ನ್ಯೂಸ್

ಸಂಪಾದಕೀಯ | ಜನತಾ ತೀರ್ಪು - ರಾಜ್ಯಗಳಲ್ಲಿ ಬಲಗೊಂಡ ಬಿಜೆಪಿ

shastrimath

ದೇಶದ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆ ಮತ್ತು ಉಪಚುನಾವಣೆಗಳಲ್ಲಿ ಮತದಾರ ಹಲವು ಸ್ಪಷ್ಟ ಸಂದೇಶ ರವಾನಿಸಿದ್ದಾನೆ. ರಾಷ್ಟ್ರೀಯ ವಿಷಯಗಳಿಗಿಂತ ಸ್ಥಳೀಯ ಸಮಸ್ಯೆಗೆ ಒತ್ತು, ಭರವಸೆಗಳಿಗಿಂತ ಆಗಿರುವ ಕೆಲಸದ ಅವಲೋಕನ ಮತ್ತು ಯುವ ಸಮುದಾಯದ ಮುಂದೆ ಇರಿಸಿದ ನಿರೀಕ್ಷೆಗಳು ಮತಗಳಾಗಿ ಪರಿವರ್ತನೆಗೊಂಡಿರುವುದು ಸ್ಪಷ್ಟ. ಮಧ್ಯಪ್ರದೇಶದಲ್ಲಿ ಬಿಜೆಪಿ ತನ್ನ ಸರ್ಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎರಡು ವರ್ಷಗಳ ಹಿಂದೆ ಅಧಿಕಾರ ಕಳೆದುಕೊಂಡು ಪ್ರತಿಪಕ್ಷದಲ್ಲಿದ್ದ ಬಿಜೆಪಿ, ಜ್ಯೋತಿರಾದಿತ್ಯ ಸಿಂಧಿಯಾ ಬಣದ ಶಾಸಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅಧಿಕಾರಕ್ಕೆ ಬಂದಿತ್ತು. ಈ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರಿಂದ ಉಪಚುನಾವಣೆಯಲ್ಲಿ ಅವರ ಗೆಲುವು ಸರ್ಕಾರದ ಅಸ್ತಿತ್ವಕ್ಕೆ ಮುಖ್ಯವಾಗಿತ್ತು. ಬಿಜೆಪಿಯ ಭದ್ರಕೋಟೆ ಗುಜರಾತ್ ಮತ್ತು ಉತ್ತರಪ್ರದೇಶದಲ್ಲಿ ನಡೆದ ಉಪ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಮಲ ಮತ್ತೆ ಅರಳಿದೆ. ಕರ್ನಾಟಕದ ಎರಡು ಸ್ಥಾನಗಳನ್ನು ತನ್ನದಾಗಿಸಿಕೊಂಡಿರುವ ಕಮಲ ಪಾಳಯ ಹೊಸ ಹುಮ್ಮಸ್ಸು ಪಡೆದುಕೊಂಡಿದೆ.

ಇಡೀ ದೇಶದ ಗಮನ ಸೆಳೆದ ಬಿಹಾರ ಚುನಾವಣೆಯಲ್ಲಿ ಜಿದ್ದಾಜಿದ್ದಿಯ ಸ್ಪರ್ಧೆ ಏರ್ಪಟ್ಟಿತ್ತು. ಎನ್​ಡಿಎ ಮತ್ತು ಯುಪಿಎ ನಡುವೆ ಸಮಬಲದ ಹೋರಾಟ ನಡೆದು, ಕಡೆಗೂ ಬಹುಮತ ಎನ್​ಡಿಎಯತ್ತ ವಾಲಿದೆ. ಒಟ್ಟಾರೆ ಫಲಿತಾಂಶವನ್ನು ಅವಲೋಕಿಸುವುದಾದರೆ ಎಲ್ಲ ಪಕ್ಷಗಳಿಗೂ ಪಾಠ ಕಲಿಸಿರುವ ಮತದಾರ, ಆ ಮೂಲಕ ಗೆಲುವು-ಸೋಲಿನ ತೀರ್ಪು ನೀಡಿದ್ದಾನೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ್ದರೂ, 2018ರಿಂದಲೇ ಒಂದೊಂದೇ ರಾಜ್ಯಗಳನ್ನು ಕಳೆದುಕೊಳ್ಳಲಾರಂಭಿಸಿತ್ತು. 2018ರಲ್ಲಿ ರಾಜಸ್ಥಾನ, ಛತ್ತೀಸ್​ಗಢ, ಮಧ್ಯಪ್ರದೇಶ ಚುನಾವಣೆಗಳಲ್ಲಿ ಅಧಿಕಾರ ಕಳೆದುಕೊಂಡಿತು. (ಮತ್ತೆ ಮಧ್ಯಪ್ರದೇಶದ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು). 2019ರಲ್ಲಿ ಮಹಾರಾಷ್ಟ್ರದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊಮ್ಮಿದರೂ, ಶಿವಸೇನೆ ಕಾಂಗ್ರೆಸ್-ಎನ್​ಸಿಪಿ ಜತೆ ಮೈತ್ರಿ ಮಾಡಿಕೊಂಡಿದ್ದರಿಂದ ಸರ್ಕಾರ ರಚಿಸುವಲ್ಲಿ ವಿಫಲವಾಯಿತು. ಹರಿಯಾಣದಲ್ಲಿ ಸರ್ಕಾರ ರಚಿಸಿದರೂ, ಬಹುಮತ ಪಡೆಯಲು ಸಾಧ್ಯವಾಗದೆ ಮಿತ್ರಪಕ್ಷವನ್ನು ಅವಲಂಬಿಸಬೇಕಾಯಿತು. ಆಂಧ್ರಪ್ರದೇಶ, ಒಡಿಶಾ ರಾಜ್ಯಗಳಲ್ಲಿ ಹೇಳಿಕೊಳ್ಳುವಂಥ ಸಾಧನೆ ಏನೂ ಆಗಲಿಲ್ಲ. ಹಾಗಾಗಿ, ಪ್ರಯಾಸಪಟ್ಟು ಗೆದ್ದಿದ್ದರೂ ಬಿಹಾರದ ವಿಜಯ ಬಿಜೆಪಿಗೆ ಈ ಹೊತ್ತಲ್ಲಿ ಒಂದಷ್ಟು ಭರವಸೆ ಮೂಡಿಸಿದೆ ಮತ್ತು ಇತರ ರಾಜ್ಯಗಳಲ್ಲಿ ದೊರೆತ ಸ್ಪಂದನೆಯೂ ಗಮನಾರ್ಹವಾಗಿದೆ.

ಜನರ ಸಮಸ್ಯೆಗಳನ್ನು, ಅಭಿವೃದ್ಧಿ ವಿಷಯಗಳನ್ನು ಕಡೆಗಣಿಸಿದರೆ ಯಾವುದೇ ಪಕ್ಷವನ್ನು ಸಹಿಸುವುದಿಲ್ಲ ಎಂಬ ಸಂದೇಶ ಈ ಫಲಿತಾಂಶಗಳಿಂದ ಹೊಮ್ಮಿದೆ. ಅದರಲ್ಲೂ, ಯುವಕರಿಗೆ, ಮಹಿಳೆಯರಿಗೆ ಭರವಸೆ ಕೊಟ್ಟು ಮರೆತರೆ, ರಾಜಕೀಯ ಪಕ್ಷಗಳು ಅದಕ್ಕೆ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂಬುದನ್ನೂ ಮತದಾರ ತಿಳಿಸಿ ಕೊಟ್ಟಿದ್ದಾನೆ. ಈ ಎಚ್ಚರಿಕೆಯ ಪಾಠಗಳನ್ನು ಚೆನ್ನಾಗಿ ಅವಲೋಕಿಸಿಕೊಂಡೇ ಎಲ್ಲ ರಾಜಕೀಯ ಪಕ್ಷಗಳು ನೈಜ ಸುಧಾರಣೆ, ಮಹತ್ವದ ಬದಲಾವಣೆಯ ಪಥದಲ್ಲಿ ನೈತಿಕತೆಯ ಶಕ್ತಿಯೊಂದಿಗೆ ಸಾಗಬೇಕು. ಗೆದ್ದ ಅಭ್ಯರ್ಥಿ/ಸರ್ಕಾರ ಜನರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುವ ಬದ್ಧತೆಯನ್ನೂ ಪ್ರದರ್ಶಿಸಲಿ.