ಕರೊನಾ ಸೋಂಕಿನ ಹಾವಳಿ ಜಗತ್ತನ್ನೇ ಸಂಕಷ್ಟಕ್ಕೆ ದೂಡಿದೆ. ಕರೊನಾಪೀಡಿತರ ಸಾವಿನ ಪ್ರಮಾಣ ನಿಯಂತ್ರಿಸುವ ಜತೆಗೆ ಸೋಂಕಿತರ ಪ್ರಮಾಣ ತಗ್ಗಿಸುವ ಬಗ್ಗೆ ಹಲವು ದೇಶಗಳು ತಲೆಕೆಡಿಸಿಕೊಂಡಿವೆ. ಇಂಥ ಸಂಕಷ್ಟದ ಹೊತ್ತಲ್ಲಿ ಸೈಬರ್ ಅಪರಾಧಗಳು, ಹಣಕಾಸು ಅಕ್ರಮಗಳು ಹೆಚ್ಚುತ್ತಿರುವುದು ಆತಂಕದ ವಿಚಾರ. ಕರೊನಾ ಪರಿಸ್ಥಿತಿಯನ್ನು ಸೈಬರ್ ದುರುಳರು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದು, ಬೇರೆ ಬೇರೆ ಹೆಸರಲ್ಲಿ ಜನರನ್ನು ವಂಚಿಸುತ್ತಿದ್ದಾರೆ. ದೇಶದಲ್ಲಿ 2020 ಜನವರಿಯಿಂದ ಏಪ್ರಿಲ್ ಅಂತ್ಯದವರೆಗೆ 16 ಲಕ್ಷ ಸೈಬರ್ ವಂಚನೆ ಪ್ರಕರಣಗಳು ವರದಿಯಾಗಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ.
ಮಾಹಿತಿ-ತಂತ್ರಜ್ಞಾನದ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಪ್ರಸಕ್ತ ಸೈಬರ್ ಅಪರಾಧಗಳ ಕುಖ್ಯಾತಿಗೆ ಸುದ್ದಿಯಾಗುತ್ತಿದೆ. ಬೆಂಗಳೂರಿನಲ್ಲಿ ಸೈಬರ್ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚಿರುವುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕರೊನಾಗೆ ಚಿಕಿತ್ಸೆ, ಆರೋಗ್ಯ ವಿಮೆ, ಉದ್ಯೋಗಾವಕಾಶ, ದೇಣಿಗೆ ಸಂಗ್ರಹಿಸುವ ಟ್ರಸ್ಟ್ಗಳ ಹೆಸರಿನಲ್ಲಿ ಸೈಬರ್ ವಂಚಕರು ಜನರನ್ನು ಗುರಿಯಾಗಿಸುತ್ತಿದ್ದಾರೆ. ಮತ್ತೊಂದೆಡೆ, ಇತರ ಅಪರಾಧ ಪ್ರಕರಣಗಳೂ ಕರೊನಾ ಅವಧಿಯಲ್ಲಿ ಜಾಸ್ತಿ ಆಗಿರುವುದರಿಂದ, ಪೊಲೀಸ್ ವ್ಯವಸ್ಥೆ ಮೇಲಿನ ಒತ್ತಡ ಹೆಚ್ಚಿದೆ. ಸರಗಳ್ಳತನ, ದರೋಡೆಯಂಥ ಪ್ರಕರಣಗಳು ಹೆಚ್ಚುತ್ತಿದ್ದು, ತಪ್ಪಿತಸ್ಥರ ಪತ್ತೆಗೆ ಪೊಲೀಸರು ಹರಸಾಹಸ ಪಡುವಂತಾಗಿದೆ. ಅಲ್ಲದೆ, ಕರೊನಾ ವಿರುದ್ಧದ ಹೋರಾಟದಲ್ಲಿ ಪೊಲೀಸರೂ ಮುಂಚೂಣಿಯಲ್ಲಿ ಇರುವುದರಿಂದ, ನೂರಾರು ಸಿಬ್ಬಂದಿ ಸೋಂಕಿಗೆ ಒಳಗಾಗಿದ್ದಾರೆ.
ಪರಿಸ್ಥಿತಿ ಸವಾಲಿನಿಂದ ಕೂಡಿರುವಾಗ ಸೈಬರ್ ಅಪರಾಧಗಳ ತನಿಖೆಯೂ ಪೊಲೀಸರಿಗೆ ಕಾರ್ಯಭಾರ ಹೆಚ್ಚಿಸಿದೆ. ಈ ಎಲ್ಲ ಸಂಗತಿಗಳನ್ನು ಅವಲೋಕಿಸಿಯೇ ರಾಜ್ಯ ಸರ್ಕಾರ ಪ್ರಮುಖ ನಿರ್ಣಯವೊಂದನ್ನು ತಳೆದಿದ್ದು, ಸೈಬರ್ ಅಪರಾಧ ತಡೆಗೆ ಪರಿಣತರ ತಂಡ ರಚನೆಗೆ ಮುಂದಾಗಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಈ ಮಾಹಿತಿಯನ್ನು ಒದಗಿಸುತ್ತ, ‘ರಾಜ್ಯದಲ್ಲಿ ಸಿಇಎನ್ ಪೊಲೀಸ್ ಠಾಣೆಗಳಿಗೆ ಪರಿಣತ ತಂತ್ರಜ್ಞರನ್ನು ನೇಮಿಸಿಕೊಂಡು ಸೈಬರ್ ಅಪರಾಧಕ್ಕೆ ನಿಯಂತ್ರಣ ಹೇರಲಾಗುವುದು. ಈ ನೇಮಕಾತಿ ಶೀಘ್ರದಲ್ಲೇ ನಡೆಸಲಾಗುವುದು’ ಎಂದು ಹೇಳಿದ್ದಾರೆ. ಅಲ್ಲದೆ, ಸೈಬರ್ ಕಳ್ಳರು ಅಮಾಯಕರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿರುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಮುಖ್ಯಸ್ಥರೊಂದಿಗೆ ಆಗಸ್ಟ್ ಮೊದಲ ವಾರದಲ್ಲಿ ಸಭೆ ನಡೆಸಿ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಗ್ರಾಹಕರ ಹಿತ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದೂ ಬೊಮ್ಮಾಯಿ ತಿಳಿಸಿದ್ದಾರೆ.
ಇಂಥ ಕ್ರಮಗಳ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಿದೆ. ಸೈಬರ್ ಅಪರಾಧಗಳನ್ನು ಭೇದಿಸಲು ತಂತ್ರಜ್ಞರ ಅವಶ್ಯಕತೆ ಇದೆ. ನುರಿತ ತಂತ್ರಜ್ಞರೇ ಕಠಿಣ ಪ್ರಕರಣಗಳನ್ನು ಭೇದಿಸಬಲ್ಲರು. ಮಾತ್ರವಲ್ಲ, ಸೈಬರ್ ಸುರಕ್ಷೆಯ ನಿಟ್ಟಿನಲ್ಲೂ ಜನರಲ್ಲಿ ಅರಿವು ಮೂಡಿಸಬಲ್ಲರು. ಸೈಬರ್ ಕಳ್ಳರು ವಂಚನೆಗೆ ಹೊಸ ಹೊಸ ಉಪಾಯಗಳ ಮೊರೆ ಹೋಗುತ್ತಿದ್ದರೆ, ತಂತ್ರಜ್ಞರ ಬಲದಿಂದ ಪೊಲೀಸ್ ವ್ಯವಸ್ಥೆಯೂ ಪರಿಣಾಮಕಾರಿ ಮಾರ್ಗವನ್ನು ಶೋಧಿಸಿ, ತಪ್ಪಿತಸ್ಥರ ಪತ್ತೆಗೆ ಮುಂದಾಗಬೇಕಿದೆ. ಒಟ್ಟಾರೆ, ಸಾಮಾನ್ಯ ಜನರು ಕೂಡ ಮುಂಜಾಗ್ರತೆ ವಹಿಸಬೇಕು, ಸರ್ಕಾರ ಸೈಬರ್ ಅಪರಾಧಗಳನ್ನು ತಗ್ಗಿಸಲು ಕಠಿಣ ಕ್ರಮಗಳನ್ನು ಸೂಕ್ತವಾಗಿ ಅನುಷ್ಠಾನಕ್ಕೆ ತರಬೇಕು.