್ರ ಮಣಿಯದಂತೆ, ಹೊಸದಾಗಿ ಜಲ ವ್ಯಾಜ್ಯ ಆರಂಭವಾಗದಂತೆ ರಾಜ್ಯ ಸರ್ಕಾರ ಸೂಕ್ತ ಹಾಗೂ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಬೇಕಿದೆ.