ನ್ಯೂಸ್

ಸಂಪಾದಕೀಯ | ರೈತರಿಗೆ ಮತ್ತೆ ಸಂಕಷ್ಟ - ಧೈರ್ಯಗೆಡದೆ ಇರುವ ಆಯ್ಕೆಗಳನ್ನು ಗಮನಿಸಬೇಕು

Mysuru Rural

ಕೃಷಿ ಮತ್ತು ರೈತರ ಸ್ಥಿತಿಯೇ ಡೋಲಾಯಮಾನ. ಬೆಳೆ ಕೈಗೆ ಸಿಗುವವರೆಗೆ ಒಂದು ಬಗೆಯ ಸಂಕಷ್ಟ. ಉತ್ತಮ ಇಳುವರಿಯಾದರೂ ಸೂಕ್ತ ಬೆಲೆ ಸಿಗದಿದ್ದಲ್ಲಿ ಮತ್ತೆ ಪರದಾಟ. ಈ ನಡುವೆ ಪ್ರಾಕೃತಿಕ ವಿಕೋಪಗಳು ಬಂದಪ್ಪಳಿಸಿದರೆ, ಅದರ ಮುಂದೆ ಮಾನವ ಅಸಹಾಯಕ. ಈ ವರ್ಷ ಕೃಷಿಕ್ಷೇತ್ರ ಹಲವು ಹೊಸ ನಿರೀಕ್ಷೆಗಳನ್ನು ಇರಿಸಿಕೊಂಡಿತು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಚೀನಾದಿಂದ ಶುರುವಾದ ಕರೊನಾ ಸೋಂಕಿನ ಹಾವಳಿ ಭಾರತಕ್ಕೂ ಬಂದು, ಎಲ್ಲ ಕಡೆ ಹಬ್ಬಿದಾಗ, ಸೋಂಕು ಪ್ರಸರಣದ ವೇಗವನ್ನು ತಗ್ಗಿಸಲು ಲಾಕ್​ಡೌನ್ ವಿಧಿಸಲಾಯಿತು. ಹಾಗಾಗಿ, ನಗರ ಪ್ರದೇಶದಿಂದ ಜನರು ಗ್ರಾಮೀಣ ಭಾಗಗಳಿಗೆ ಹೋಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಇದರಿಂದಾಗಿ, 2020-21ನೇ ಸಾಲಿನಲ್ಲಿ ಕೃಷಿ ಕ್ಷೇತ್ರದಲ್ಲಿ ಸರ್ಕಾರದ ನಿರೀಕ್ಷೆಗಿಂತಲೂ ಹೆಚ್ಚು ಬಿತ್ತನೆಯಾಗಿದೆ. ಹಾಗಂತ ಸಂತಸ ಪಡುತ್ತಿರುವಾಗಲೇ ಮಳೆಯೂ ವಾಡಿಕೆಗಿಂತ ಹೆಚ್ಚು ಸುರಿದು, ಬೆಳೆಗಳನ್ನು ನಷ್ಟ ಮಾಡಿದೆ. ಇರುವ ಕೆಲ ಫಸಲುಗಳಿಗೆ ರೋಗಬಾಧೆ ಅಂಟಿಕೊಂಡಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲೂ ಇದೇ ಸ್ಥಿತಿ. ಕಳೆದ 2 ವರ್ಷದಿಂದ ಬೆಳೆ ವಿಮೆ ಸಂಸ್ಥೆಗಳು, ಬೆಳೆ ಹಾನಿಯಾದ ರೈತರಿಗೆ ವಿಮಾ ಪರಿಹಾರ ನೀಡುವಲ್ಲಿ ಹಿಂದೆ ಬಿದ್ದಿದ್ದು, ರೈತ ಹಾಕಿದ ಬಂಡವಾಳಕ್ಕೆ ಪ್ರತಿಫಲ ಸಿಗದಂಥ ಪರಿಸ್ಥಿತಿ ಸೃಷ್ಟಿಯಾಗಿದೆ.

ಈರುಳ್ಳಿ, ಶೇಂಗಾ, ಅಡಕೆ, ರಾಗಿ, ಮುಸುಕಿನ ಜೋಳ, ತೆಂಗು, ಬಾಳೆ, ಕಬ್ಬು, ತೊಗರಿ, ಹತ್ತಿ, ಸಜ್ಜೆ, ಸೋಯಾಬೀನ್, ಸೂರ್ಯಕಾಂತಿ ಸೇರಿ ಹಲವು ಬೆಳೆಗಳಿಗೆ ವ್ಯಾಪಕ ಪ್ರಮಾಣದಲ್ಲಿ ಹಾನಿಯಾಗಿದೆ. ಅದರಲ್ಲೂ, ಭಾರಿ ಮಳೆಯಿಂದ ಈರುಳ್ಳಿ, ಅಡಕೆ ಕೊಳೆಯುವ ಹಂತದಲ್ಲಿದ್ದು, ರೈತರು ಮುಂದೇನು ಎಂದು ಚಿಂತಾಕ್ರಾಂತರಾಗಿದ್ದಾರೆ. ಹಲವು ಜಿಲ್ಲೆಗಳಲ್ಲಿ ನಷ್ಟದ ಪ್ರಮಾಣವನ್ನು ಅಳೆಯುವ ಪ್ರಕ್ರಿಯೆ ಪ್ರಗತಿಯಲ್ಲಿದ್ದರೆ, ಕೆಲವೆಡೆ ಪರಿಹಾರ ವಿತರಣೆಗೂ ಕ್ರಮ ಕೈಗೊಳ್ಳಲಾಗಿದೆ.

ಸದ್ಯ ಎದುರಿಗೆ ಇರುವ ಸನ್ನಿವೇಶವನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ರೈತರು ಸ್ಥೈರ್ಯ ಕಳೆದುಕೊಳ್ಳಬೇಕಿಲ್ಲ. ಮಳೆ ಹೆಚ್ಚಾಗಿ ಬೆಳೆಗಳಿಗೆ ರೋಗಬಾಧೆ ಆವರಿಸಿಕೊಂಡಿರುವುದು ಹೌದಾದರೂ, ಕೃಷಿತಜ್ಞರ, ಸಂಪನ್ಮೂಲ ವ್ಯಕ್ತಿಗಳ ಸಲಹೆ, ಮಾರ್ಗದರ್ಶನದಂತೆ ಸಕಾಲದಲ್ಲಿ ಕೆಲ ಕ್ರಮ ಕೈಗೊಂಡು ನಷ್ಟದ ಪ್ರಮಾಣವನ್ನು ಸಾಕಷ್ಟು ಪ್ರಮಾಣದಲ್ಲಿ ತಗ್ಗಿಸಬಹುದಾಗಿದೆ. ಸರ್ಕಾರದ ಕಡೆಯಿಂದ ನಿಯಮಾನುಸಾರ ಪರಿಹಾರ ವಿತರಣೆಯ ಪ್ರಕ್ರಿಯೆ ನಡೆಯಲಿದೆ ಮತ್ತು ಅದು ಸಮರ್ಪಕವಾಗಿ ನಡೆಯುವಂತೆ ಮಾಡುವುದು ಕೃಷಿ, ತೋಟಗಾರಿಕೆ ಇಲಾಖೆಯ ಜವಾಬ್ದಾರಿ. ಇದೆಲ್ಲವನ್ನು ಹೊರತುಪಡಿಸಿ ರೈತರು ಮುಂದಿರುವ ಆಯ್ಕೆಗಳನ್ನು ಗಮನಿಸಬೇಕು. ನಿರಾಶರಾಗಿ ಕೈಚೆಲ್ಲಿ ಕೂಡದೆ ಸೌಲಭ್ಯ, ರಿಯಾಯಿತಿಗಳ ಸದುಪಯೋಗ ಪಡೆದುಕೊಳ್ಳಬೇಕು. ಕೃಷಿ ವಿಶ್ವವಿದ್ಯಾಲಯಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೂಡ ರೈತರಿಗೆ ಸರಿಯಾದ ಮಾಹಿತಿ ತಲುಪಿಸಿ ಬೆಳೆ ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮ, ಬಳಸಬೇಕಾದ ಔಷಧದ ಬಗ್ಗೆ ಅರಿವು ತುಂಬಬೇಕು. ಬಿತ್ತನೆ ಪ್ರಮಾಣ ಹೆಚ್ಚಿರುವುದರಿಂದ ಸೂಕ್ತ ಇಳುವರಿ, ಅದಕ್ಕೆ ನ್ಯಾಯಯುತ ಬೆಲೆ ದೊರೆಯುವಂತೆ ಮಾಡುವುದು ಈಗಿನ ಅಗತ್ಯ.