ಕರೊನಾ ಆರ್ಥಿಕ ವ್ಯವಸ್ಥೆ ಮೇಲೆ ಮಾಡಿದ ಆಘಾತದಿಂದ ಸೃಷ್ಟಿಯಾಗಿರುವ ಸಮಸ್ಯೆಗಳು ಒಂದೇರಡಲ್ಲ. ಕೈಗಾರಿಕೆಗಳು ನಷ್ಟದಿಂದ ಚೇತರಿಸಿಕೊಳ್ಳಲು ಹೆಣಗಾಡುತ್ತಿರಬೇಕಾದರೆ, ಮಧ್ಯಮವರ್ಗದವರ ಪಾಡಂತೂ ಇನ್ನೂ ಸಂಕಷ್ಟಮಯ. ಸಣ್ಣ ವ್ಯಾಪಾರಿಗಳು, ಕಾರ್ವಿುಕರು ಹೊಸ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ. ಈ ಎಲ್ಲ ಪರಿಸ್ಥಿತಿಯನ್ನು ಎದುರಿಸಲು ಮತ್ತು ಸವಾಲನ್ನೇ ಅವಕಾಶವನ್ನಾಗಿ ಪರಿವರ್ತಿಸಲು ಆತ್ಮನಿರ್ಭರ ಭಾರತ ಯೋಜನೆಯಡಿ ಎರಡು ಹಂತದ ಪರಿಹಾರ ಪ್ಯಾಕೇಜ್ಗಳನ್ನು ಘೋಷಿಸಿದ್ದ ಕೇಂದ್ರ ಸರ್ಕಾರ ಗುರುವಾರ ಮೂರನೇ ಪ್ಯಾಕೇಜ್ನ್ನು ಘೋಷಿಸಿದೆ. ಕರೊನೋತ್ತರ ಕಾಲದಲ್ಲಿ ಸಾಮಾನ್ಯ ಜನರ ಬದುಕನ್ನು, ಎಲ್ಲ ವಲಯಗಳ ಚಟುವಟಿಕೆಗಳನ್ನು ಹಳಿಗೆ ತರಲು ಇಂಥದ್ದೊಂದು ನೆರವಿನ ಅವಶ್ಯಕತೆ ಇತ್ತು. ಹಾಗಾಗಿ, ಸಕಾಲಿಕವಾಗಿ ನೆರವನ್ನು ಘೋಷಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಹಣದ ಹರಿವು ಹೆಚ್ಚಿಸಲು ಆದ್ಯತೆ ನೀಡಿದ್ದಾರೆ. ಜತೆಗೆ, ಉದ್ಯೋಗ ಸೃಷ್ಟಿಗೆ ಒತ್ತು, ಆರ್ಥಿಕವಾಗಿ ಹಿಂದುಳಿದವರಿಗೆ ನೆರವು, ಗ್ರಾಮೀಣ ಬದುಕಿಗೆ ಆಧಾರ ನೀಡುವ ಕ್ರಮಗಳನ್ನೂ ಘೋಷಿಸಿದ್ದು, ಹೊಸ ಭರವಸೆ ಮೂಡಿಸಿದೆ.
ಹೊಸ ನೇಮಕಾತಿ ಮಾಡುವ ಸಂಸ್ಥೆಗಳಿಗೆ ಸಬ್ಸಿಡಿ ನೀಡುವ ಹೊಸ ಉದ್ಯೋಗ ಸೃಷ್ಟಿ ಯೋಜನೆ ಘೋಷಣೆ ಆಗಿದ್ದು, ಕರೊನಾ ಕಾಲದಲ್ಲಿ ಕೆಲಸ ಕಳೆದುಕೊಂಡವರಲ್ಲಿ ನಿರೀಕ್ಷೆ ಹುಟ್ಟುಹಾಕಿದೆ. ಉದ್ಯೋಗಿಗಳ ನಿವೃತ್ತಿ ನಿಧಿ ಮತ್ತು ಉದ್ಯೋಗದಾತರಿಗೆ ಎರಡು ವರ್ಷದ ಸಬ್ಸಿಡಿ ಈ ಯೋಜನೆ ಮೂಲಕ ದೊರೆಯಲಿದೆ. ಇಪಿಎಫ್ಒ ನೋಂದಾಯಿತ ಸಂಸ್ಥೆಯಲ್ಲಿ ಮಾಸಿಕ 15 ಸಾವಿರ ರೂಪಾಯಿಗಿಂತ ಕಡಿಮೆ ವೇತನದಲ್ಲಿ ಉದ್ಯೋಗಕ್ಕೆ ಸೇರುವ ಯಾವುದೇ ಹೊಸ ನೌಕರರಿಗೆ ಈ ಯೋಜನೆ ಅನ್ವಯವಾಗಲಿದೆ ಎಂಬುದು ಗಮನಾರ್ಹ. ರೈತರ ಸಮಸ್ಯೆಗೂ ಕೇಂದ್ರ ಸರ್ಕಾರ ಸ್ಪಂದಿಸಿದೆ. ರಸಗೊಬ್ಬರ ಖರೀದಿಗೆ ಕೃಷಿಕರಿಗೆ ಸಹಾಯಧನ ಒದಗಿಸಲು 65 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಕಲ್ಪಿಸಲಾಗಿದೆ. ಕೋವಿಡ್-19 ಲಸಿಕೆಯ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಜೈವಿಕ ತಂತ್ರಜ್ಞಾನ ಇಲಾಖೆಗೆ 900 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಅಷ್ಟೇ ಅಲ್ಲ, ದೇಶೀ ರಕ್ಷಣಾ ಉಪಕರಣಗಳು, ಕೈಗಾರಿಕಾ ಪ್ರೋತ್ಸಾಹ ಮತ್ತು ಮೂಲಸೌಕರ್ಯ ಹಾಗೂ ಹಸಿರು ಇಂಧನಕ್ಕಾಗಿ 10,200 ರೂಪಾಯಿ ಕೋಟಿ ಹೆಚ್ಚುವರಿ ಬಜೆಟ್ ವಿನಿಯೋಗಿಸಲಾಗುವುದು ಎಂಬ ವಿತ್ತ ಸಚಿವರ ಘೋಷಣೆ, ಈ ರಂಗಗಳಲ್ಲಿ ಉತ್ಸಾಹ ಹೆಚ್ಚಿಸಲು ಅನುವಾಗಲಿದೆ. ರಿಯಲ್ ಎಸ್ಟೇಟ್ ವಲಯಕ್ಕೂ ಪೂರಕ ಕ್ರಮ ಘೋಷಿಸಲಾಗಿದೆ.
ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ಳುತ್ತಿರುವ ಕುರಿತು ಹಲವು ನಿದರ್ಶನಗಳನ್ನು ನೀಡಿರುವ ನಿರ್ಮಲಾ ಸೀತಾರಾಮನ್, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ವೇಗ ಪಡೆಯಲು ಈ ಪ್ಯಾಕೇಜ್ ನೆರವಾಗಲಿದೆ ಎಂದಿದ್ದಾರೆ. ಜಿಎಸ್ಟಿ ಸಂಗ್ರಹದಲ್ಲೂ ಇತ್ತೀಚೆಗೆ ಏರಿಕೆ ಕಂಡುಬಂದಿದೆ. ಆರ್ಥಿಕ ಸುಧಾರಣೆಯ ದಿನಗಳಿಗೆ ಕಾಯುತ್ತಿದ್ದ ಜನಸಾಮಾನ್ಯರಿಗೆ ಮತ್ತು ಎಲ್ಲ ರಂಗಗಳಿಗೆ ಇದರಿಂದ ಒಂದಷ್ಟು ವಿಶ್ವಾಸವಂತೂ ಮೂಡಿದೆ. ಪ್ರಸಕ್ತ ಸವಾಲುಗಳನ್ನು ಎದುರಿಸಿ, ಮತ್ತೆ ಸಮರ್ಥವಾಗಿ ಹೊರಹೊಮ್ಮಲು ಪೂರಕವಾಗಲಿದೆ. ಈ ಎಲ್ಲ ಸೌಲಭ್ಯ ಅಥವಾ ರಿಯಾಯಿತಿಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಲಿ.