ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳಲ್ಲಿ ಜನರ ಶೋಷಣೆ ತಡೆಯಲು ಮಾರ್ಗಸೂಚಿಗಳನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದೆ. ಖಾಸಗಿ ಆಸ್ಪತ್ರೆಗಳು ತಮ್ಮ ಔಷಧಾಲಯಗಳಿಂದಲೇ ರೋಗಿಗಳು ಮತ್ತು ಅವರ ಕುಟುಂಬದವರು ಔಷಧ ಹಾಗೂ ಇತರ ವೈದ್ಯಕೀಯ ಪರಿಕರಗಳನ್ನು ಖರೀದಿಸುವಂತೆ ಒತ್ತಾಯಿಸುತ್ತಾರೆ; ಈ ರೀತಿ ಒತ್ತಾಯಿಸದಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಈ ಸೂಚನೆ ನೀಡಿದ ನ್ಯಾಯಾಲಯ, ಕಡ್ಡಾಯ ನಿರ್ದೇಶನವನ್ನೇನೂ ನೀಡಿಲ್ಲ. ಆದರೆ, ಈ ಸಂಬಂಧ ಸರ್ಕಾರಗಳನ್ನು ಸಂವೇದನಾಶೀಲಗೊಳಿಸುವುದು ಅಗತ್ಯ ಎಂದಿರುವುದು ವಿಷಯದ ಗಂಭೀರತೆಗೆ ಸಾಕ್ಷಿ.
‘ಕೆಲವು ರಾಜ್ಯಗಳು ಅಗತ್ಯ ವೈದ್ಯಕೀಯ ಸೇವೆ ಒದಗಿಸುವಲ್ಲಿ ವಿಫಲವಾಗಿವೆ. ಇದರಿಂದ ಖಾಸಗಿ ಆಸ್ಪತ್ರೆಗಳಿಗೆ ಉತ್ತೇಜನ ಒದಗಿಸಿದಂತಾಗಿದೆ. ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸುವುದು ಸರ್ಕಾರಗಳ ಕರ್ತವ್ಯ’ ಎಂದು ಸವೋಚ್ಚ ನ್ಯಾಯಾಲಯ ತಿಳಿಸಿರುವುದು ಗಮನಾರ್ಹ. ಇವತ್ತಿನ ದಿನಮಾನದಲ್ಲಿ ಜನಸಾಮಾನ್ಯರಿಗೆ ಶಿಕ್ಷಣ ಹಾಗೂ ಆರೋಗ್ಯ ಇವೆರಡು ಅಧಿಕ ವೆಚ್ಚದ ಬಾಬತ್ತಾಗಿವೆ. ಎಷ್ಟರಮಟ್ಟಿಗೆಂದರೆ, ಬಡವರಿರಲಿ, ಮಧ್ಯಮ ವರ್ಗದವರು ಸಹ ಹೆದರುವಂತಾಗಿದೆ. ಈ ಎರಡೂ ರಂಗಗಳಲ್ಲಿ ಖಾಸಗಿ ವಲಯ ಬಲವಾಗಿ ಬೇರೂರಿದೆ. ಇದರರ್ಥ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಏನೂ ಮಾಡದೆ ಕೈಕಟ್ಟಿ ಕುಳಿತಿವೆ ಎಂದಲ್ಲ. ಶಿಕ್ಷಣ ಹಾಗೂ ಸಾರ್ವತ್ರಿಕ ಆರೋಗ್ಯ ವಲಯದಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳಾಗಿವೆ; ಕಾಲಕಾಲಕ್ಕೆ ವಿವಿಧ ಯೋಜನೆಗಳು ಬರುತ್ತಿವೆ.
ವಿದ್ಯಾರ್ಥಿಗಳಿಗೆ ಹಲವು ಬಗೆಯ ಶಿಕ್ಷಣ ಸವಲತ್ತುಗಳು ದೊರೆಯುತ್ತಿವೆ. ಹಾಗೇ ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆಯಲ್ಲಿಯೂ ಹಿಂದಿನ ದಿನಗಳಿಗೆ ಹೋಲಿಸಿದರೆ ವ್ಯಾಪಕ ಬದಲಾವಣೆಗಳು ಆಗಿವೆ. ಆಧುನಿಕ ಚಿಕಿತ್ಸಾ ಸವಲತ್ತು ಕಲ್ಪಿಸಲು ನಿರಂತರವಾಗಿ ಪ್ರಯತ್ನಗಳು ಜಾರಿಯಲ್ಲಿವೆ. ಆರೋಗ್ಯ ವಿಮಾ ಸೌಕರ್ಯವನ್ನೂ ಸರ್ಕಾರಗಳು ನೀಡಿವೆಯಾದರೂ, ದೇಶವು ಈ ಹಾದಿಯಲ್ಲಿ ಸಾಗಬೇಕಾದ ದಾರಿ ದೂರವಿದೆ. ಆದರೆ ಈ ಎರಡೂ ರಂಗಗಳು ಜನರ ದೃಷ್ಟಿಯಲ್ಲಿ ಅಂಥ ಉತ್ತಮ ಇಮೇಜನ್ನೇನೂ ಹೊಂದಿಲ್ಲ ಎಂಬುದನ್ನೂ ಗಮನಿಸಬೇಕು. ಹೀಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಖಾಸಗಿ ಆಸ್ಪತ್ರೆಗಳು ಪ್ರಭಾವ ಹೆಚ್ಚಿಸಿಕೊಂಡಿವೆ. ಅದೇ ಸಮಯಕ್ಕೆ ಇವು ದುಬಾರಿ ಎಂಬ ಭಾವನೆಯೂ ಜನರಲ್ಲಿರುವುದನ್ನು ಕಡೆಗಣಿಸುವಂತಿಲ್ಲ. ಆದರೆ ಅನಿವಾರ್ಯವಾದ್ದರಿಂದ ಸಹಿಸುತ್ತಾರೆ.
ಇವೆರಡೂ ಕ್ಷೇತ್ರಗಳಿಗೆ ಕಾಪೋರೇಟ್ ಸ್ಪರ್ಶ ಸಿಕ್ಕಮೇಲೆ ಅಲ್ಲಿನ ವಿನ್ಯಾಸವೇ ಬದಲಾಗಿದೆ. ಮೂಲಸೌಕರ್ಯ, ಸಿಬ್ಬಂದಿ, ನಿರ್ವಹಣೆ ಇತ್ಯಾದಿ ಸೇರಿ ಖಾಸಗಿ ಸಂಸ್ಥೆಗಳಿಗೂ ಕಾಲಕ್ಕೆ ತಕ್ಕಂತೆ ಖರ್ಚು ಇರುತ್ತದೆ ಎಂಬುದು ಒಪ್ಪಬೇಕಾದ್ದೇ. ಆದರೂ, ಜನಹಿತ ದೃಷ್ಟಿಯನ್ನೂ ಅವರು ಮರೆಯುವಂತಿಲ್ಲ. ಶಿಕ್ಷಣ ಹಾಗೂ ಆರೋಗ್ಯವನ್ನು ವ್ಯವಹಾರ ಎಂಬುದಕ್ಕಿಂತ ಸೇವೆ ಎಂಬ ನೆಲೆಯಲ್ಲಿ ಗ್ರಹಿಸಿದರೆ ಸೂಕ್ತ. ಆರೋಗ್ಯವಂತ ದೇಶದ ನಿರ್ವಣದಲ್ಲಿ ಸರ್ಕಾರದ ಹಾಗೆ ತನಗೂ ಹೊಣೆಗಾರಿಕೆ ಇದೆ ಎಂಬ ವಿವೇಚನೆಯಲ್ಲಿಯೇ ಖಾಸಗಿ ರಂಗವೂ ತನ್ನ ಯೋಗದಾನ ನೀಡಬೇಕಾಗುತ್ತದೆ.